ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶುಗರ್ ಪ್ರಾಬ್ಲಂ

ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ನಿಯಂತ್ರಣ ಸಡಿಲಿಸಿ ಹೊರಡಿಸಿರುವ ಆದೇಶ ಜೂನ್ 1ರಿಂದ ಜಾರಿಗೆ ಬರಲಿದೆ...

Rashmi Kasaragodu
Updated On : 28 May 2013, 1:23 am

- ರೇಣುಕಾಪ್ರಸಾದ್ ಹಾಡ್ಯ
ನವದೆಹಲಿ: ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ನಿಯಂತ್ರಣ ಸಡಿಲಿಸಿ ಹೊರಡಿಸಿರುವ ಆದೇಶ ಜೂನ್ 1ರಿಂದ ಜಾರಿಗೆ ಬರಲಿದೆ. ರಾಜ್ಯದ ಪಡಿತರ ಕಾರ್ಡುದಾರರಿಗೆ ಜೂನ್ ತಿಂಗಳಲ್ಲಿ ಸಕ್ಕರೆ ಸಿಕ್ಕೋದು ಗ್ಯಾರಂಟಿ ಇಲ್ಲ!
ನೂತನ ಆದೇಶದಂತೆ ಇನ್ನು ಮುಂದೆ ಕೇಂದ್ರ ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಕ್ಕರೆ ಪೂರೈಕೆ ಮಾಡುವುದಿಲ್ಲ. ಆ ಕೆಲಸವನ್ನು ರಾಜ್ಯ ಸರ್ಕಾರಗಳೇ ಮಾಡಬೇಕು!
ನೂತನ ವ್ಯವಸ್ಥೆಯಡಿ ಮುಕ್ತ ಮಾರುಕಟ್ಟೆಯಿಂದ ಸಕ್ಕರೆ ಖರೀದಿಸಲು ರಾಜ್ಯ ಸರ್ಕಾರ ಇನ್ನೂ ನೀತಿ ರೂಪಿಸಿಲ್ಲ. ತಾತ್ಕಾಲಿಕವಾಗಿ ಸಕ್ಕರೆ ಖರೀದಿಸಲು ಟೆಂಡರ್ ಪ್ರಕ್ರಿಯೆಯನ್ನೂ ಪ್ರಾರಂಭಿಸಿಲ್ಲ. ಹೀಗಾಗಿ ಜೂನ್ ತಿಂಗಳಲ್ಲಿ ಪಡಿತರ ದಾರರಿಗೆ ಸಕ್ಕರೆ ಸಿಗುವ ಗ್ಯಾರಂಟಿ ಇಲ್ಲ.
ನಿಯಂತ್ರಣ ಸಡಿಲಿಕೆ ಜಾರಿ: ಏಪ್ರಿಲ್ 4ರಂದು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಕ್ಕರೆ ಮೇಲಿನ ನಿಯಂತ್ರಣ ಸಡಿಲಿಸಲು ಶಿಫಾರಸು ಮಾಡಿತ್ತು. ಸಂಪುಟವು ಅದನ್ನು ಒಪ್ಪಿತ್ತು. ಮೇ 2ರಂದು ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ನಿಯಂತ್ರಣವನ್ನು ಭಾಗಶಃ ಸಡಿಲಿಸಿದ ಆದೇಶದ ಅಧಿಸೂಚನೆ ಪ್ರಕಟಿಸಿದೆ.  
ಆದೇಶದ ಪ್ರಮುಖ ಅಂಶಗಳು ಎಂದರೆ- ಇನ್ನು ಮುಂದೆ ಸಕ್ಕರೆ ಕಾರ್ಖಾನೆಗಳು ತಾವು ಉತ್ಪಾದಿಸಿದ ಸಕ್ಕರೆಯ ಶೇ.10ರಷ್ಟನ್ನು ಕೇಂದ್ರ ಸರ್ಕಾರಕ್ಕೆ ರಿಯಾಯ್ತಿ ದರದಲ್ಲಿ ನೀಡಬೇಕಿಲ್ಲ. ಸಕ್ಕರೆ ಕಾರ್ಖಾನೆಗಳು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾದ ಸಕ್ಕರೆ ಪ್ರಮಾಣವನ್ನು ಕೇಂದ್ರ ಸರ್ಕಾರ ನಿಯಂತ್ರಿಸುವಂತಿಲ್ಲ. ಇದುವರೆಗೆ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸಕ್ಕರೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತಿತ್ತು.
ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರಕ್ಕೆ ರಿಯಾಯ್ತಿ ದರದಲ್ಲಿ ಸಕ್ಕರೆ ವಿತರಿಸುತ್ತಿಲ್ಲವಾದ್ದರಿಂದ ಕೇಂದ್ರ ಸರ್ಕಾರ ಪಡಿತರ ವಿತರಣೆಯಡಿ ಒದಗಿಸುತ್ತಿದ್ದ ಸಕ್ಕರೆಯನ್ನು ಇನ್ನು ಮುಂದೆ ಒದಗಿಸುವುದಿಲ್ಲ. ಆ ಕೆಲಸವನ್ನು ರಾಜ್ಯ ಸರ್ಕಾರಗಳೇ ಮಾಡಬೇಕು.
ಅಂದರೆ- ಜೂನ್ 1ರಿಂದ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಖರೀದಿಸಿ ಪಡಿತರ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಬೇಕು. ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಸರಾಸರಿ ಕೆಜಿಗೆ 32 ಇದೆ. ನ್ಯಾಯಬೆಲೆ ಅಂಗಡಿಯಲ್ಲಿ 13.50ಕ್ಕೆ ಸಕ್ಕರೆ ನೀಡಲಾಗುತ್ತದೆ.
ಇದುವರೆಗೆ ದರ ವ್ಯತ್ಯಾಸವನ್ನು ಕೇಂದ್ರ ಸರ್ಕಾರ ನೇರವಾಗಿ ಭರಿಸುತ್ತಿತ್ತು. ಈಗ ರಾಜ್ಯ ಸರ್ಕಾರಗಳು ಮುಂಚಿತವಾಗಿ ಮುಕ್ತ ಮಾರುಕಟ್ಟೆಯಿಂದ ಸಕ್ಕರೆ ಖರೀದಿಸಬೇಕು. ನಂತರದಲ್ಲಿ ಕೇಂದ್ರ ಸರ್ಕಾರ ದರ ವ್ಯತ್ಯಾಸದ ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ಒದಗಿಸುತ್ತದೆ.
ರಾಜ್ಯಕ್ಕೆ 8636 ಟನ್ ಸಕ್ಕರೆ ಬೇಕು: ಕರ್ನಾಟಕದಲ್ಲಿ ಮಾಸಿಕ 8636 ಟನ್ ಸಕ್ಕರೆಯನ್ನು ಪಡಿತರ ಕಾರ್ಡುದಾರರಿಗೆ ವಿತರಿಸಲಾಗುತ್ತಿದೆ. ಇಷ್ಟು ಪ್ರಮಾಣದ ಸಕ್ಕರೆಯನ್ನು ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ನ್ಯಾಯಬೆಲೆ ಅಂಗಡಿಗಳಿಗೆ ಒದಗಿಸಬೇಕು.
ರಾಜ್ಯದಲ್ಲಿ ಚುನಾವಣೆ ನಂತರ ಆಡಳಿತ ಬದಲಾವಣೆ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಸಕ್ಕರೆ ಖರೀದಿಗೆ ನೀತಿ ರೂಪಿಸಿಲ್ಲ. ಈಗ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ನೀತಿ ರೂಪಿಸಬೇಕು.  ಅದಕ್ಕೂ ಮುನ್ನ ತಾತ್ಕಾಲಿಕ ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಸಬೇಕಿದೆ. ಹೀಗಾಗಿ ಜೂನ್ ತಿಂಗಳಲ್ಲಿ ಸಕ್ಕರೆ ಸಿಕ್ಕೋದು ಗ್ಯಾರಂಟಿ ಇಲ್ಲ!


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement