ಸೊಸೆಯೂ ಮನೆ ಮಗಳೇ...
ಛೀ... ನಾಚಿಕೆಗೇಡು...ಇದು ಸುಪ್ರೀಂಕೋರ್ಟ್ ಮನೆಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯಗಳ ಸಂಬಂಧ ಆಕ್ರೋಶಭರಿತವಾಗಿ ಹೇಳಿದ ಮಾತು...
ನವದೆಹಲಿ: ಛೀ... ನಾಚಿಕೆಗೇಡು...
ಇದು ಸುಪ್ರೀಂಕೋರ್ಟ್ ಮನೆಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯಗಳ ಸಂಬಂಧ ಆಕ್ರೋಶಭರಿತವಾಗಿ ಹೇಳಿದ ಮಾತು.
ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರ ಕುರಿತಂತೆ ವ್ಯಕ್ತಿಯೊಬ್ಬನಿಗೆ 5 ವರ್ಷಗಳ ಕಠಿಣ ಸಜೆ ವಿಧಿಸಿದ ಸುಪ್ರೀಂಕೋರ್ಟ್, ಸೊಸೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮನಸ್ಥಿತಿವುಳ್ಳ ಗಂಡ ಮತ್ತು ಆತನ ಕುಟುಂಬ ಸದಸ್ಯರಿಗೆ ನಾಟುವಂತೆ ಬುದ್ಧಿವಾದ ಹೇಳಿದೆ.
ಮದುವೆ ಸಂದರ್ಭದಲ್ಲಿ ಭಾರಿ ಸಂಭ್ರಮದಿಂದ ಸೊಸೆಯನ್ನು ಮನೆಗೆ ತುಂಬಿಸಿಕೊಳ್ಳುವ ನೀವು, ಆಮೇಲೆ ಏಕೆ ಬದಲಾಗುತ್ತೀರಿ. ಆಕೆ ಮನೆ ಮಗಳಂತಲ್ಲವೇ. ಹುಟ್ಟಿದ ಮನೆ ಬಿಟ್ಟು ಬಂದವಳಲ್ಲವೇ. ಆಕೆಯನ್ನು ಮನೆ ಮಗಳಂತೆಯೇ ಏಕೆ ನೋಡಬಾರದು ಎಂದು ಅದು ಪ್ರಶ್ನಿಸಿದೆ.
ಇಷ್ಟೇ ಅಲ್ಲ, ಮನೆಯ ಕೆಲಸದಾಕೆಯಂತೆ ನೋಡುತ್ತೀರಲ್ಲ, ನೀವು ಕಠಿಣ ಹೃದಯ ಉಳ್ಳವರೇ ಎಂದೂ ನ್ಯಾ.ಕೆ.ಎಸ್. ರಾಧಾಕೃಷ್ಣನ್ ಮತ್ತು ನ್ಯಾ. ದೀಪಕ್ ಮಿಶ್ರಾ ಅವರಿದ್ದ ಪೀಠ ಪ್ರಶ್ನಿಸಿದೆ.
ಇದೇ ಸಂದರ್ಭದಲ್ಲಿ ಅದು ಸೊಸೆಯನ್ನು ಮನೆಯ ಮಗಳಂತೆಯೇ ನೋಡಬೇಕು, ಯಾವುದೇ ಕಾರಣಕ್ಕೂ ಗಂಡನ ಮನೆಯಿಂದ ಓಡಿಸಬಾರದು ಎಂಬ ಆದೇಶವನ್ನೂ ನೀಡಿದೆ. ಈ ಮೂಲಕ ನಾಗರಿಕ ಸಮಾಜದ ಸೂಕ್ಷ್ಮತೆಯನ್ನು ನಿಮ್ಮ ವರ್ತನೆ ಬಿಂಬಿಸುವಂತಿರಲಿ ಎಂದು ಹೇಳಿದೆ.
ಆದರೆ ಕೆಲವೊಂದು ಪ್ರಕರಣಗಳಲ್ಲಿ ಸೊಸೆಯನ್ನು ಅಪರಿಚಿತಳಂತೆ ಕಾಣಲಾಗುತ್ತದೆ. ಆಕೆಯ ಮೇಲೆ ನಾನಾ ರೀತಿಯ ಹಿಂಸೆ ಕೊಡಲಾಗುತ್ತಿದೆ. ಹೃದಯವೇ ಇಲ್ಲದವರ ಹಾಗೆ ನಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ.
ತುಂಬಾ ಸಂದರ್ಭದಲ್ಲಿ ಸೊಸೆಯನ್ನು ಸೀಮೆಎಣ್ಣೆ ಹಾಕಿ ಸುಡುವುದು, ವರದಕ್ಷಿಣೆಗಾಗಿ ಪೀಡಿಸಿ ಆಕೆಗೆನಾನಾ ರೀತಿಯ ಹಿಂಸೆ ಕೊಡುವ ಮೂಲಕ ಆಕೆಯ ಸಂತೋಷವನ್ನೆಲ್ಲಾ ಕಿತ್ತುಕೊಂಡು ಆಕೆಯನ್ನು ಪಶುವಿಗಿಂತ ಕಡೆಯಾಗಿ ನೋಡಲಾಗುತ್ತಿದೆ. ಇವು ನಾಗರಿಕ ಸಮಾಜದ ಗೌರವವನ್ನೇ ಮಣ್ಣುಪಾಲು ಮಾಡುತ್ತಿವೆ ಎಂದು ಕೋರ್ಟ್ ಹೇಳಿದೆ.
- ಸೊಸೆಯನ್ನು ಅಪರಿಚಿತಳಂತೆ ಕಾಣಬೇಡಿ
- ವರದಕ್ಷಿಣೆಗಾಗಿ ಕಿರುಕುಳ ಸಲ್ಲದು
- ನಾಗರಿಕ ಸಮಾಜದಲ್ಲಿ ಆಕೆಯನ್ನೂ ಗೌರವದಿಂದ ಕಾಣಿ
- ಕಿರುಕುಳ ಪ್ರಕರಣಗಳು ಇಂಥ ಸಮಾಜಕ್ಕೆ ಒಳ್ಳೆಯದಲ್ಲ