ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಂದೂ ಬಂಧನದ ಅವಧಿ ವಿಸ್ತರಣೆ

Vishwanath S
Updated On : 28 May 2013, 10:41 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪಿ ವಿಂದೂ ದಾರಾಸಿಂಗ್ ಅವರ ಪೊಲೀಸ್ ಬಂಧನಾವಧಿಯನ್ನು ಮೇ 31ರವರೆಗೆ ವಿಸ್ತರಿಸಿ ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ. ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ವಿಂದೂ ಅವರನ್ನು ಮೇ 21ರಂದು ಬಂಧಿಸಲಾಗಿತ್ತು.
ಪೊಲೀಸ್ ವಶದಲ್ಲಿದ್ದ ಅವರ ಬಂಧನಾವಧಿ ಮೇ 28ರಂದು ಕೊನೆಗೊಳ್ಳಲಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಅನುಕೂಲವಾಗುವಂತೆ ಅವರ ಬಂಧನಾವಧಿಯನ್ನು ವಿಸ್ತರಿಸುವಂತೆ ದೆಹಲಿ ಪೊಲೀಸ್ ನ್ಯಾಯಾಲಯವನ್ನು ಕೋರಿತ್ತು. ಪೊಲೀಸರ ಮನವಿಯನ್ನು ಪುರಸ್ಕರಿಸಿರುವ ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಲಯ ವಿಂದೂ ಅವರ ಬಂಧನಾವಧಿಯನ್ನು ಮೇ 31ರವರೆಗೆ ವಿಸ್ತರಿಸಿ ಆದೇಶ ನೀಡಿದೆ. ಪೊಲೀಸರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾ. ಎ.ಎಂ. ಪದ್ವಾದ್ ಅವರು ವಿಂದೂ ಜತೆ ಇದೇ ಹಗರಣದಲ್ಲಿ ಸಿಕ್ಕಿಬಿದ್ದಿರುವ ಅಲ್ಪೇಶ್ ಪಟೇಲ್, ಪ್ರೇಮ್ ತನೇಜಾ ಅವರ ಬಂಧನಾವಧಿಯನ್ನೂ ಮೇ 31ರವರೆಗೆ ವಿಸ್ತರಿಸಿದರು.
ಸಿಮ್ ಕಾರ್ಡ್ ಸಾಕ್ಷಿ ನಾಶ?: ಏತನ್ಮಧ್ಯೆ, ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ಪೊಲೀಸರ ಪರ ವಾದ ಮಂಡಿಸುತ್ತಿರುವ ಪ್ರಾಸಿಕ್ಯೂಟರ್ ಕಿರಣ್ ಬೆಂಡ್ಬಾರ್ ಅವರು, 'ವಿವಾದಿತ ಐಪಿಎಲ್ ಅಂಪೈರ್ ಪಾಕಿಸ್ತಾನದ ಅಸದ್ ರೌಫ್‌ಗೆ ಬುಕ್ಕಿ ಸಂಜಯ್ ಜೈಪುರ್ ಒಂದು ಸಿಮ್ ಕಾರ್ಡ್ ನೀಡಿದ್ದ. ಆ ಸಿಮ್ ಕಾರ್ಡ್ ಮೂಲಕವೇ ಬುಕ್ಕಿಗಳೊಂದಿಗೆ ರೌಫ್ ಸಂಭಾಷಣೆ ನಡೆಸುತ್ತಿದ್ದರು. ಇದು ವಿಂದೂಗೆ ಗೊತ್ತಿತ್ತು. ಫಿಕ್ಸಿಂಗ್ ಪ್ರಕರಣ ಸ್ಫೋಟಗೊಂಡು ಆರಂಭದಲ್ಲೇ ಎಚ್ಚೆತ್ತುಕೊಂಡ ವಿಂದೂ, ರೌಫ್ ಅವರಿಗೆ ಸ್ಮಾರ್ಟ್ ಕಾರ್ಡ್‌ನ್ನು ನಾಶಪಡಿಸುವಂತೆ ಸೂಚನೆ ನೀಡಿದ್ದ ' ಎಂದು ವಾದ ಮಂಡಿಸಿದರು. ಇದರಿಂದಾಗಿ, ವಿಂದೂ ಹಾಗೂ ರೌಫ್ ನಡುವಿನ ಸ್ನೇಹದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಚಾರಣೆಗಾಗಿ ಮತ್ತಷ್ಟು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.
ಪ್ರತಿವಾದ: ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿವಾದ ನಡೆಸಿದ ವಕೀಲ ಸತೀಶ್ ಮನೇಶಿಂದೆ, ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ, ಈಗಾಗಲೇ ಒಮ್ಮೆ ಬಂಧನಾವಧಿಯನ್ನು ವಿಸ್ತರಿಸಲಾಗೆದೆ. ಹಾಗಾಗಿ, ಮತ್ತೊಮ್ಮೆ ಬಂಧನಾವಧಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಆದರೆ, ಪ್ರತಿವಾದವನ್ನು ತಳ್ಳಿ ಹಾಕಿದ ನ್ಯಾಯಾಧೀಶರು ಮೇ 31ರವರೆಗೆ ವಿಂದೂ ಅವರನ್ನು ಪೊಲೀಸರ ಬಂಧನಕ್ಕೊಪ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement