ಘಾಟಿ ಬಳಿ ನಂಗಾನಾಚ್ ಘಾಟು
ತಾಲೂಕಿನ ಸುಪ್ರಸಿದ್ಧ ಯಾತ್ರಾಸ್ಥಳ ಘಾಟಿಸುಬ್ರಹ್ಮಣ್ಯ ಸಮೀಪದ ಎಸ್.ಆರ್. ವ್ಯಾಲಿ ರೆಸಾರ್ಟ್ನಲ್ಲಿ 'ನಂಗಾನಾಚ್' ಎಗ್ಗಿಲ್ಲದೇ ...
ದೊಡ್ಡಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ಯಾತ್ರಾಸ್ಥಳ ಘಾಟಿಸುಬ್ರಹ್ಮಣ್ಯ ಸಮೀಪದ ಎಸ್.ಆರ್. ವ್ಯಾಲಿ ರೆಸಾರ್ಟ್ನಲ್ಲಿ 'ನಂಗಾನಾಚ್' ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಹೇಯ ಮತ್ತು ಆಘಾತಕಾರಿ ಅಂಶ ಬಯಲಾಗಿದೆ. ಘಾಟಿ ಸುಬ್ರಹ್ಮಣ್ಯದಿಂದ ಕೂಗಳತೆ ದೂರದಲ್ಲಿರುವ ಈ ರೆಸಾರ್ಟ್ನಲ್ಲಿ ಯುವತಿಯರ ಬೆತ್ತಲೆ ನೃತ್ಯ ನಡೆದಿದ್ದು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.
ಸುಮಾರು ಒಂದು ಗಂಟೆ 4 ನಿಮಿಷ ಬೆತ್ತಲೆ ನೃತ್ಯವಿರುವ ಸಿಡಿಯನ್ನು ಮಂಗಳವಾರ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ದೊಡ್ಡಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಸುತ್ತಮುತ್ತಲ ರೆಸಾರ್ಟ್ಗಳಲ್ಲಿ ಇಂಥ ಹೇಯ ಕೃತ್ಯಗಳು ಸಾಮಾನ್ಯವಾಗಿವೆ. ಈ ವಿಷಯ ಪೊಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎರಡು ತಿಂಗಳ ಹಿಂದೆಯೇ ಈ ಸಿಡಿ ಕರವೇಗೆ ದೊರೆತಿದ್ದರೂ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಕಲೆ ಹಾಕುವ ಹಿನ್ನೆಲೆಯಲ್ಲಿ ಕಾಲಾವಕಾಶ ತೆಗೆದುಕೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ.
ಸಿಡಿಯಲ್ಲಿ ಏನಿದೆ?: ವಿಡಿಯೋ ಸಿಡಿಯಲ್ಲಿ 5 ಯುವತಿಯರ ನಂಗಾನಾಚ್ ಸೆರೆ ಹಿಡಿಯಲಾಗಿದೆ. ಮೊದಲು ಅರೆ ಬೆತ್ತಲೆಯಾಗಿ 30ರಿಂದ 40 ಪುರುಷರ ಮುಂದೆ ಕುಣಿಯುತ್ತಾರೆ. ಕುಣಿಯುತ್ತಲೇ ಸಂಪೂರ್ಣವಾಗಿ ಬೆತ್ತಲಾಗುತ್ತಾರೆ. ಬೆತ್ತಲೆ ನೃತ್ಯ ಮುಗಿಯುತ್ತಿದ್ದಂತೆ ಪ್ರಭಾವಿಗಳ ಕೊಠಡಿ ಸೇರಿಕೊಳ್ಳುತ್ತಾರೆ.
ಅಲ್ಲಿಯೂ ಆಯ್ದ ಯುವತಿಯರ ಬೆತ್ತಲೆ ನೃತ್ಯ ನಡೆಯುತ್ತದೆ. ಕುಡಿದ ಮತ್ತಿನಲ್ಲಿ ನೃತ್ಯ ವೀಕ್ಷಿಸುವ ಕೆಲ ವ್ಯಕ್ತಿಗಳು ಯುವತಿಯರ ದೇಹಕ್ಕೆ ನೋಟುಗಳ ಸುರಿಮಳೆಗೈಯುತ್ತಾರೆ.
ನೃತ್ಯದ ಒಂದೊಂದು ಭಂಗಿಗೂ ನೋಟುಗಳ ಅರ್ಪಣೆ ಎಗ್ಗಿಲ್ಲದೆ ಸಾಗುತ್ತದೆ. ಯುವತಿಯರನ್ನು ಮನಸ್ಸಿಗೆ ಬಂದಂತೆ ಎಳೆದಾಡಿ ವಿಕೃತ ಸುಖ ಅನುಭವಿಸುವುದು ವಿಡಿಯೋದಲ್ಲಿ ಚಿತ್ರೀಕರಣವಾಗಿದೆ.
ನಡೆಸಿದವರು ಯಾರು?: ಈ ನಂಗಾನಾಚ್ ನಡೆದಿರುವುದು ದೊಡ್ಡಬಳ್ಳಾಪುರದ ಎಸ್.ಆರ್.ವ್ಯಾಲಿ ರೆಸಾರ್ಟ್ಲ್ಲಿ. ಆದರೆ ಭಾಗವಹಿಸಿರುವವರಾರೂ ಸ್ಥಳೀಯರಲ್ಲ.
ಅಲ್ಲಿರುವ ಕಾರುಗಳ ಸಂಖ್ಯೆಗಳೂ ಸ್ಥಳೀಯ ನೋಂದಣಿಯವಲ್ಲ. ಇವರೆಲ್ಲ ಆಂಧ್ರ ಕಡೆಯಿಂದ ವೀಕೆಂಡ್ ಮಜಾ ಅನುಭವಿಸಲು ಬಂದವರು. ಯುವತಿಯರನ್ನೂ ಕೂಡ ಅವರೇ ಕರೆ ತಂದಿದ್ದಾರೆ. ಈ ರೀತಿಯ ಕಾಮದಾಟಗಳಿಗೇ ಇಲ್ಲಿನ ಕೆಲ ರೆಸಾರ್ಟ್ಗಳು ಪ್ರಸಿದ್ಧಿಯಾಗಿವೆ.
ಬೆಂಗಳೂರಿನ ದಲ್ಲಾಳಿಗಳ ಮೂಲಕ ಬುಕಿಂಗ್ ಮಾಡಿಕೊಂಡು ಇಲ್ಲಿಗೆ ಬರಲಾಗುತ್ತದೆ. ಇದು ಒಂದು ರೀತಿಯ ಅಕ್ರಮ ಸ್ವರ್ಗ ಎಂದು ಕರವೇ ತಾಲೂಕು ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಪೊಲೀಸ್ ವೈಫಲ್ಯ: ಈ ರೆಸಾರ್ಟ್ ಆಂಧ್ರ ಮೂಲದ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಸಂಪಂಗಿ ರಾಮಯ್ಯ ಎಂಬವರಿಗೆ ಸೇರಿದೆ. ಸರ್ಕಾರಿ ಭೂಮಿಯನ್ನೂ ಗುಳುಂ ಮಾಡಿ ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ. ಇಂಥ ಅಕ್ರಮ ದಂಧೆ ನಡೆಯುವ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ರೆಸಾರ್ಟ್ಗೆ ಬೀಗ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಇದು ಹಳೇ ಸಿಡಿ, ಈಗ ನಂಗಾನಾಚ್ ನಡೆಯುತ್ತಿಲ್ಲ!
ಕರವೇ ಈಗ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಸಿಡಿ 2 ವರ್ಷದ ಹಿಂದಿನದು. ಈಗ ರೆಸಾರ್ಟ್ನಲ್ಲಿ ಈ ಬಗೆಯ ಅಶ್ಲೀಲ ಮತ್ತು ಅಕ್ರಮಗಳು ನಡೆಯುತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಮೂಲಗಳು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿವೆ. ಆದರೆ, ಹಿಂದೆ ಇಂಥ ಅಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು ಮತ್ತು ಯಾವ ರೀತಿ ಆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ.
ಉನ್ನತ ಮಟ್ಟದ ತನಿಖೆಗೆ ತಂಡ ರಚನೆ
ಎಸ್.ಆರ್. ವ್ಯಾಲಿಯಲ್ಲಿ ಯುವತಿಯರ ಬೆತ್ತಲೆ ನೃತ್ಯ ಸಿಡಿ ಹೊರ ಬೀಳುತ್ತಿದ್ದಂತೆ ಪ್ರಕರಣದ ಸಮಗ್ರ ತನಿಖೆಗೆ ಕೇಂದ್ರ ವಲಯ ಐಜಿ ಅಮರಕುಮಾರ್ ಪಾಂಡೆ ಆದೇಶಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ಪಿ ನಾಗರಾಜ್ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ತನಿಖೆಯ ಸಮಗ್ರ ವರದಿ ತರಿಸಿಕೊಳ್ಳಲಾಗುವುದು. ನಂತರ ತಪ್ಪಿತಸ್ಥರ ವಿರುದ್ಧ ಗಂಭೀರ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.