ಜೂನ್ 3ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ
ಈ ಬಾರಿ ಮುಂಗಾರು ಮಾರುತ ವಾಡಿಕೆಗಿಂತ ಮೂರು ದಿನ ತಡವಾಗಿ ಅಂದರೆ ಜೂ.3ರಂದು ದಕ್ಷಿಣ ಕರಾವಳಿಗೆ ಕಾಲಿಡಲಿದೆ...
ನವದೆಹಲಿ: ಈ ಬಾರಿ ಮುಂಗಾರು ಮಾರುತ ವಾಡಿಕೆಗಿಂತ ಮೂರು ದಿನ ತಡವಾಗಿ ಅಂದರೆ ಜೂ.3ರಂದು ದಕ್ಷಿಣ ಕರಾವಳಿಗೆ ಕಾಲಿಡಲಿದೆ. ಬಂಗಾಳ ಕೊಲ್ಲಿಯಲ್ಲಿ ಈಗಾಗಲೇ ಮಹಾಸೇನ್ ಚಂಡಮಾರುತ ಕಾಣಿಸಿ ಕೊಂಡಿರುವುದರಿಂದ ಈ ಬಾರಿ ಮುಂಗಾರು ಮಾರುತ ವಾಡಿಕೆಗಿಂತ ತಡವಾಗಿ ಕೇರಳಕ್ಕೆ ಕಾಲಿಡುತ್ತಿದೆ ಎಂದು ಹವಾಮಾನ ಮುನ್ಸೂಚನೆ ಇಲಾಖೆ ತಿಳಿಸಿದೆ. ಆದರೆ, ದೇಶಾದ್ಯಂತ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ ಎಂದು ಹೇಳಿದೆ.
ಕಳೆದ ಬಾರಿಯೂ ವಿಳಂಬ: ನೀರಾವರಿ ಸೌಲಭ್ಯ ಇಲ್ಲದ ದೇಶದ ಶೇ.55ರಷ್ಟು ಕೃಷಿಭೂಮಿಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಬೇಕಾದರೆ ಮುಂಗಾರು ಮಳೆ ಸಕಾಲದಲ್ಲಿ ಸುರಿಯಬೇಕು. ಆದರೆ, ಕಳೆದ ಬಾರಿಯೂ ಮುಂಗಾರು ಮಾರುತ ವಾಡಿಕೆಗಿಂತ ನಾಲ್ಕು ದಿನ ವಿಳಂಬವಾಗಿ ಕೇರಳ ಪ್ರವೇಶಿಸಿತ್ತು.
ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಕಾಲಿಡುವ ಮುಂಗಾರು ಮಾರುತ ಜುಲೈ ಮಧ್ಯಾವಧಿಯಲ್ಲಿ ಇಡೀ ದೇಶವನ್ನು ಆವರಿಸುತ್ತದೆ. ಬತ್ತ, ಸೋಯಾಬೀನ್, ಹತ್ತಿ ಬೆಳೆಗಳು ಮುಂಗಾರು ಮಾರುತವನ್ನೇ ಅವಲಂಬಿಸಿವೆ.
ಎಷ್ಟು ಪ್ರಮಾಣದ ಮಳೆ ಬೇಕು?: ಈ ಬಾರಿ ಸಾಧಾರಣ ಮಳೆಯ ನಿರೀಕ್ಷೆ ಇದ್ದರೂ ದೇಶದ ಕೆಲವು ಪ್ರದೇಶಗಳು ಬರಕ್ಕೆ ಈಡಾಗುವ ಆತಂಕ ಇದೆ. ಕಳೆದ ವರ್ಷ ದಕ್ಷಿಣ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ತೀವ್ರ ಬರಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಹಿಂದೆ 2009ರಲ್ಲಿ ದೇಶಾದ್ಯಂತ ಭಾರಿ ಬರ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದರಿಂದ ಭಾರತದಲ್ಲಿ ಸಕ್ಕರೆ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ಬೆಲೆ 30 ವರ್ಷಗಳಲ್ಲೇ ಅತೀ ಹೆಚ್ಚಾಗಿತ್ತು. ಒಂದು ವೇಳೆ ವಾಡಿಕೆಗಿಂತ ಹೆಚ್ಚು ಅಂದರೆ ಸರಾಸರಿಗಿಂತ ಶೇ. 110ರಷ್ಟು ಹೆಚ್ಚು ಮಳೆ ಸುರಿದರೆ ಬತ್ತ ಮತ್ತು ಧಾನ್ಯಗಳ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಮಹಾಸೇನ್ ಎಫೆಕ್ಟ್
ಬಂಗಾಳಕೊಲ್ಲಿಯ ದಕ್ಷಿಣದಲ್ಲಿ ವಾಯುಭಾರ ಕುಸಿತದಿಂದ ಕಾಣಿಸಿಕೊಂಡಿರುವ ಮಹಾಸೇನ್ ಚಂಡಮಾರುತ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ನಲ್ಲಿ ಈಗಾಗಲೇ ಆತಂಕ ಸೃಷ್ಟಿಸಿದೆ. ಈ ಚಂಡಮಾರುತದ ಪರಿಣಾಮ ಭಾರತದ ಮುಂಗಾರು ಮಾರುತದ ಮೇಲೂ ಆಗಲಿದೆ. ಗಂಟೆಗೆ ಸುಮಾರು 90 ಕಿ.ಮೀ. ವೇಗದಲ್ಲಿ ಸಾಗುತ್ತಿರುವ ಈ ಚಂಡಮಾರುತ ಗುರುವಾರ ರಾತ್ರಿ ಬಾಂಗ್ಲಾಕರಾವಳಿಯನ್ನು ಅಪ್ಪಳಿಸಲಿದೆ. ಈ ಚಂಡಮಾರುತದಿಂದಾಗಿ ಮುಂಗಾರು ಮಾರುತದ ಪ್ರಭಾವ ಕ್ಷೀಣಿಸಿದೆ. ಇದರಿಂದಾಗಿ ಕೇರಳ ಕರಾವಳಿಗೆ ವಾಡಿಕೆಗಿಂತ ತಡವಾಗಿ ಈ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಡಿ. ಶಿವಾನಂದ ಪೈ ಮಾಹಿತಿ ನೀಡಿದ್ದಾರೆ.