ಸಮವಸ್ತ್ರ ಬಂದಿಲ್ಲ; ಸೈಕಲ್ ಸಿಕ್ಕಿಲ್ಲ
ಹೊಸ ಸಮವಸ್ತ್ರ ಧರಿಸಿ, ಪುಸ್ತಕಗಳನ್ನು ಚೀಲದಲ್ಲಿ ತುಂಬಿಕೊಂಡು ಸರ್ಕಾರ ನೀಡುವ ಸೈಕಲ್ ತುಳಿಯುತ್ತ ಮೊದಲ ದಿನ ಶಾಲೆಗೆ ...
ರಾಜೀವ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 29
ಹೊಸ ಸಮವಸ್ತ್ರ ಧರಿಸಿ, ಪುಸ್ತಕಗಳನ್ನು ಚೀಲದಲ್ಲಿ ತುಂಬಿಕೊಂಡು ಸರ್ಕಾರ ನೀಡುವ ಸೈಕಲ್ ತುಳಿಯುತ್ತ ಮೊದಲ ದಿನ ಶಾಲೆಗೆ ಹೋಗಬೇಕು ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಭ್ರಮನಿರಸನವಾಗಿದೆ.
ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯದಿಂದ ರಾಜ್ಯದ ಅರ್ಧ ಭಾಗಕ್ಕೆ ಸಮವಸ್ತ್ರ ಪೂರೈಕೆಯಾಗಿಲ್ಲ. ಸುಮಾರು 26.25 ಲಕ್ಷ ಜತೆ ಸಮವಸ್ತ್ರ ಹಾಗೂ 5.52 ಲಕ್ಷ ಸೈಕಲ್ ಇನ್ನೂ ವಿತರಣೆಯಾಗಬೇಕಿದೆ.
ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ ಸಮವಸ್ತ್ರ ಹಾಗೂ ಪುಸ್ತಕಗಳ ವಿತರಣೆ ಪ್ರಕ್ರಿಯೆ ಜೂನ್ ಅಂತ್ಯದೊಳಗೆ ಮುಗಿಯಬಹುದು. ಚುನಾವಣೆ ನೀತಿ ಸಂಹಿತೆ ಕಾರಣದಿಂದ ಟೆಂಡರ್ ಪ್ರಕ್ರಿಯೆ ಸ್ಥಗಿತವಾಯಿತು, ಇದರಿಂದ ವಿತರಣೆಯಲ್ಲಿ ವಿಳಂಬವಾಗಿದೆ ಎಂಬ ಸಿದ್ದ ಉತ್ತರ ಅಧಿಕಾರಿಗಳ ಬಳಿಯಿದೆ. ಆದರೆ ಪರಿಣಾಮ ಮಾತ್ರ ವಿದ್ಯಾರ್ಥಿಗಳ ಮೇಲಾಗುತ್ತದೆ. ಒಂದನೇ ತರಗತಿಗೆ ಪ್ರವೇಶಪಡೆಯುತ್ತಿರುವ ಸುಮಾರು 5 ಲಕ್ಷಕ್ಕೂ ಅಧಿಕ ಮಕ್ಕಳು ಸಮವಸ್ತ್ರವಿಲ್ಲದೇ ಒಂದು ತಿಂಗಳು ಶಾಲೆಗೆ ಹೋಗಬೇಕಿದೆ.
ಇಲಾಖೆ ಮೂಲಗಳ ಪ್ರಕಾರ ಮೈಸೂರು ಹಾಗೂ ಬೆಳಗಾವಿ ವಿಭಾಗದಲ್ಲಿನ ಶೈಕ್ಷಣಿಕ ಜಿಲ್ಲೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ. ಆದರೆ ಬೆಂಗಳೂರು ಹಾಗೂ ಗುಲ್ಬರ್ಗ ವಿಭಾಗದ ಶೈಕ್ಷಣಿಕ ಜಿಲ್ಲೆಗಳಿಗೆ ಸಮವಸ್ತ್ರ ಹಾಗೂ ಪುಸ್ತಕಗಳನ್ನು ಪೂರೈಸಲಾಗಿದೆ. ಆದರೆ ಮೈಸೂರು ಹಾಗೂ ಬೆಳಗಾವಿ ವಿಭಾಗಗಳಲ್ಲಿ ಶೇ.80ರಷ್ಟು ಪುಸ್ತಕಗಳನ್ನು ಆಯಾ ಶಾಲೆ ಅಥವಾ ಬಿಇಒಗಳಿಗೆ ನೀಡಲಾಗಿದೆ.
