ಕೃಷ್ಣೆಗೆ 2 ಟಿಎಂಸಿ ನೀರು: 'ಮಹಾ' ಒಪ್ಪಿಗೆ
ಅಂತೂ ಕೃಷ್ಣಾತೀರದ ಜನ- ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗುವ ಕಾಲ ಸನ್ನಿಹಿತವಾಗಿದೆ...
ಕ.ಪ್ರ. ವಾರ್ತೆ, ಬಾಗಲಕೋಟೆ, ಮೇ 23-
ಅಂತೂ ಕೃಷ್ಣಾತೀರದ ಜನ- ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗುವ ಕಾಲ ಸನ್ನಿಹಿತವಾಗಿದೆ.
ಕೃಷ್ಣೆಗೆ ತಕ್ಷಣ 3 ಟಿಎಂಸಿ ನೀರು ಹರಿಸುವಂತೆ ಕೋರಿಕೆ ಸಲ್ಲಿಸಲು ಹೋಗಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ಕರ್ನಾಟಕದ ನಿಯೋಗಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ನೇತೃತ್ವದ ಸಚಿವರು, ಅಧಿಕಾರಿಗಳ ತಂಡ ಅಳೆದು-ತೂಗಿ 2 ಟಿಎಂಸಿ ನೀರು ಹರಿಸಲು ಷರತ್ತಿನ ಒಪ್ಪಿಗೆ ನೀಡಿದೆ.
ಗುರುವಾರ ಮಧ್ಯಾಹ್ನ 1 ಗಂಟೆ ಕಾಲ ಮುಂಬೈ ವಿಧಾನಸೌಧದಲ್ಲಿ ನಡೆದ ಉಭಯ ರಾಜ್ಯಗಳ ಜಂಟಿ ಸಭೆಯ ನಿರ್ಧಾರದಂತೆ ಮಹಾರಾಷ್ಟ್ರ ಗಡಿಯಲ್ಲಿನ ತನ್ನ ವಾರಣಾ ಮತ್ತು ಕಾಳಮ್ಮನವಾಡಿ ಅಣೆಕಟ್ಟೆಗಳಿಂದ ಶನಿವಾರ ಕೃಷ್ಣೆಗೆ ನೀರು ಹರಿಸಲಿದ್ದು, ಮುಂದಿನ ಸೋಮವಾರದ ವೇಳೆ ಆ ನೀರು ಕರ್ನಾಟಕವನ್ನು ಪ್ರವೇಶಿಸಲಿದೆ. ಇದರಿಂದ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಪ್ರದೇಶದ ಜನರ ನೀರಿನ ದಾಹ ತಣಿಸಲಿದೆ. ಮುಂದಿನ ಬುಧವಾರ, ಗುರುವಾರದ ವೇಳೆಗೆ ಕೊಪ್ಪಳ, ರಾಯಚೂರು, ಗುಲ್ಬರ್ಗ ಜಿಲ್ಲೆಗಳಿಗೆ ಕೃಷ್ಣೆಯ ಒಡಲಿನಿಂದ ಕುಡಿಯುವ ನೀರು ಲಭಿಸಲಿದೆ.
