ನಕ್ಸಲ್ ಗುಂಡಿನ ದಾಳಿ ಒಬ್ಬ ಪೇದೆಗೆ ಗಾಯ
ಕನ್ನಡಪ್ರಭ ವಾರ್ತೆ , ಶೃಂಗೇರಿ , ಮೇ 15
ತಾಲೂಕಿನ ಹೆಗ್ಗಾನೆ ಗ್ರಾಮದ ಬಳಿ ನಕ್ಸಲರು ಹಾಗೂ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ನಡುವೆ ಬುಧವಾರ ಗುಂಡಿನ ಚಕಮಕಿ ನಡೆದಿದ್ದು, ಎಎನ್‌ಎಫ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ.
ಶೃಂಗೇರಿಯಿಂದ ಸುಮಾರು 32 ಕಿಮೀ ದೂರದಲ್ಲಿರುವ ಮುಡುಬ ಗ್ರಾಮದ ಸುಧಾಕರ್ ಅವರ ಮನೆಗೆ ಮಂಗಳವಾರ ರಾತ್ರಿ ಮುಂಡಗಾರು ಲತಾ ನೇತೃತ್ವದಲ್ಲಿ ನಾಲ್ವರು ನಕ್ಸಲರು ಬಂದು, ಅವರ ಮನೆಯಲ್ಲಿ ಊಟ ಮಾಡಿ, ಅಕ್ಕಿ ಸೇರಿದಂತೆ ಇತರೆ ದಿನನಿತ್ಯ ಬಳಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಕೆರೆಕಟ್ಟೆಯಲ್ಲಿರುವ ನಕ್ಸಲ್ ನಿಗ್ರಹ ಪಡೆ ಬುಧವಾರ ಬೆಳಿಗ್ಗೆ 10.30ರ ವೇಳೆಗೆ ಹೆಗ್ಗಾನೆ ಗ್ರಾಮಕ್ಕೆ ಹೋಗಿ ಕಾರ್ಯಾಚರಣೆ ನಡೆಸಲು ಮುಂದಾಯಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೇದೆ ಗಿರೀಶ್ ಅವರ ಮುಖದ ಸಮೀಪದಿಂದ ಗುಂಡು ಹಾದು ಹೋಗಿದ್ದು, ಅವರ ತುಟಿಗೆ ಪರಚಿದಂತೆ ಗಾಯವಾಗಿದೆ.