ಚುನಾವಣೆ ನೀತಿ ಸಂಹಿತೆ ಕಾರಣವಂತೆ!: ಫೆಬ್ರವರಿ ಎರಡನೇಯ ವಾರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಧಿಸೂಚನೆ ಹೊರಡಿಸಲಾಯಿತು. ಇದಾದ ಬಳಿಕ ಮಾರ್ಚ್ ಕೊನೆಯ ವಾರದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. ಈ ಹಿನ್ನೆಲೆಯಲ್ಲಿ ಫೆಬ್ರವರಿಯಿಂದ ಮೇ ಎರಡನೇಯ ವಾರದವರೆಗೂ ಟೆಂಡರ್ ಪ್ರಕ್ರಿಯೆ ನಡೆಸಲಾಗಲಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
ಆದರೆ, ರಾಜ್ಯದಲ್ಲಿ ಒಂದಾದ ಮೋಲೊಂದು ಚುನಾವಣೆ ಬರಲಿದೆ, ಚುನಾವಣೆ ಸಂದರ್ಭದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ಬಿಡುವುದಿಲ್ಲ ಎನ್ನುವುದು ಇಲಾಖೆಯಲ್ಲಿನ ಪ್ರತಿಯೊಬ್ಬ ಹಿರಿಯ ಅಧಿಕಾರಿಗಳಿಗೂ ತಿಳಿದ ವಿಚಾರ. ಈ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳ ಮುಂಚೆಯೇ ಟೆಂಡರ್ ಪಕ್ರಿಯೆ ಮುಗಿಸಬೇಕಿತ್ತು. ಬೆಂಗಳೂರು ಹಾಗೂ ಗುಲ್ಬರ್ಗ ವಿಭಾಗಗಳಿಗೆ ಪಾಲಿಸಿದ ನಿಯಮವನ್ನು ಎಲ್ಲ ವಿಭಾಗಳಿಗೂ ಪ್ರಯತ್ನಿಸಬಹುದಿತ್ತು.
ಬೆಳಗಾವಿ ವಿಭಾಗಕ್ಕೆ 16,23,418 ಹಾಗೂ ಮೈಸೂರು ವಿಭಾಗಕ್ಕೆ 10,02,989 ಜತೆ ಸಮವಸ್ತ್ರಗಳನ್ನು ಶಿಕ್ಷಣ ಇಲಾಖೆ ವಿತರಿಸಬೇಕಿದೆ. ಈ ಸಂಬಂಧ ಟೆಂಡರ್ ಅಂತಿಮಗೊಂಡಿದ್ದು, ವಿತರಣೆಗೆ ಆದೇಶ ನೀಡಲಾಗಿದೆ. ಆದರೆ ಉತ್ಪಾದನೆಯ ವಿಳಂಬದಿಂದ ಸಮವಸ್ತ್ರ ಪೂರೈಕೆಯಾಗುತ್ತಿಲ್ಲ. ಇವೆರಡು ವಿಭಾಗಗಳಿಗೆ ಸಮವಸ್ತ್ರ ಪೂರೈಸಬೇಕಿದ್ದ ಸಂಸ್ಥೆಗಳಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಮೂಲಗಳ ಪ್ರಕಾರ ಸ್ಥಳೀಯ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಮವಸ್ತ್ರಗಳು ತಲುಪಲು ಇನ್ನೆರಡು ವಾರಗಳು ಬೇಕಾಗಲಿವೆ. ಈ ಹಿನ್ನೆಲೆಯಲ್ಲಿ ಜೂನ್ ಅಂತ್ಯದವರೆಗೆ ವಿದ್ಯಾರ್ಥಿಗಳಿಗೆ ಈ ವರ್ಷದ ಸಮವಸ್ತ್ರ ದೊರೆಯುವುದಿಲ್ಲ.
ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಬೆಳಗಾವಿ ವಿಭಾಗಲ್ಲಿಯೇ ಓದುತ್ತಿದ್ದಾರೆ ಎನ್ನುವುದನ್ನು ಇಲಾಖೆ ಮರೆಯಬಾರದು.
ಸೈಕಲ್ ಕೂಡ ಪಂಕ್ಚರ್: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸೈಕಲ್‌ನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮದಲ್ಲೂ ವಿಳಂಬವಾಗಿದೆ. ಇನ್ನೂ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ. ಜೂ.11ಕ್ಕೆ ಆರ್ಥಿಕ ಬಿಡ್ ಆಗುತ್ತಿದೆ. ಇದಾದ ಬಳಿಕ ಹಣಕಾಸು ಇಲಾಖೆಯ ಅನುಮತಿ ಪಡೆದು ಖರೀದಿಗೆ ಆದೇಶಿಸಬೇಕು. ಆ ಬಳಿಕ ಬಿಡ್ ಪಡೆದ ಕಂಪನಿಯು ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳಿಗೆ ಸೈಕಲ್‌ನ್ನು ವಿತರಿಸಬೇಕು. ಈ ಪ್ರಕ್ರಿಯೆಗಳು ಮುಗಿಯುವಷ್ಟರಲ್ಲಿಯೇ ಅಗಸ್ಟ್ 2ನೇ ವಾರ ದಾಟಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 5.52 ಲಕ್ಷ ಸೈಕಲ್‌ಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 5.52 ಲಕ್ಷ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮೊದಲ ಅವಧಿಯನ್ನು ಸೈಕಲ್ ಇಲ್ಲದೇ ಕಳೆಯಬೇಕಿದೆ.
ಇನ್ನು ಪುಸ್ತಕ ವಿತರಣೆಯ ವಿಷಯಕ್ಕೆ ಸಂಬಂಧಿಸಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಗೊಂದಲದಿಂದ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಇಲಾಖೆಯಿಂದ ಶೇ.90ಕ್ಕೂ ಅಧಿಕ ಪುಸ್ತಕಗಳು ಹಂಚಿಕೆಯಾಗಿವೆ. ಕೆಲ ಭಾಷಾ ಪುಸ್ತಕಗಳು ಇನ್ನು ವಿತರಿಸಿಲ್ಲ. ಬೆಳಗಾವಿ ಹಾಗೂ ಮೈಸೂರು ವಿಭಾಗದ ಕೆಲ ಶಾಲೆಗಳಿಗೆ ಪುಸ್ತಕ ಸಂಪೂರ್ಣವಾಗಿ ಸಿಕ್ಕಿಲ್ಲ ಎಂಬ ದೂರುಗಳು ಬಂದಿವೆ. ಸ್ಥಳೀಯ ಶಿಕ್ಷಕರು ಹಾಗೂ ಅಧಿಕಾರಿಗಳ ಪ್ರಕಾರ ಶೇ.80ರಷ್ಟು ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಮಾತ್ರ ಪುಸ್ತಕಗಳನ್ನು ಪೂರೈಸಲಾಗಿದೆ.
ಎರಡನೇ ಜತೆ ಸಮವಸ್ತ್ರಕ್ಕೆ ಕೊಕ್ಕೆ?
ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ನೀಡಲು ಹಿಂದಿನ ಸರ್ಕಾರ ಆದೇಶ ನೀಡಿತ್ತು. ಆ ಪ್ರಕಾರ 2012-13ನೇ ಸಾಲಿನ ಎರಡನೆ ಜತೆ ಬಟ್ಟೆಯನ್ನು ಮಾರ್ಚ್ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ವಿದ್ಯಾರ್ಥಿಗಳಿಗೆ ಹೊಸ ಸಮವಸ್ತ್ರ ದೊರೆಯುವವರೆಗೆ ಹಿಂದಿನ ವರ್ಷದ ಸಮವಸ್ತ್ರವನ್ನೇ ಬಳಸಬೇಕು. ಆದರೆ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಯಾವುದೇ ಸಮವಸ್ತ್ರವಿರುವುದಿಲ್ಲ. ಇನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2 ಜತೆ ಬಟ್ಟೆ ನೀಡುವ ಬಗ್ಗೆ ಇಲಾಖೆ ಸ್ಪಷ್ಟತೆ ಹೊಂದಿಲ್ಲ. ಪ್ರಾಥಮಿಕ ಹಂತದಲ್ಲಿ ಒಂದು ಜತೆ ಸಮವಸ್ತ್ರವನ್ನು ಮಾತ್ರ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಸೆಪ್ಟೆಂಬರ್ ತಿಂಗಳ ಬಳಿಕ ಮತ್ತೊಂದು ಜತೆ ನೀಡಲು ಇಲಾಖೆ ನಿರ್ಧರಿಸಿದೆ. ಆದರೆ ಈ ಬಗ್ಗೆ ಕೇಂದ್ರದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.