ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 13
ಬಿಪಿಎಲ್ ಕಾರ್ಡ್ದಾರರಿಗೆ 1ರಂತೆ 30 ಕೆ.ಜಿ. ಅಕ್ಕಿ, ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ 4ಕ್ಕೆ ಹೆಚ್ಚಳ, ವಸತಿ ಯೋಜನೆಗಳ ಸಹಾಯಧನ 45 ಸಾವಿರದಷ್ಟು ಏರಿಕೆ, ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಸಾಲ ಮತ್ತು ಬಡ್ಡಿ ಮನ್ನಾ, ಭಾಗ್ಯಜ್ಯೋತಿ ಫಲಾನುಭವಿಗಳ ಬಾಕಿ ಮನ್ನಾ ಮಾಡಿ ಮತ್ತೆ ವಿದ್ಯುತ್ ಸಂಪರ್ಕ....
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು ಬಡವರು, ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರ ಪಾಲಿಗೆ ಕೊಡುಗೈ ದಾನಿಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳನ್ನು ಅಧಿಕಾರ ಸ್ವೀಕರಿಸುತ್ತಿದ್ದಂತೆ ಈಡೇರಿಸುವ ಪ್ರಯತ್ನ ಮಾಡಿದ್ದಾರೆ.
ಸೋಮವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು, ತಕ್ಷಣವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ಸರ್ಕಾರದ ಈ ನಿರ್ಧಾರಗಳಿಂದಾಗಿ ರಾಜ್ಯಾದ್ಯಂತ ಸುಮಾರು 1.38 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ಒಟ್ಟು 4409 ಕೋಟಿ ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಹೆಚ್ಚುವರಿ ಹೊರೆಯನ್ನು ನಿಭಾಯಿಸಲು ಸೋರಿಕೆ ತಡೆಗಟ್ಟಲಾಗುವುದು. ಜತೆಗೆ ತೆರಿಗೆ ಸಂಗ್ರಹ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡಲಾಗುವುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
1ರಂತೆ 30 ಕೆ.ಜಿ. ಅಕ್ಕಿ: ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ 1ರಂತೆ 30 ಕೆಜಿ ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ.
ಜೂನ್ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದೆ. ಇದರ ಜತೆಗೆ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೂನಿಟ್ ಪದ್ಧತಿಯನ್ನು ರದ್ದುಗೊಳಿಸಲಾಗಿದೆ. ಅಂದರೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಡಿತರ ಇಲ್ಲ. ಅದಕ್ಕಿಂತ ಹೆಚ್ಚು ವಯಸ್ಸಿನ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ ಅಥವಾ ಗರಿಷ್ಠ 20 ಕೆ.ಜಿ. ಅಕ್ಕಿ ವಿತರಿಸುವ ಯೂನಿಟ್ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಎಲ್ಲಾ ಕಾರ್ಡುಗಳಿಗೂ 30 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಸರ್ಕಾರದ ಈ ಯೋಜನೆಯಿಂದ 98.17 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 460 ಕೋಟಿ ಹೊರೆಯಾಗಲಿದೆ ಎಂದು ವಿವರಿಸಿದರು.
ಲೀಟರ್ ಹಾಲಿಗೆ 4 ಪ್ರೋತ್ಸಾಹಧನ: ರಾಜ್ಯದ ಹಾಲು ಉತ್ಪಾದಕರಿಗೆ ಬಿಜೆಪಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 2 ಪ್ರೋತ್ಸಾಹಧನ ಘೋಷಿಸಿತ್ತು. ಈ ಪ್ರೋತ್ಸಾಹಧನದ ಮೊತ್ತವನ್ನು 2ರಿಂದ 4ಕ್ಕೆ ಹೆಚ್ಚಿಸಲಾಗಿದ್ದು, ತಕ್ಷಣದಿಂದಲೇ ಯೋಜನೆ ಜಾರಿಗೆ ಬರಲಿದೆ. ಇದರಿಂದಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳು ನೀಡುವ ಹಾಲಿನ ದರದ ಜತೆ ಉತ್ಪಾದಕರಿಗೆ ಹೆಚ್ಚುವರಿ 4 ಲಭ್ಯವಾಗುತ್ತದೆ. ಇದರಿಂದ 7.50 ಲಕ್ಷ ಉತ್ಪಾದಕರಿಗೆ ಅನುಕೂಲವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 496 ಕೋಟಿ ಹೊರೆಯಾಗುತ್ತದೆ.
ವಸತಿ ಯೋಜನೆ ಸಹಾಯಧನ ಹೆಚ್ಚಳ: ವಿವಿಧ ವಸತಿ ಯೋಜನೆಗಳಿಗೆ ಸರ್ಕಾರದ ನೀಡುವ ಸಹಾಯಧನ ಮೊತ್ತವನ್ನು 45 ಸಾವಿರದಷ್ಟು (75 ಸಾವಿರದಿಂದ 1.20 ಲಕ್ಷ) ಹೆಚ್ಚಿಸಲಾಗಿದ್ದು, ಪ್ರತಿ ಮನೆಯ ಯೂನಿಟ್ ವೆಚ್ಚವನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದುವರೆಗೆ ಯೂನಿಟ್ ಕಾಸ್ಟ್ 1.05 ಲಕ್ಷ ಇದ್ದು, ಈ ಪೈಕಿ ರಾಜ್ಯ ಸರ್ಕಾರ 75 ಸಾವಿರ ಸಹಾಯಧನ ನೀಡುತ್ತಿತ್ತು. ಇದೀಗ ಯೂನಿಟ್ ವೆಚ್ಚವನ್ನು 1.50ಗೆ ಹೆಚ್ಚಿಸಲಾಗಿದೆ. ಆದರೆ, ಫಲಾನುಭವಿಗಳು ಹಿಂದಿನಂತೆ 30 ಸಾವಿರ ಮಾತ್ರ ಭರಿಸಬೇಕು. ಉಳಿದ ಮೊತ್ತವನ್ನು ಅಂದರೆ, 1.20 ಲಕ್ಷವನ್ನು ಸರ್ಕಾರ ಸಹಾಯಧನ ರೂಪದಲ್ಲಿ ನೀಡುತ್ತದೆ.
