ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಸರೆ ಜಾಗ ಚೂರು, ಬೇಡ ಅಂದ್ರು ಸೂರು

Vishwanath S
Updated On : 14 May 2013, 10:43 am

ಕನ್ನಡಪ್ರಭ ವಾರ್ತೆ ,   ಗದಗ ,   ಮೇ 14
ಮಲಪ್ರಭಾ ಮತ್ತು ಬೆಣ್ಣಿಹಳ್ಳದ ಪ್ರವಾಹದಿಂದ ಪದೇ ಪದೆ ತೊಂದರೆ ಅನುಭವಿಸುತ್ತಿದ್ದ ಜಿಲ್ಲೆಯ 14 ಗ್ರಾಮಗಳ ಸ್ಥಳಾಂತರಕ್ಕೆ ಈ ಹಿಂದಿನ ಸರ್ಕಾರ ಆಸರೆ ಮನೆಗಳನ್ನು ನಿರ್ಮಿಸಿದೆ. ಆದರೆ, ಮನೆಗಳತ್ತ ಫಲಾನುಭವಿಗಳು ಮುಖ ಮಾಡದ ಹಿನ್ನೆಲೆಯಲ್ಲಿ ಬಹುತೇಕ ಮನೆಗಳು ಖಾಲಿ ಬಿದ್ದಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಫಲತೆಯ ಹಾದಿಯಲ್ಲಿದೆ.
ಸರ್ಕಾರ ಆಸರೆ ಯೋಜನೆಯಡಿ ಜಿಲ್ಲೆಯ 649 ಎಕರೆ ಪ್ರದೇಶದಲ್ಲಿ 6,795 ಮನೆಗಳನ್ನು ನಿರ್ಮಿಸಿದೆ. ರಾಜೀವಗಾಂಧಿ ವಸತಿ ನಿಗಮ, ನಿರ್ಮಿತಿ ಕೇಂದ್ರಗಳು ಹಾಗೂ ವಿವಿಧ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಅಲ್ಲದೇ ನೂತನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ 12.23 ಕೋಟಿ ಹಾಗೂ ಅಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ 12.64 ಕೋಟಿ ವ್ಯಯ ಮಾಡಿದ್ದು, ನಿರ್ಮಾಣವಾಗಿರುವ ಮನೆಗಳನ್ನು ಹಸ್ತಾಂತರಿಸಲಾಗಿದೆ.
ಹಂಚಿಕೆಯಾಗಿರುವ 5,948 ಮನೆಗಳಲ್ಲಿ ಇದುವರೆಗೂ 1247 ಕುಟುಂಬಗಳು ಮಾತ್ರ ವಾಸವಾಗಿದ್ದು, ಇನ್ನುಳಿದ 4701 ಮನೆಗಳಿಗೆ ಯಾರೂ ಬಂದಿಲ್ಲ.          
ಪ್ರತಿಯೊಂದು ಗ್ರಾಮದಲ್ಲಿಯೂ ಮನೆ ಪಡೆಯುವ ಅರ್ಹತೆ ಇರುವ ಎಲ್ಲರಿಗೂ ಮನೆಗಳ ಬೀಗದ ಕೈ ನೀಡಲಾಗಿದೆ. ಕೆಲವಾರು ಗ್ರಾಮಗಳಲ್ಲಿ ಎಲ್ಲರಿಗೂ ಮನೆಗಳ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಮನೆಗಳನ್ನು ಪಡೆದುಕೊಂಡವರು ಮಾತ್ರ ಆಸರೆ ಮನೆಗಳತ್ತ ಮುಖ ಮಾಡುತ್ತಿಲ್ಲ.  ಆಸರೆ ಯೋಜನೆ ಮನೆ ನಿರ್ಮಾಣದ ಸಂದರ್ಭದಲ್ಲಿಯೇ ಮನೆಗಳು ಸಣ್ಣದಾಗುತ್ತವೆ ಎನ್ನುವ ಕೂಗು ಬಲವಾಗಿ ಕೇಳಿ ಬಂದಿತ್ತು. ಆದರೆ, ಹಿಂದಿನ ಸರ್ಕಾರ ರಾಜ್ಯಾದ್ಯಂತ ಒಂದೇ ಮಾದರಿ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿ, ವಿವಿಧ ಜಿಲ್ಲೆಗಳ ನಿರ್ಮಿತಿ ಕೇಂದ್ರ ಹಾಗೂ ರಾಜೀವಗಾಂಧಿ ವಸತಿ ನಿಗಮಕ್ಕೆ ವಹಿಸಿತ್ತು. ಜಿಲ್ಲೆಯ 14 ಗ್ರಾಮಗಳಲ್ಲಿ ಪ್ರವಾಹದಿಂದ ತೊಂದರೆ ಅನುಭವಿಸುತ್ತಿದ್ದವರು