ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯಪಾಲರ ಭಾಷಣಕ್ಕೆ ಮಂತ್ರಿಗಳ ಸಮ್ಮತಿ

ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಸೋಮವಾರ ಮಾಡುವ ಭಾಷಣಕ್ಕೆ ಮಂತ್ರಿಗಳ ಪರಿಷತ್ ಸಭೆ ಸಮ್ಮತಿ ಸೂಚಿಸಿದೆ.

Vishwanath S
Updated On : 31 May 2013, 12:55 pm

ಕ.ಪ್ರ.ವಾರ್ತೆ, ಬೆಂಗಳೂರು, ಮೇ 30
ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಸೋಮವಾರ ಮಾಡುವ ಭಾಷಣಕ್ಕೆ ಮಂತ್ರಿಗಳ ಪರಿಷತ್ ಸಭೆ ಸಮ್ಮತಿ ಸೂಚಿಸಿದೆ. ಸುಮಾರು 35 ಪುಟಗಳ ಭಾಷಣವನ್ನು ಸಭೆಯಲ್ಲಿ ಸವಿವರವಾಗಿ ಅವಲೋಕಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲವು ಸಚಿವರು ನೀಡಿದ ಸಲಹೆ ಮೇರೆಗೆ ಹಲವು ಮಾರ್ಪಾಟುಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ವರ್ಗಾವಣೆ ಸಂಬಂಧ ಪೊಲೀಸ್ ಅನುಷ್ಠಾನ ಮಂಡಳಿಯಲ್ಲಿನ ಕೆಲವು ನಿಯಮಗಳ ಬದಲು ಹಾಗೂ ಮಾರ್ಪಾಡು ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಪೊಲೀಸ್ ಸಿಬ್ಬಂದಿ ಮೇಲೆ ಸಾರ್ವಜನಿಕ ದೂರುಗಳಿದ್ದರೂ ಅವರು ಎರಡು ವರ್ಷ ಅಧಿಕಾರ ಪೂರೈಸದಿದ್ದರೆ ಈಗಿರುವ ನೀತಿಯಂತೆ ವರ್ಗಾವಣೆ ಮಾಡುವಂತಿಲ್ಲ. ಇದರಿಂದ ಆಡಳಿತ ಯಂತ್ರಕ್ಕೆ ತೊಡಕಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಪೊಲೀಸ್ ವರ್ಗಾವಣೆ ಸಂಬಂಧ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅವುಗಳ ಶಿಫಾರಸಿನಂತೆ ಕ್ರಮ ಕೈಗೊಳ್ಳುವ ಬಗ್ಗೆ ತಿದ್ದುಪಡಿಗಾಗಿ ಸದನದಲ್ಲಿ ಮಂಡಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲು ಸಭೆ ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರಥಮ ಮಂತ್ರಿಗಳ ಪರಿಷತ್ ಸಭೆ ಸುಮಾರು ಎರಡೂ ಮುಕ್ಕಾಲು ಗಂಟೆ ನಡೆಯಿತು. ಇದರಲ್ಲಿ ರಾಜ್ಯಪಾಲರ ಭಾಷಣದ ಮಾರ್ಪಾಟಿಗೇ ಅಧಿಕ ಸಮಯ ವ್ಯಯವಾ ಗಿದೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ದರ್ಜೆ ಸಚಿವರು ಪಾಲ್ಗೊಳ್ಳುವಂತಿಲ್ಲ. ಆದರೆ, ಮಂತ್ರಿಗಳ ಪರಿಷತ್‌ನಲ್ಲಿ ಎಲ್ಲ ಸಚಿವರೂ ಭಾಗವಹಿಸಬಹುದು. ರಾಜ್ಯಪಾಲರ ಭಾಷಣಕ್ಕೆ ಮಂತ್ರಿಗಳ ಪರಿಷತ್ ಸಭೆಯ ಸಮ್ಮತಿ ಅಗತ್ಯ. ಹೀಗಾಗಿ, ಪ್ರಥಮ ಮಂತ್ರಿಗಳ ಪರಿಷತ್ ಸಭೆ ಗುರುವಾರ ನಡೆಯಿತು.

ಗೂಟದ ಕಾರು ನಿಷೇಧ

ವಾಹನಗಳ ಮೇಲೆ ಬೇಕಾಬಿಟ್ಟಿ 'ಕೆಂಪುದೀಪ' ಹಾಕಿಕೊಂಡು ಓಡಾಡುವವರಿಗೆ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಹಾಗೂ ಸಾರಿಗೆ ಕಾಯಿದೆ ಪ್ರಕಾರ ವಾಹನಗಳ ಮೇಲೆ 'ರೆಡ್ ಲೈಟ್‌' ಅಂದರೆ ಬೀಕಾನ್ ಹಾಕಿಕೊಳ್ಳಲು ಅರ್ಹವಾದವರಿಗೆ ಮಾತ್ರ ಇನ್ನು ಮುಂದೆ ಅವಕಾಶ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಮಂತ್ರಿಗಳ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ, ಕಾಯಿದೆಯನ್ವಯ 341 ವರ್ಗದ ಗಣ್ಯರು ಮಾತ್ರ ಬೀಕಾನ್ ಅನ್ನು ತಮ್ಮ ವಾಹನದ ಮೇಲೆ ಅಳವಡಿಸಿಕೊಳ್ಳಬಹುದು. ಉಳಿದ ಯಾರೂ ಬೀಕಾನ್ ಅಳವಡಿಸಿಕೊಳ್ಳುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement