ಕ.ಪ್ರ. ವಾರ್ತೆ ಬೆಂಗಳೂರು ಮೇ 11
ವೈದ್ಯ ಸ್ನಾತಕೋತ್ತರ ಹಾಗೂ ಪದವಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿರುವ ದೇಶದ ಒಟ್ಟು 8.90 ಲಕ್ಷ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ನೀಟ್ ಪರೀಕ್ಷೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಇಂದು, ನಾಳೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಳೆದ 3 ತಿಂಗಳಿಂದ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ.
ಒಂದೆಡೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ಆದೇಶಿಸಿದಂತೆ ಜುಲೈ 31ರೊಳಗೆ ದೇಶದ ಎಲ್ಲ ಎಂಜಿನಿಯರಿಂಗ್ ಹಾಗೂ ವೈದ್ಯ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಮುಗಿಸಬೇಕು.
ಅದೇ ರೀತಿ ಮೇ 31ರೊಳಗೆ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಅಂತ್ಯವಾಗಬೇಕು. ಆದರೆ ಕೋರ್ಟ್ ಮೂಲಗಳ ಪ್ರಕಾರ ನೀಟ್ ಕುರಿತಂತೆ ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶ ಬರುವುದೇ ಜು.2ರ ಬಳಿಕ.
ಇದರರ್ಥ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ವಿಳಂಬದಿಂದಲೇ ಪಾಲಿಸುವುದು ಕಷ್ಟಸಾಧ್ಯವಾಗಲಿದೆ. ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆಯನ್ನು ಮುಗಿಸಲು ಸಾಧ್ಯವೇ ಇಲ್ಲ, ಇನ್ನು ಪದವಿ ಕೋರ್ಸ್‌ಗಳ ಪ್ರಕ್ರಿಯೆ ಮುಗಿಸಲು ಹರಸಾಹಸಪಡಬೇಕಿದೆ.
ಪ್ರಕರಣದ ಪ್ರಾರಂಭಿಕ ಹಂತದಲ್ಲಿ ಸರ್ಕಾರ ವಿಳಂಬ ಧೋರಣೆ ತಾಳಿತ್ತು, ಇದರ ಪರಿಣಾಮವೇ ಈಗ ಜುಲೈ ಮೊದಲ ವಾರದಲ್ಲಿ ತೀರ್ಪು ಬಂದರೆ ಖುಷಿಪಡಬೇಕಾದ ಪರಿಸ್ಥಿತಿ ಎದುರಾಗಿದೆ.
ಅರ್ಥವಾಗುತ್ತಿಲ್ಲ ಧೋರಣೆ: ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಯಾವುದೇ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ. ರಾಜ್ಯ ಸರ್ಕಾರ ಹಾಗೂ ವಿದ್ಯಾರ್ಥಿಗಳು ತಮಗಿಷ್ಟವಾದ ಪರೀಕ್ಷೆ ಬರೆಯಬಹುದು. ಆದರೆ ವೈದ್ಯಕೀಯ ಕೋರ್ಸ್‌ಗೆ ಸಂಬಂಧಿಸಿ ಪ್ರವೇಶ ಪರೀಕ್ಷೆಯ ತೀರ್ಪು ಪ್ರಕಟಿಸಬಾರದು ಎಂದು ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಆದರೆ ಈ ಅಂಶವನ್ನು ಸರ್ಕಾರ ಒಪ್ಪಿಕೊಂಡು ಸುಮ್ಮನೇ ಕೂತಿದೆ. ಕೋರ್ಟ್ ಆದೇಶವನ್ನು ಸೂಚ್ಯವಾಗಿ ಗಮನಿಸಿದರೇ ಒಂದಂಶ ಸ್ಪಷ್ಟವಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಯಾವುದೇ ಪ್ರವೇಶ ಪರೀಕ್ಷೆಯನ್ನು ಕಡ್ಡಾಯಗೊಳಿಸಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಆಯಾ ರಾಜ್ಯ ನಡೆಸುವ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಬೆರಳೆಣಿಕೆಯ ವಿದ್ಯಾರ್ಥಿಗಳು ಎಂಸಿಐ ನಡೆಸುವ ನೀಟ್ ಪರೀಕ್ಷೆಗೆ ಕೂತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ನೀಟ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಸಾಧ್ಯವೇ ಇಲ್ಲ. ಈ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಯಾವೊಂದು ರಾಜ್ಯ ಸರ್ಕಾರ ಅಥವಾ ಶಿಕ್ಷಣ ಸಂಸ್ಥೆಗಳು ಪ್ರಶ್ನಿಸದೇ ಇರುವುದು ಶೋಚನೀಯ ವಿಚಾರ.