ಈ ಜಂಟಿ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ್, ಜಲಸಂಪನ್ಮೂಲ ಸಚಿವ ನಿಂಬಾಳ್ಕರ್, ಗೃಹ ಇಲಾಖೆಯ ರಾಜ್ಯ ಸಚಿವ ಜೆ.ಎಸ್.ಪಾಟೀಲ್, ಪ್ರಧಾನ ಕಾರ್ಯದರ್ಶಿ ವಸಂತ ಮತ್ತು ಕರ್ನಾಟಕದ ನಿಯೋಗದಲ್ಲಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕಾರ್ಯದರ್ಶಿ ಸತ್ಯಮೂರ್ತಿ, ಸಚಿವ ಪ್ರಕಾಶ್ ಹುಕ್ಕೇರಿ, ಶಾಸಕರಾದ ಸಿದ್ದು ನ್ಯಾಮಗೌಡ, ಜೆ.ಟಿ. ಪಾಟೀಲ್ ಅವರು ಭಾಗವಹಿಸಿದ್ದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಕೃಷ್ಣೆಗೆ ನೀರು ಹರಿಸಲು ಆರಂಭದಲ್ಲಿಯೇ ಆಸಕ್ತಿ ತೋರಿದ್ದರು. ಆದರೆ, ಸೊಲ್ಲಾಪುರಕ್ಕೆ ನೀರು ಹರಿಸುವ ಸಂಬಂಧ ಸಚಿವ ನಿಂಬಾಳ್ಕರ್ ಮತ್ತು ಅಧಿಕಾರಿಗಳು ಪಟ್ಟು ಹಿಡಿದು ಕುಳಿತಿದ್ದರು. ಕೊನೆಗೆ ಮುಖ್ಯಮಂತ್ರಿ ಚೌಹಾಣ್ ಒಂದು ಇತ್ಯರ್ಥಕ್ಕೆ ಬಂದು, 'ಕುಡಿಯುವ ನೀರಿನ ವಿಷಯದಲ್ಲಿ ನಾವು (ಮಹಾರಾಷ್ಟ್ರ) ಸದ್ಯ ತೀವ್ರ ಅಭಾವ ಎದುರಿಸುತ್ತಿದ್ದೇವೆ. ನಮ್ಮನ್ನೇ ನಂಬಿಕೊಂಡು ಇಲ್ಲಿಯವರೆಗೆ ಬಂದಿರುವ ತಮಗೆ, ಎರಡು ಬಾರಿ ಫೋನ್ ಮಾಡಿ ಮನವಿ ಮಾಡಿರುವ ನೂತನ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತು ನಮ್ಮ ನೀರನ್ನೇ ನಂಬಿರುವ ಕೃಷ್ಣಾತೀರದ ಜನತೆಗೆ ನಿರಾಸೆ ಮಾಡುವ ಮನಸ್ಸು ನಮಗಿಲ್ಲ. ಆದರೆ, ನಮ್ಮ ಸಂಕಷ್ಟವನ್ನೂ ತಾವು ಮಾನವೀಯ ಕಳಕಳಿಯಿಂದ ಪರಾಮರ್ಶಿಸಬೇಕು. ಸೊಲ್ಲಾಪುರಕ್ಕೆ ನೀರು ಪೂರೈಸುವಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಕರ್ನಾಟಕ- ಮಹಾರಾಷ್ಟ್ರದ ಅಧಿಕಾರಿಗಳು ಜಂಟಿಯಾಗಿ ಬಗೆಹರಿಸಲಿ. ಎಲ್ಲ ರೀತಿಯ ಸಹಕಾರ ತಮ್ಮಿಂದ ಸಿಗುತ್ತದೆ ಎನ್ನುವ ಆಶಾಭಾವನೆ ನಮ್ಮದು' ಎನ್ನುವ ಪರೋಕ್ಷ ಷರತ್ತಿನ ನಿಲುವು ಪ್ರಕಟಿಸಿದರು. ಮಹಾರಾಷ್ಟ್ರದ ಈ ನಿಲವಿಗೆ ಕರ್ನಾಟಕದ ನಿಯೋಗ ಒಪ್ಪಿಗೆ ಸೂಚಿಸಿತು.
3 ತಿಂಗಳಿಗೊಮ್ಮೆ ಸಭೆ: ಗುರುವಾರ ಜಂಟಿ ಸಭೆಯಲ್ಲಿ ಉಭಯ ರಾಜ್ಯಗಳ ಮಧ್ಯೆ ಇರುವ ಕೃಷ್ಣಾ ನೀರಿನ ತಗಾದೆ, ಕುಡಿಯುವ ನೀರು ಪೂರೈಕೆ ಇತ್ಯಾದಿ ಸಮಸ್ಯೆಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ಪ್ರತಿ 3 ತಿಂಗಳಿಗೊಮ್ಮೆ ಸಭೆ ಸೇರುವ ನಿರ್ಧಾರಕ್ಕೂ ಬರಲಾಯಿತು.
ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದಿಂದ ಹಳಸಿ ಹೋಗಿದ್ದ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಮಧ್ಯದ ಬಾಂಧವ್ಯ ಮತ್ತೆ ಚಿಗುರಿದೆ. ನಮ್ಮ ಬೇಡಿಕೆ, ಭಾವನೆಗೆ ಮಹಾರಾಷ್ಟ್ರ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ.
-ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ
-ಮಲ್ಲಿಕಾರ್ಜುನ ಸಿದ್ದಣ್ಣವರ