ಹೆಚ್ಚಾಗಿ ಕೃಷಿಕರಾಗಿದ್ದಾರೆ. ನಿರ್ಮಿಸಿದ ಮನೆಗಳ ಸುತ್ತಲೂ ಸ್ಥಳಾವಕಾಶವೇ ಇಲ್ಲವಾಗಿರುವುದರಿಂದ ಎತ್ತುಗಳು, ಚಕ್ಕಡಿ, ಕೃಷಿ ಪರಿಕರಗಳನ್ನು ಸಂಗ್ರಹಿಸಿಕೊಳ್ಳಲು ಹಾಗೂ ಮನೆಗಳಲ್ಲಿ ವರ್ಷಪೂರ್ತಿ ಬೇಕಾದ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅವಶ್ಯಕ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಫಲಾನುಭವಿಗಳು ಈ ನೂತನ ಗ್ರಾಮಗಳತ್ತ ಬರುತ್ತಿಲ್ಲ.
ಮೂಲ ಗ್ರಾಮಗಳಿಂದ ದೂರ: ಸದ್ಯ ಆಸರೆ ಯೋಜನೆಯಡಿ ನಿರ್ಮಾಣವಾಗಿರುವ ಎಲ್ಲ ನೂತನ ಗ್ರಾಮಗಳು ಮೂಲ ಗ್ರಾಮಗಳಿಂದ ಬಹು ದೂರದಲ್ಲಿವೆ. ಅದರಲ್ಲಿಯೂ ಅಮರಗೋಳ ಹಾಗೂ ಕುರುವಿನಕೊಪ್ಪ ಗ್ರಾಮಗಳ ನಿರಾಶ್ರಿತರು ಹೊಸ ಗ್ರಾಮಗಳಿಂದ ತಮ್ಮ ಹೊಲಗಳಿಗೆ ಹೋಗ ಬೇಕಾದಲ್ಲಿ ಪ್ರತಿ ದಿನವೂ ನಾಲ್ಕೈದು ಕಿಮೀ ಕ್ರಮಿಸಬೇಕಿದೆ. ಪ್ರವಾಹದಲ್ಲಿ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಕೆಲವರು ಹೊಸ ಗ್ರಾಮಗಳತ್ತ ಮೊದ ಮೊದಲು ಬಂದಿದ್ದರೂ, ಇಲ್ಲಿ ಹೆಚ್ಚಿನ ಸೌಲಭ್ಯ ಇರದಿರುವುದರಿಂದ ಮತ್ತು ನಿತ್ಯ ಕೃಷಿ ಕಾರ್ಯಕ್ಕಾಗಿ ದೂರ ಕ್ರಮಿಸಲು ಕಷ್ಟವಾಗಿ, ಪ್ರವಾಹದ ವೇಳೆಯಲ್ಲಿ ಬಿದ್ದಿರುವ ಮನೆಯನ್ನೇ ಮತ್ತೆ ದುರಸ್ತಿ ಮಾಡಿಕೊಂಡು ಹಳೆಯ ಗ್ರಾಮಗಳಲ್ಲಿಯೇ ವಾಸಿಸುತ್ತಿದ್ದಾರೆ.
ಮಳೆಯೇ ಇಲ್ಲ
2007 ಹಾಗೂ 2009ರ ನಂತರ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತಲೂ ಕಡಿಮೆ ಮಳೆಯಾಗಿದ್ದು, ನದಿಗೆ ಪ್ರವಾಹ ಬರುವುದಿರಲಿ, ನದಿಯ ಒಡಲಲ್ಲಿಯೇ ಕುಡಿಯಲು ಹನಿ ನೀರಿಲ್ಲದೇ ನದಿ ಸಂಪೂರ್ಣ ಒಣಗಿ ಹೋಗಿದೆ. ಹಾಗಾಗಿ ಜನರು ತಮ್ಮ ಹಳೆಯ ಗ್ರಾಮದಲ್ಲಿಯೇ ಮೊದಲಿನಂತೆಯೇ ಜೀವನ ನಡೆಸುತ್ತಿದ್ದಾರೆ. ಆಸರೆ ಮನೆಗಳತ್ತ ಅವರು ಗಮನವನ್ನೇ ನೀಡಿಲ್ಲ. ಹಾಗಾಗಿ ಸರ್ಕಾರ ಕೋಟ್ಯಂತರ ವೆಚ್ಚದಲ್ಲಿ ಕೈಗೆತ್ತಿಕೊಂಡ ಆಸರೆ ಯೋಜನೆ ಗದಗ ಜಿಲ್ಲೆಯಲ್ಲಿ ಸಂಪೂರ್ಣ ನೆಲಕಚ್ಚಿದೆ.
ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಕೆಲವು ವೈಯಕ್ತಿಕ ಕಾರಣಗಳಿಂದ ರಜೆಯಲ್ಲಿದ್ದೇನೆ. ರಜೆ ಮುಗಿಸಿ ಬಂದ ನಂತರ ಪರಿಶೀಲಿಸಿ, ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ.
- ಎಸ್.ಟಿ. ಅಂಜನ್‌ಕುಮಾರ, ಡಿಸಿ, ಗದಗ

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement