ನಕ್ಸಲರು ಚುರುಕು; ಪೊಲೀಸರು ಮೌನ!
ಕ.ಪ್ರ.ವಾರ್ತೆ , ಆಗುಂಬೆ , ಮೇ 15
ಇದು ಬೇಸಿಗೆಯ ಕೊನೆ ಅವಧಿ. ಇನ್ನೇನು ಮಲೆನಾಡಿನಲ್ಲಿ ಧೋ ಎಂದು ಮಳೆ ಸುರಿಯಲಿದೆ. ಅದರಲ್ಲೂ ಮಳೆ ವಿಚಾರದಲ್ಲಿ ಆಗುಂಬೆಯಲ್ಲಿ ಕೇಳಬೇಕೆ? ಈ ಹೊತ್ತಿನಲ್ಲಿ ಮಲೆನಾಡಿನಲ್ಲಿ ಬೀಡುಬಿಟ್ಟ ನಕ್ಸಲರು ಮಾಮೂಲಿಯಂತೆ ಮುಂದಿನ ಮಳೆಗಾಲವನ್ನು ಎದುರಿಸಲು ಸಜ್ಜಾಗುತ್ತಾರೆ!?
ಕಾಡಿನಂಚಿನಲ್ಲಿರುವ ಅಡಕೆ ಬೆಳೆಗಾರರ ಮನೆಗಳಿಗೆ ಭೇಟಿ, ಹಣ ವಸೂಲಿ, ಬಟ್ಟೆ- ಆಹಾರ, ಔಷಧ ಸಂಗ್ರಹ ಸೇರಿದಂತೆ ಮುಂದಿನ 4-5 ತಿಂಗಳ ಸವಾಲಿನ ದಿನಗಳನ್ನು ಕಾಡಿನೊಳಗೆ ಎದುರಿಸುವ ನಿಟ್ಟಿನಲ್ಲಿ ಪೂರ್ವ ತಯಾರಿಯನ್ನು ಮೇನಿಂದಲೇ ಆರಂಭಿಸುತ್ತಾರೆ.
'ಕನ್ನಡಪ್ರಭ' ನಕ್ಸಲ್ ಪೀಡಿತ ಪ್ರದೇಶವಾದ ನಾಬಳ, ತಲ್ಲೂರಂಗಡಿ, ಬಿದರಗೋಡು, ಕೆಂದಾಳಬೈಲು ವ್ಯಾಪ್ತಿಯಲ್ಲಿ ಸಂಚರಿಸಿದಾಗ ಅಲ್ಲಿನ ಜನರನ್ನು ಈ ಕುರಿತು ಮಾತನಾಡಿಸಿದರೆ ಹೆದರಿ ಹೆದರಿಯೇ ಬಾಯಿ ಬಿಟ್ಟರು. 'ನಕ್ಸಲರು ಬಂದಿದ್ದರಂತೆ. ಆಹಾರ ಕೇಳಿ ಪಡೆದು ಹೋಗಿದ್ದರಂತೆ' ಎಂದು ಅಂಜುತ್ತಲೇ ಉತ್ತರಿಸುತ್ತಾರೆ.
ಹೀಗಿದ್ದಾಗ್ಯೂ ಪೊಲೀಸರ ಚಟುವಟಿಕೆಗಳಲ್ಲಿ ಸುಧಾರಣೆ ಕಂಡಿದ್ದರಿಂದ ಇತ್ತೀಚಿಗೆ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳು ವಿರಳ ಎನ್ನುವಂತಾಗಿತ್ತು.
'ಆಗುಂಬೆ ಪೊಲೀಸರು ನಮಗೆ ಪೊಲೀಸರೆಂದೆನಿಸಿದ್ದು ಕಡಿಮೆಯೇ. ನಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಗ್ರಾಮಗಳ ಅದೆಷ್ಟೋ ಮಕ್ಕಳಿಗೆ ಓದಲು ಅವಕಾಶ ಮಾಡಿಕೊಟ್ಟಿದ್ದು, ಹಾಸ್ಟೆಲ್ಗೆ ಸೇರಿಸಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದು, ಆರೋಗ್ಯ ಕೆಟ್ಟಾಗ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟೇ ಅಲ್ಲ, ನಮ್ಮ ಗ್ರಾಮಕ್ಕೆ ರಸ್ತೆ- ಸೇತುವೆ ಬೇಕೆಂದು ಮನವಿ ಕೊಟ್ಟಿದ್ದು ಪೊಲೀಸ್ ಠಾಣೆಗೆ, ಬೀದಿ ದೀಪ, ನೀರಿಗೆ ವ್ಯವಸ್ಥೆ ಮಾಡಿ ಎಂದು ಕೇಳಿದ್ದು ಇವರನ್ನೇ. ಅವರೇ ನಮ್ಮ ಅರ್ಜಿಗಳನ್ನು ಜಿಲ್ಲಾಡಳಿತಕ್ಕೆ ತಲುಪಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅನೇಕ ಯೋಜನೆಗಳು ಅನುಷ್ಠಾನಗೊಂಡಿದ್ದು ಪೊಲೀಸರ ಸಹಕಾರದಿಂದಲೇ' ಎನ್ನುತ್ತಾರೆ ಗ್ರಾಮಸ್ಥರು.
