ಸಬ್ಸಿಡಿ ನೇರ ವರ್ಗಾವಣೆ: ಜೂ.1ರಿಂದ ಜಾರಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎಲ್‌ಪಿಜಿ ಸಬ್ಸಿಡಿ ಗ್ರಾಹಕರ ಖಾತೆಗೆ ನೇರ ವರ್ಗಾವಣೆ ಯೋಜನೆ ತುಮಕೂರು ಸೇರಿದಂತೆ ದೇಶದ 18...
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎಲ್‌ಪಿಜಿ ಸಬ್ಸಿಡಿ ಗ್ರಾಹಕರ ಖಾತೆಗೆ ನೇರ ವರ್ಗಾವಣೆ ಯೋಜನೆ ತುಮಕೂರು ಸೇರಿದಂತೆ ದೇಶದ 18 ಜಿಲ್ಲೆಗಳಲ್ಲಿ ಜೂನ್ 1ರಿಂದ ಜಾರಿಯಾಗಲಿದೆ. ಆದರೆ, ಮೈಸೂರಿನಲ್ಲಿ ಮಾತ್ರ ಯೋಜನೆ ಜಾರಿಗೆ ಇನ್ನೂ ಒಂದು ತಿಂಗಳು ಬೇಕು.
ಯೋಜನೆಯಂತೆ, ಎಲ್‌ಪಿಜಿ ಸಿಲಿಂಡರ್‌ಗೆ ಬುಕ್ ಮಾಡಿರುವ ಗ್ರಾಹಕರ ಖಾತೆಗೆ ನೇರವಾಗಿ 435 ವರ್ಗಾವಣೆಯಾಗಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮುಂದಕ್ಕೆ: ಆರಂಭದಲ್ಲಿ ದೇಶದ 20 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿತ್ತು. ಆದರೆ, ವಿಧಾನಸಭೆ ಉಪಚುನಾವಣೆಯಿದ್ದ ಕಾರಣ ಕರ್ನಾಟಕದ ಮೈಸೂರು ಹಾಗೂ ಹಿಮಾಚಲಪ್ರದೇಶದ ಮಂಡಿಯಲ್ಲಿ ಒಂದು ತಿಂಗಳ ಬಳಿಕ ಯೋಜನೆ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಯ್ಲಿಯಿಂದ ಚಾಲನೆ: ಇದೇ ವೇಳೆ, ತುಮಕೂರಿನಲ್ಲಿ ಕೇಂದ್ರ ತೈಲ ಸಚಿವ ವೀರಪ್ಪಮೊಯ್ಲಿ ಅವರು ಜೂ.1ರಂದು ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂತೆಯೇ, ಹೈದರಾಬಾದ್‌ನಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾದ ಪನಬಕ ಲಕ್ಷ್ಮಿ ಅವರು ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ.