ಕರ್ನಾಟಕದಲ್ಲಿ ಐಟಿ ಹೂಡಿಕೆ ತಾಣ ಸ್ಥಾಪನೆ ನಿರ್ಧಾರ ಮುಂದೂಡಿಕೆ
ನವದೆಹಲಿ: ಐಟಿ ಸಿಟಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಹೂಡಿಕೆ ತಾಣ ಸ್ಥಾಪನೆಗೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದೆ.
ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ವಿಚಾರ ಚರ್ಚಿಸಲಾಯಿತಾದರೂ ಅಂತಿಮ ನಿರ್ಧಾರವನ್ನು ಮುಂದೂಡಲು ತೀರ್ಮಾನಿಸಲಾಯಿತು. ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಪ್ರಸ್ತಾಪ ಮುಂಡೂಡಲಾಗಿದ್ದು, ಶೀಘ್ರದಲ್ಲೇ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚಿದಂಬರಂ ಸಭೆ ಬಳಿಕ ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಹಾರ್ಡ್ವೇರ್ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಗೆ ಕರ್ನಾಟಕ ಸರ್ಕಾರ ಭೂಮಿ ನೀಡಲಿದ್ದು, ಈ ಪ್ರದೇಶವು ರಾಷ್ಟ್ರೀಯ ಮತ್ತು ರಾಜ್ಯಹೆದ್ದಾರಿಗಳೊಂದಿಗೆ ನೇರ ಸಂಪರ್ಕ ಹೊಂದಿರಲಿದೆ. ಈ ಯೋಜನೆ ಮೂಲಕ 1.6 ಲಕ್ಷ ಕೋಟಿ ಹೂಡಿಕೆ ಆಕರ್ಷಿಸುವ ಉದ್ದೇಶ ಸರ್ಕಾರಕ್ಕಿದೆ. 40 ದಶಲಕ್ಷ ನೇರ ಹಾಗೂ 1.2 ದಶಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು 2008ರಲ್ಲಿ ಪ್ರಸ್ತಾಪಿಸಿದ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೆತ್ತಿಕೊಳ್ಳಲಿವೆ.
ಕ್ಯಾಬಿನೆಟ್ ಸಭೆ ಮುಖ್ಯಾಂಶಗಳು
- ಆದಾಯ ತೆರಿಗೆ ಇಲಾಖೆ ಪುನರ್ ರಚನೆ ಬದಲಾವಣೆಗೆ ಒಪ್ಪಿಗೆ. ಹೆಚ್ಚುವರಿ 20,751 ಹುದ್ದೆಗಳ ಸೃಷ್ಟಿ.
- ವಾರ್ಷಿಕ ಹೆಚ್ಚುವರಿ 25 ಸಾವಿರ ಆದಾಯ ಸೃಷ್ಟಿಗೆ ಐಟಿ ಇಲಾಖೆ ನೆರವು.
- ಬಂದರು ಮೂಲಸೌಕರ್ಯ ಯೋಜನೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು 12 ವಾರಗಳೊಳಗೆ ಪೂರ್ಣಗೊಳಿಸುವಂತೆ ಭದ್ರತಾ ಏಜೆನ್ಸಿಗಳಿಗೆ ಸೂಚನೆ.
- ರಸ್ತೆ ನಿರ್ಮಾಣ ಯೋಜನೆಗಳಿಗೆ ಇದ್ದಂಥ ಅನೇಕ ಅಡೆತಡೆಗಳನ್ನು ನಿವಾರಿಸಲಾಗಿದೆ. ಬಾಕಿ ಉಳಿದಿರುವ ವಿಚಾರಗಳ ಕುರಿತು ಚರ್ಚಿಸಲು ಡಾ. ಕಸ್ತೂರಿರಂಗನ್ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆ.
- ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದ ಅರಣ್ಯ ಮಂಜೂರಾತಿಯಿಂದ ಪರಿಸರ ಮಂಜೂರಾತಿಯನ್ನು ಬೇಸರ್ಪಡಿಸುವುದು.
- ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಅದರಲ್ಲೂ ಮುಖ್ಯವಾಗಿ ರಕ್ಷಿತಾರಣ್ಯ ಭೂಮಿಯನ್ನು ತಪ್ಪಿಸಿಕೊಂಡು ನಿರ್ಮಾಣವಾಗುವ ರಸ್ತೆಗೆ ಶೀಘ್ರ ನಿರಾಪೇಕ್ಷಣ ಪತ್ರ ನೀಡಲು ಒಪ್ಪಿಗೆ.
- ಒಬಿಸಿ, ಎಸ್ಸಿ, ಎಸ್ಟಿ ವರ್ಗಗಳಿಗೆ ಮೀಸಲಾಗಿರುವ ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ವಿಶೇಷ ನೇಮಕಾತಿ ಯೋಜನೆ.