ಈಗ ಮೌನಕ್ಕೆ ಶರಣು: ಇತ್ತೀಚೆಗೆ ಪೊಲೀಸರು ಮೌನಕ್ಕೆ ಶರಣಾಗಿರುವುದು ಈ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. 'ಜಿಲ್ಲಾಡಳಿತ ಹಾಗೂ ಎಸ್ಪಿ ಬದಲಾದ ನಂತರ ನಕ್ಸಲ್ ಪೀಡಿತ ಪ್ರದೇಶವನ್ನು ಕಡೆಗಣಿಸುತ್ತಿದ್ದಾರೇನೋ ಎಂದು ಭಾಸವಾಗುತ್ತಿದೆ' ಎನ್ನುತ್ತಾರೆ ತಲ್ಲೂರಂಗಡಿಯ ಹಿರಿಯರ ಗುಂಪೊಂದು.
ನಮ್ಮ ಗ್ರಾಮಗಳ ಅನೇಕ ಹುಡುಗರ ಮನಸ್ಥಿತಿ ಬದಲಾಯಿಸಿದ್ದ ಪೊಲೀಸರು ಇದೀಗ ನಡು ನೀರಲ್ಲಿ ಕೈಬಿಟ್ಟು ಮೌನಕ್ಕೆ ಶರಣಾದರೆ ಮುಂದಿನ ಪರಿಸ್ಥಿತಿ ಕಷ್ಟವಾದೀತು ಎನ್ನುತ್ತಾರೆ ಗ್ರಾಮದ ಹಿರಿಯರು. ಹೊಸ ಎಸ್ಪಿ ಈವರೆಗೂ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಹೀದೆ ಖುದ್ದು ಎಸ್ಪಿಯವರೇ ತಿಂಗಳಿಗೊಮ್ಮೆಯಾದರೂ ಕರೆ ಮಾಡಿ ಇಲ್ಲಿಯ ಜನರ ಸಂಕಷ್ಟವನ್ನು ಆಲಿಸುತ್ತಿದ್ದರು. ಅನುಷ್ಠಾನವಾಗಬೇಕಿದ್ದ ಯೋಜನೆಗಳು ಅರ್ಧಕ್ಕೇ ನಿಂತಿವೆ ಎನ್ನುವುದು ಈ ಗ್ರಾಮಸ್ಥರ ಅಳಲು.
ಮಾನಸಿಕ ಸ್ಥೈರ್ಯ ತಂಬ ಬೇಕಾದ ಪೊಲೀಸರು ಜನರಿಂದ ದೂರವಾದರೆ ಯುವಕರು 'ಕಾಡಿನ ಹಾದಿ' ಹಿಡಿಯುವ ಸಾಧ್ಯತೆಗಳಿವೆ ಎಂಬ ಭಯ ಈ ಗ್ರಾಮಸ್ಥರನ್ನು ಕಾಡುತ್ತಿವೆ.
ಜಿಲ್ಲಾ ಎಸ್ಪಗಳಾಗಿದ್ದ ಅರುಣ್ ಚಕ್ರವರ್ತಿ, ಮುರುಗನ್, ರಮಣ್ ಗುಪ್ತಾ ಅವರ ತಂತ್ರಗಳು, ಪ್ರಯತ್ನಗಳು ಯುವಕರು ಒಂದು ನೆಲೆ ಕಾಣುವಂತೆ ಮಾಡಿದ್ದವು. ಆದರೆ ಈಗ ಜಿಲ್ಲೆಯ ಅಧಿಕಾರಿಗಳು ಮೌನ ವಹಿಸಿದರೆ ಈ ಹಿಂದೆ ಅಧಿಕಾರಿಗಳು ಮಾಡಿದ ಪ್ರಯತ್ನಗಳು ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಇನ್ನಾದರೂ ಜಿಲ್ಲಾ ಪೊಲೀಸ್ ವ್ಯವಸ್ಥೆ ಎಚ್ಚೆತ್ತು ಮುಂಚಿನಂತೆಯೇ ಚಟುವಟಿಕೆ ನಡೆಸಬೇಕು. ಇಲ್ಲಿನ ಜನರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮಾಕೋಡಿನ ಚಂದ್ರೇಗೌಡ (ಹೆಸರು ಬದಲಿಸಲಾಗಿದೆ) ಅಭಿಪ್ರಾಯಪಡುತ್ತಾರೆ.
- ಶ್ರೀಕಾಂತ ಭಟ್