ಅಧಿವೇಶನ ಶುರು
ವಿಧಾನಸಭೆಯ ಚೊಚ್ಚಲ ಅಧಿವೇಶನಕ್ಕೆ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯದೊಂದಿಗೆ ಬುಧವಾರ ಚಾಲನೆ ಸಿಕ್ಕಿದೆ. ಕಾಂಗ್ರೆಸ್ ಸದಸ್ಯ ಮಾಲಿಕಯ್ಯ ...
ಕ.ಪ್ರ. ವಾರ್ತೆ ಬೆಂಗಳೂರು ಮೇ 29
ವಿಧಾನಸಭೆಯ ಚೊಚ್ಚಲ ಅಧಿವೇಶನಕ್ಕೆ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯದೊಂದಿಗೆ ಬುಧವಾರ ಚಾಲನೆ ಸಿಕ್ಕಿದೆ.
ಕಾಂಗ್ರೆಸ್ ಸದಸ್ಯ ಮಾಲಿಕಯ್ಯ ಗುತ್ತೇದಾರ್ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮುನ್ನ ಅವರಿಗೆ ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟ ಸಹೋದ್ಯೋಗಿಗಳು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಸ್ಪೀಕರ್ ಹುದ್ದೆ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಸೇರಿದಂತೆ ಒಟ್ಟು 146 ಶಾಸಕರು ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದರು.
ಎಲ್ಲಾ ಸದಸ್ಯರೂ ಒಬ್ಬೊಬ್ಬರಾಗಿ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಸದನದ ಬಲಭಾಗದಿಂದ ಬಂದು ಕಾರ್ಯದರ್ಶಿಗಳ ಬಳಿ ತಮ್ಮ ಆಯ್ಕೆ ಪ್ರಮಾಣಪತ್ರ ತೋರಿಸಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಸ್ಪೀಕರ್ ಬಳಿ ಬಂದು ಅವರಿಗೆ ಹಸ್ತಲಾಘವ ನೀಡಿದರು.
ಸಂಪ್ರದಾಯ ಮುರಿದ ರೇವಣ್ಣ: ಆದರೆ, ಜೆಡಿಎಸ್‌ನ ಎಚ್.ಡಿ. ರೇವಣ್ಣ ಮಾತ್ರ ತಾವು ಕುಳಿತ ಜಾಗದಿಂದ ನೇರವಾಗಿ ಕಾರ್ಯದರ್ಶಿಗಳ ಬಳಿ ತೆರಳಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಬಲಭಾಗದಿಂದ ಸ್ಪೀಕರ್ ಬಳಿ ಹೋಗಿ ನಂತರ ಅದೇ ಭಾಗದಲ್ಲಿ ಇಳಿದು ನೇರವಾಗಿ ತಮ್ಮ ಆಸನದಲ್ಲಿ ಬಂದು ಕುಳಿತರು. ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಸಂಪ್ರದಾಯದಂತೆ ಸಭಾಧ್ಯಕ್ಷರ ಬಲಭಾಗದಿಂದ ಹೋಗಿ ಎಡಭಾಗದಿಂದ ಬರುವಂತೆ ಸೂಚಿಸಿದರೂ ರೇವಣ್ಣ ಆ ಮಾತನ್ನು ಲೆಕ್ಕಿಸಲಿಲ್ಲ.
ಯಾರ್ಯಾರ ಹೆಸರಿನಲ್ಲಿ ಪ್ರಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ಬಹುತೇಕ ಸದಸ್ಯರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಹುತೇಕ ಸದಸ್ಯರು ಸತ್ಯ ನಿಷ್ಠೆ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಚಿವ ಖಮರುಲ್ ಇಸ್ಲಾಂ ಅಲ್ಲಾಹುವಿನ ಹೆಸರಿನಲ್ಲಿ, ಎಚ್. ಆಂಜನೇಯ ವಿಶ್ವಗುರು ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಬಿಜೆಪಿಯ ಡಿ.ಎನ್. ಜೀವರಾಜ್ ಶೃಂಗೇರಿ ಶಾರದಾಂಬೆ, ಅಪ್ಪಚ್ಚು ರಂಜನ್ ಕಾವೇರಿ ಹೆಸರಿನಲ್ಲಿ, ಅರವಿಂದ ಬೆಲ್ಲದ್ ಅವರು ಗುರು ಯೋಗಾನಂದರು, ತಂದೆ, ತಾಯಿ ಹೆಸರಿನಲ್ಲಿ, ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಉಡುಪಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ಹೆಸರಿನಲ್ಲಿ, ರುದ್ರೇಶ್‌ಗೌಡ ಅವರು ತಂದೆ, ತಾಯಿ ಹೆಸರಿನಲ್ಲಿ, ಶಿವಮೊಗ್ಗದ ಕೆ.ವಿ. ಪ್ರಸನ್ನ ಕುಮಾರ್ ಅಮ್ಮ ಮತ್ತು ದೊಡ್ಡಮ್ಮನ ಹೆಸರಿನಲ್ಲಿ, ಎಂ.ಟಿ.ಬಿ. ನಾಗರಾಜ್, ಮಂಜುನಾಥ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಚಿವ ಖಮರುಲ್ ಇಸ್ಲಾಂ, ಶಾಸಕರಾದ ಸಂಜಯ್ ಪಾಟೀಲ್, ಅಶೋಕ್ ಖೇಣಿ ಆಂಗ್ಲ ಭಾಷೆಯಲ್ಲಿ, ಎಂಇಎಸ್ ಬೆಂಬಲಿತ ಪಕ್ಷೇತರ ಶಾಸಕರಾದ ಅರವಿಂದ ಚಂದ್ರಕಾಂತ ಪಾಟೀಲ್ ಮತ್ತು ಸಾಂಬಾಜಿ ಪಾಟೀಲ್ ಅವರು ಮರಾಠಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದೆಲ್ಲಾ ಶಾಸಕರೂ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದರು.
ಐವರು ಮಹಿಳೆಯರು ಪ್ರಮಾಣ: ವಿಧಾನಸಭೆಯಲ್ಲಿ ಈ ಬಾರಿ ಆರು ಮಹಿಳಾ ಶಾಸಕಿಯರಿದ್ದು, ಈ ಪೈಕಿ ಸಚಿವೆ ಉಮಾಶ್ರೀ, ಶಶಿಕಲಾ ಜೊಲ್ಲೆ, ರಾಮಕ್ಕ, ಶಕುಂತಲಾ ಶೆಟ್ಟಿ, ಶಾರದಾ ಮೋಹನ್ ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶಾರದಾ ಪೂರ್ಯಾ ನಾಯಕ್ ಅವರು ಸದನಕ್ಕೆ ಆಗಮಿಸಿದ್ದರಾದರೂ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಬೇಕಷ್ಟೆ.
ಸಿಎಂ ಮೊದಲು, ಸುರೇಶ್‌ಕುಮಾರ್ ಕೊನೆಯವರು: ಮೊಟ್ಟ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಾದ ನಂತರ ಅವರ ಸಂಪುಟ ಸಹೋದ್ಯೋಗಿಗಳಿಗೆ ಅವಕಾಶ ಮಾಡಿಕೊಡಲಾಯಿತು. ಬಳಿಕ ಅಕಾರಾದಿಯಿಂದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಆರಂಭವಾಯಿತು. ನಾಲ್ಕೈದು ಮಂದಿ ಪ್ರಮಾಣವಚನ ಸ್ವೀಕಾರದ ನಂತರ ಮಾಜಿ ಮುಖ್ಯಮಂತ್ರಿಗಳು ಮತ್ತು ಮಾಜಿ ಸ್ಪೀಕರ್, ನಿಯೋಜಿತ ಸ್ಪೀಕರ್‌ಗೆ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಶಿಷ್ಠಾಚಾರದಂತೆ ಈ ರೀತಿ ಮಾಡಲಾಗುತ್ತಿದೆ ಎಂದು ಹಂಗಾಮಿ ಸ್ಪೀಕರ್ ಸ್ಪಷ್ಟನೆ ನೀಡಿದರು. ಬುಧವಾರ ಕೊನೆಯದಾಗಿ ಮಾಜಿ ಸಚಿವ ಎಸ್. ಸುರೇಶ್‌ಕುಮಾರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸದನದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರಮಾಣಕ್ಕೂ ಆಕ್ಷೇಪ: ಸಾಮಾನ್ಯವಾಗಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಯಾವುದೇ ಆಕ್ಷೇಪಣೆ ಅಥವಾ ವಿವಾದಗಳಿಗೆ ಆಸ್ಪದವಿರುವುದಿಲ್ಲ. ಆಕ್ಷೇಪ ಏನೇ ಇದ್ದರೂ ಕಾರ್ಯಕ್ರಮ ಮುಗಿದ ನಂತರ ಮಾಡಬೇಕಾಗುತ್ತದೆ. ಆದರೆ, ಬಿಜೆಪಿಯ ಅರವಿಂದ ಚಂದ್ರಕಾಂತ ಬೆಲ್ಲದ್ ತಂದೆ, ತಾಯಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅದೇ ಪಕ್ಷದ ರುದ್ರೇಶ್‌ಗೌಡ ತಂದೆ, ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವಾಗ ರಾಯರೆಡ್ಡಿ ಸೇರಿದಂತೆ ಯಾರೂ ಆಕ್ಷೇಪಿಸಲೇ ಇಲ್ಲ.