ರಾಜ್ಯ ಸರ್ಕಾರದ ಬಸವ ವಸತಿ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೆ ಪ್ರತಿ ಮನೆಗೆ 75 ಸಾವಿರ ನೀಡುತ್ತಿತ್ತು. ಅದೇ ರೀತಿ ಇಂದಿರಾ ಆವಾಸ್ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ಮನೆಗೆ 75 ಸಾವಿರ ನೀಡುತ್ತಿತ್ತು. ಇದೀಗ ಬಸವ ವಸತಿ ಯೋಜನೆಯಡಿ 1.20 ಲಕ್ಷವನ್ನು ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ನೀಡುತ್ತದೆ.
ಅದೇ ರೀತಿ ಇಂದಿರಾ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರದ 75 ಸಾವಿರದ ಜತೆಗೆ ರಾಜ್ಯ ಸರ್ಕಾರವೂ 45 ಸಾವಿರವನ್ನು ಭರಿಸಲಿದೆ. ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಬಡವರಿಗೆ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1960 ಕೋಟಿ ಹೊರೆಯಾಗುತ್ತದೆ. ರಾಜ್ಯವನ್ನು ಗುಡಿಸಲು ಮುಕ್ತಗೊಳಿಸಬೇಕಾದರೆ ಇನ್ನೂ 12 ಲಕ್ಷ ಮಂದಿಗೆ ಮನೆ ನೀಡಬೇಕಿದೆ. ಅದರಂತೆ ವಿವಿಧ ವಸತಿ ಯೋಜನೆಯಡಿ ವಾರ್ಷಿಕ 3 ಲಕ್ಷ ಮನೆಗಳನ್ನು ನಿರ್ಮಿಸುವ ಮೂಲಕ ಮುಂದಿನ ಐದು ವರ್ಷದಲ್ಲಿ ರಾಜ್ಯವನ್ನು ಗುಡಿಸಲು ಮುಕ್ತವಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಎಸ್ಸಿ, ಎಸ್ಟಿ, ಓಬಿಸಿ ಸಾಲ ಮನ್ನಾ: ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದಿಂದ ಆ ಸಮುದಾಯದ ಫಲಾನುಭವಿಗಳಿಗೆ ಇದುವರೆಗೆ ನೀಡಿದ ಎಲ್ಲಾ ಸಾಲ ಮತ್ತು ಅದರ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದೆ. ಈ ನಿಗಮದಿಂದ 1.87 ಲಕ್ಷ ಫಲಾನುಭವಿಗಳಿಗೆ 186 ಕೋಟಿ ಸಾಲ ನೀಡಿದ್ದು, ಬಡ್ಡಿ (91.72 ಕೋಟಿ) ಸೇರಿ ಇದರ ಮೊತ್ತ 277.72 ಕೋಟಿಯಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ 63 ಕೋಟಿ ಸಾಲ ಮತ್ತು 5.69 ಕೋಟಿ ಬಡ್ಡಿ, ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗದ 4.97 ಲಕ್ಷ ಫಲಾನುಭವಿಗಳಿಗೆ ನೀಡಿರುವ 514.26 ಕೋಟಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 3 ಲಕ್ಷ ಫಲಾನುಭವಿಗಳಿಗೆ ನೀಡಿರುವ 362 ಕೋಟಿ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಭಾಗ್ಯಜ್ಯೋತಿ ಬಾಕಿ ಮನ್ನಾ: ಭಾಗ್ಯಜ್ಯೋತಿ ಯೋಜನೆ ಫಲಾನುಭವಿಗಳು ವಿವಿಧ ಎಸ್ಕಾಂಗಳಿಗೆ ನೀಡಬೇಕಿದ್ದ ಸುಮಾರು 268 ಕೋಟಿ ಬಾಕಿಯನ್ನು ಮನ್ನಾ ಮಾಡಲಾಗಿದೆ. ಜತೆಗೆ ಬಾಕಿ ಪಾವತಿಸದ ಕಾರಣ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ತಕ್ಷಣದಿಂದಲೇ ಮತ್ತೆ ಕಲ್ಪಿಸಲಾಗುವುದು.
ಭಾಗ್ಯಜ್ಯೋತಿ ಯೋಜನೆಯಡಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ 18 ಯೂನಿಟ್ ವಿದ್ಯುತ್ತನ್ನು ಸರ್ಕಾರ ಉಚಿತವಾಗಿ ನೀಡುತ್ತಿತ್ತು. ಆದರೆ, ಅನೇಕರು ಹೆಚ್ಚುವರಿ ವಿದ್ಯುತ್ ಬಳಸಿದ್ದರು. ಇದರಿಂದ ಭಾಗ್ಯಜ್ಯೋತಿ ಫಲಾನುಭವಿಗಳು ಎಸ್ಕಾಂಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿತ್ತು. ಆದರೆ, ಶುಲ್ಕ ಪಾವತಿಸದ ಕಾರಣ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದೀಗ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಜತೆಗೆ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಇದರಿಂದ ಸುಮಾರು 20 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ 268 ಕೋಟಿ ಹೊರೆಯಾಗುತ್ತದೆ ಎಂದು ಹೇಳಿದರು.