ಪ್ರಿಯಾ ಗುಪ್ತಾ ಪ್ರಕರಣದಲ್ಲಿ ಇದೇ ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶಿ ಸೂತ್ರ ಹಾಗೂ ಆದೇಶದ ಪ್ರಕಾರ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪಕ್ರಿಯೆ ಮೇ 31 ಹಾಗೂ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಜು.31ರೊಳಗೆ ಅಂತ್ಯವಾಗಬೇಕು.
ದೇಶದಲ್ಲಿನ 8.90 ಲಕ್ಷ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾನೂನು ಪ್ರಕಾರ ಹೆಜ್ಜೆ ಇಡುವ ಜಾಣ್ಮೆಯನ್ನು ಸರ್ಕಾರಗಳು ತೋರಬಹುದಿತ್ತು. ಯಾವುದೇ ಕಾರಣಕ್ಕೂ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ನೀಟ್ ಪರೀಕ್ಷೆ ಕಡ್ಡಾಯವಾಗದೇ ಇರುವಾಗ ಈ ಗೊಂದಲದ ಅನಿವಾರ್ಯತೆ ಏನಿದೆ?
ಮೇ 27ಕ್ಕೆ ಸಿಇಟಿ ಫಲಿತಾಂಶ
ಕಳೆದ ಮೇ 1 ಮತ್ತು 2ರಂದು ನಡೆದ ರಾಜ್ಯ ಸರ್ಕಾರದ ಸಿಇಟಿ ಪರೀಕ್ಷೆಯ ಫಲಿತಾಂಶ ಮೇ 27ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉನ್ನತ ಮೂಲಗಳು ತಿಳಿಸಿವೆ. ಆದರೆ ಎಂದಿನಂತೆ ಈ ವರ್ಷ ಎಂಜಿನಿಯರಿಂಗ್ ಹಾಗೂ ವೈದ್ಯ ಕೋರ್ಸ್‌ಗಳ ರ್ಯಾಂಗ್ ಪ್ರಕಟವಾಗುವುದಿಲ್ಲ. ಬದಲಾಗಿ ಎಂಜಿನಿಯರಿಂಗ್ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಬಯಸುತ್ತಿರುವ ವಿದ್ಯಾರ್ಥಿಗಳ ರ್ಯಾಂಕ್‌ಗಳನ್ನು ಮಾತ್ರ ಘೋಷಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ವೈದ್ಯ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟವಾಗಲಿದೆ. ಜೀವಶಾಸ್ತ್ರ ಪರೀಕ್ಷೆಗೆ 1,10,948, ಭೌತಶಾಸ್ತ್ರ 1,35,412, ರಸಾಯನಶಾಸ್ತ್ರ 1,35,410 ಹಾಗೂ ಗಣಿತಕ್ಕೆ 1,22,078 ವಿದ್ಯಾರ್ಥಿಗಳು ಹಾಜರಾಗಿದ್ದರು. ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಮಾದಗಳ ಕುರಿತಂತೆ ಪ್ರಾಧಿಕಾರವು ಇನ್ನಷ್ಟೇ ತನ್ನ ನಿಲುವು ತಿಳಿಸಬೇಕಿದೆ.
ಮೇ 29ರಿಂದ ಆನ್‌ಲೈನ್ ಕೌನ್ಸೆಲಿಂಗ್
ಈ ಶೈ7ಣಿಕ ವರ್ಷದಲ್ಲಿಯೂ ಆನ್‌ಲೈನ್ ಕೌನ್ಸೆಲಿಂಗ್ ಮುಂದುವರೆಯಲಿದ್ದು, ರಾಜ್ಯದ 13 ಕೇಂದ್ರಗಳಲ್ಲಿ ಮೇ 29ರಿಂದ ಪ್ರಾರಂಭವಾಗಲಿದೆ. ಮೇ 29ರಂದು 13 ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದೆ. ಜೂ.2ರಿಂದ ಆಪ್ಷನ್ ಎಂಟ್ರಿ ನಡೆಯಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯಿಯು ನಿಯಮಾನುರಾ ಜು.31ರೊಳಗೆ ಮುಗಿಯಲಿದೆ.
ರಾಜೀವ ಹೆಗಡೆ