ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಅರುಣಿಮಾ

ಆಕೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ತುತ್ತಾಗಿದ್ದಳು. ತನ್ನ ಭವಿಷ್ಯದ ಆಸರೆಯಾಗಿದ್ದ ಬಲಗಾಲನ್ನೇ ಕಳೆದುಕೊಂಡಿದ್ದಳು...

Vishwanath S
Updated On : 22 May 2013, 12:14 pm

ನವದೆಹಲಿ: ಆಕೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ತುತ್ತಾಗಿದ್ದಳು. ತನ್ನ ಭವಿಷ್ಯದ ಆಸರೆಯಾಗಿದ್ದ ಬಲಗಾಲನ್ನೇ ಕಳೆದುಕೊಂಡಿದ್ದಳು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಅವಳ ಕನಸು ಅಲ್ಲೇ ಕಮರಿಹೋಗಿತ್ತು. ಆದರೆ ಈಗ...
ತನ್ನ ಕಾಲನ್ನು ಕಳೆದುಕೊಂಡಿದ್ದರೂ ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್ ಅನ್ನು ಏರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಆತ್ಮವಿಶ್ವಾಸವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಜಗತ್ತಿಗೇ ತೋರಿಸಿಕೊಟ್ಟಿದ್ದಾಳೆ. ಈಕೆ ಯಾರು ಗೊತ್ತಾ?
ಅರುಣಿಮಾ ಸಿನ್ಹಾ. ರಾಷ್ಟ್ರಮಟ್ಟದ ಮಾಜಿ ವಾಲಿಬಾಲ್ ಆಟಗಾರ್ತಿ. 2011ರಲ್ಲಿ ಲಖನೌನಿಂದ ದೆಹಲಿಗೆ ಪದ್ಮಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸರಗಳ್ಳರ ಕೈಗೆ ಸಿಲುಕಿ ಕಾಲು ಕಳೆದುಕೊಂಡಾಕೆ.

ರೈಲಿನಿಂದ ನೂಕಿದ್ದರು: ರೈಲಿನಲ್ಲಿ ಸರಗಳ್ಳರು ಅರುಣಿಮಾ ಸರವನ್ನು ಕಳವು ಮಾಡಲು ಯತ್ನಿಸಿದ್ದರು. ಇದಕ್ಕೆ ಆಕೆ ಪ್ರತಿರೋಧ ಒಡ್ಡಿದಾಗ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆ ನೂಕಿದ್ದರು. ಅತ್ತ ಕಡೆಯಿಂದ ಚಲಿಸುತ್ತಿದ್ದ ಇನ್ನೊಂದು ರೈಲು ಆಕೆಗೆ ಡಿಕ್ಕಿ ಹೊಡೆಯಿತು. ಅರುಣಿಮಾ ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾದಳು. ಪರಿಸ್ಥಿತಿ ಕೈಮೀರಲಿದೆ ಎಂದಾಗ ವೈದ್ಯರು ಆಕೆಯ ಬಲಗಾಲನ್ನೇ ಕತ್ತರಿಸಿ ತೆಗೆದರು.

ಎವರೆಸ್ಟ್ ಏರಿದ ಅಂಗವಿಕಲೆ: ತಾನು ಹೀಗೇ ಇದ್ದರೆ ಏನೂ ಸಾಧಿಸಲಾಗದು ಎಂದು ಅರಿತ ಅರುಣಿಮಾ ಆಸ್ಪತ್ರೆಯಲ್ಲೇ ದೃಢ ನಿರ್ಧಾರ ಕೈಗೊಂಡರು. ತನ್ನ ಸಹೋದರ ಮತ್ತು ಕೋಚ್‌ನೊಂದಿಗೆ ಚರ್ಚಿಸಿ ಎವರೆಸ್ಟ್ ಏರುವ ಸಿದ್ಧತೆ ನಡೆಸಿದರು. ಅವರ ಪ್ರೋತ್ಸಾಹದ ಮೂಲಕ ಅರುಣಿಮಾ ಮಂಗಳವಾರ ಬೆಳಗ್ಗೆ 10.55ರ ವೇಳೆಗೆ ವಿಶ್ವದ ಅತಿ ಎತ್ತರದ ಶಿಖರವನ್ನೇರುವ ಕನಸನ್ನು ನನಸಾಗಿಸಿಕೊಂಡರು. ಈ ಮೂಲಕ ಮೌಂಟ್ ಎವರೆಸ್ಟ್ ಏರಿದ ಪ್ರಪ್ರಥಮ ಅಂಗವಿಕಲೆ ಎಂಬ ಹೆಗ್ಗಳಿಕೆಗೆ ಅರುಣಿಮಾ ಪಾತ್ರರಾಗಿದ್ದಾರೆ.

ಯುವರಾಜ್ ಸಿಂಗ್ ಸ್ಫೂರ್ತಿ
ವಾಲಿಬಾಲ್ ಆಟಗಾರ್ತಿಯಾಗಿ ಸಾಧನೆ ಮಾಡಬೇಕಾಗಿದ್ದ ನನ್ನ ಭವಿಷ್ಯವೇ ಕತ್ತಲಾಯಿತು ಎಂದು ಕೊರಗುತ್ತಿದ್ದಾಗ ಅರುಣಿಮಾಗೆ ಸ್ಫೂರ್ತಿ ನೀಡಿದ್ದು ಕ್ರಿಕೆಟಿಗ ಯುವರಾಜ್ ಸಿಂಗ್.
ಅವರು ನನಗೆ ಆಸ್ಪತ್ರೆಯಲ್ಲಿದ್ದಾಗ 1 ಲಕ್ಷದ ಚೆಕ್ ಕಳುಹಿಸಿದ್ದರು. ನಂತರ ನನ್ನೊಂದಿಗೆ ಮಾತನಾಡಿದ್ದರು. ಕೆಲ ದಿನಗಳ ಬಳಿಕ ಯುವರಾಜ್‌ಗೆ ಕ್ಯಾನ್ಸರ್ ಇರುವ ವಿಚಾರ ತಿಳಿದಾಗ ನನಗೆ ಆಘಾತವಾಯಿತು.
ಆದರೆ ಬಳಿಕ ಅವರು ಚೇತರಿಸಿಕೊಂಡು ಭಾರತ ತಂಡದಲ್ಲಿ ಕಾಣಿಸಿಕೊಂಡಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಅವರ ಛಲವೇ ನನಗೂ ಪ್ರೇರಣೆ ನೀಡಿತು. ನಾನೂ ಅವರಂತೆ ಏನಾದರೂ ಸಾಧಿಸಬೇಕು ಎಂಬ ನಿರ್ಧಾರಕ್ಕೆ ಬಂದೆ ಎನ್ನುತ್ತಾರೆ ಅರುಣಿಮಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement