ನಾನು ಶುದ್ಧ ಹಸ್ತ: ಡಿಕೆಶಿ
ನವದೆಹಲಿ: ನನ್ನ ವಿರುದ್ಧ ಯಾವ ಆರೋಪಗಳೂ ಇಲ್ಲ. ನನ್ನ ವಿರುದ್ಧ ಇದ್ದ ಎಲ್ಲಾ ದೂರುಗಳ ವಿಚಾರಣೆ ನಡೆದು ನಾನು ತಪ್ಪಿತಸ್ಥ ಅಲ್ಲ ಎಂದು ಸಾಬೀತಾಗಿದೆ. ನನ್ನ ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ನನ್ನ ವಿರುದ್ಧ ದೂರು ನೀಡಿದ್ದಾರೆ. ನಾನು ಯಾವುದೇ ಅಕ್ರಮ ಎಸಗಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಸಚಿವ ಸ್ಥಾನ ನೀಡಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ದೊರೆಸ್ವಾಮಿ ಅವರ ಘನತೆಗೆ ತಕ್ಕುದಲ್ಲ. ದೊರೆಸ್ವಾಮಿ ಅವರು ಪಿಜಿಆರ್ ಸಿಂಧ್ಯಾ ಅವರ ಆಪ್ತರು. ಸಿಂಧ್ಯಾ ಸೋತಿದ್ದಾರೆ. ನಾನು ಗೆದ್ದಿದ್ದೇನೆ. ಜನತೆ ನನ್ನ ಕೈಬಿಟ್ಟಿಲ್ಲ. ಹೀಗಾಗಿ ದೊರೆಸ್ವಾಮಿ ಅವರು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನನ್ನ ಕೈ ಬಿಡುವುದಿಲ್ಲ. ನಾನು ಸ್ವಚ್ಛ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತು ಎಂದರು.