ಸಚಿವಗಿರಿಗೆ ಹಿರಿ, ಕಿರಿಯರ ಕಸರತ್ತು
ನವದೆಹಲಿ: ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಸುಮಾರು ನಾಲ್ಕು ಡಜನ್ಗೂ ಹೆಚ್ಚು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ತಮಗೆ ಇಂಥದ್ದೆ ಖಾತೆ ಬೇಕೆಂಬ ಹಕ್ಕು ಮಂಡಿಸುತ್ತಿದ್ದಾರೆ. ಸಂಪುಟ ರಚನೆ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಗಳಿಗೆ ಮುಕ್ತ ಅವಕಾಶ ನೀಡಿರುವ ಮಾಹಿತಿ ಬಹುತೇಕ ನಾಯಕರಿಗೆ ಸಿಕ್ಕಿಲ್ಲ. ಹೀಗಾಗಿ ವಿವಿಧ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ.
ವಿಶೇಷ ಎಂದರೆ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಮಾಜಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ವೀರಣ್ಣ ಮತ್ತಿಕಟ್ಟಿ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹಿರಿಯ ನಾಯಕರಾದ ಟಿ.ಬಿ. ಜಯಚಂದ್ರ, ಎಸ್.ಆರ್.ಪಾಟೀಲ್, ಮೋಟಮ್ಮ, ಸಿದ್ದು ನ್ಯಾಮಗೌಡ, ಅಪ್ಪಾಜಿ ನಾಡಗೌಡ, ಅರಕಲಗೂಡು ಮಂಜು, ದಿನೇಶ್ ಗುಂಡುರಾವ್ ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಯಶವಂತ್ ಪಾಟೀಲ್, ರೋಷನ್ ಬೇಗ್, ಕೆ.ಎನ್. ರಾಜಣ್ಣ, ನರೇಂದ್ರಸ್ವಾಮಿ, ಬಸವರಾಜ ರಾಯರೆಡ್ಡಿ, ಶಿವಮೂರ್ತಿ ನಾಯಕ್, ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಹಲವು ನಾಯಕರಿದ್ದಾರೆ.
ಮೋಟಮ್ಮ ಪಟ್ಟು: ಸಂಪುಟದಲ್ಲಿ ಸ್ಥಾನ ಗ್ಯಾರಂಟಿ ಎಂದುಕೊಂಡಿರುವ ಹಿರಿಯ ನಾಯಕಿ ಮೋಟಮ್ಮ ಅವರು ತಮಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೇಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಟಿ.ಬಿ. ಜಯಚಂದ್ರ ಅವರು ತಾವು ರಾಜ್ಯದ ನೀರಾವರಿ ಸಮಸ್ಯೆಗಳ ಆಳ, ಅಗಲ ಅರಿತಿದ್ದು ಜಲಸಂಪನ್ಮೂಲ ಖಾತೆ ನೀಡಿದರೆ ಉತ್ತಮ ಸೇವೆ ಸಲ್ಲಿಸುವುದಾಗಿ ಹೇಳಿದ್ದಾರೆ. ನಾನು ಆಕಾಂಕ್ಷಿ ಅಲ್ಲ ಎಂದರೆ ಸುಳ್ಳಾಗುತ್ತೆ. ಏಳು ಬಾರಿ ಗೆದ್ದಿದ್ದೇನೆ ಎನ್ನುತ್ತಾರೆ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಎನ್. ರಾಜಣ್ಣ ಅವರಿಗೆ ಸಹಕಾರ ಖಾತೆ ಬೇಕಂತೆ. ಇನ್ನು ಹಣಕಾಸು, ಗೃಹ, ಅಬಕಾರಿ ಮತ್ತಿತರ ಖಾತೆಗಳ ಮೇಲೆ ಹಿರಿಯ ನಾಯಕರು ಕಣ್ಣಿಟ್ಟಿದ್ದಾರೆ. ಆದರೆ, ಹಣಕಾಸು ಖಾತೆಯನ್ನು ಖುದ್ದು ಮುಖ್ಯಮಂತ್ರಿಗಳೇ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.