ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶ್ರೀನಿವಾಸನ್ ಪದಚ್ಯುತಿ ಸುಲಭವಲ್ಲ

ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ, ಶ್ರೀನಿವಾಸ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂಬ ಒತ್ತಡ...

Vishwanath S
Updated On : 31 May 2013, 12:27 pm

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ, ಶ್ರೀನಿವಾಸ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂಬ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ. ಅದಕ್ಕಾಗಿ ಬಿಸಿಸಿಐನ ವಿಶೇಷ ಮಹಾಸಭೆ ಕರೆದು, ಅಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ಮೂಲಕ ಶ್ರೀನಿವಾಸ್ ಅವರನ್ನು ಕೆಳಗಿಸಲು ಬಿಸಿಸಿಐನಲ್ಲಿನ ಗುಂಪೊಂದು ಕೆಲಸ ಮಾಡುತ್ತಿದೆ ಎಂದೂ ಮೂಲಗಳು ತಿಳಿಸಿವೆ. ಆದರೆ, ಹಾಗೊಮ್ಮೆ ಅವಿಶ್ವಾಸ ಮಂಡಿಸಿದರೂ, ಶ್ರೀನಿವಾಸ್ ಅವರ ಪರವಾಗೇ ಹೆಚ್ಚು ಮತ ಬೀಳಲಿವೆ ಎನ್ನುತ್ತಿವೆ ಮತ್ತೊಂದು ಮೂಲ.
ಶ್ರೀನಿ ಕೆಳಗಿಳಿಸುವುದು ಸುಲಭದ ಮಾತಲ್ಲ...: ಎಲ್ಲರಿಗೂ ತಿಳಿದಿರುವಂತೆ, ಶ್ರೀನಿವಾಸ್ ಅವರು ಚುನಾಯಿತ ಅಧ್ಯಕ್ಷ. ದೇಶಾದ್ಯಂತ ಬಿಸಿಸಿಐನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಮತದಾನ ಮೂಲಕ ಶ್ರೀನಿವಾಸನ್ ಅವರನ್ನು ಆರಿಸಿ ತಂದು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರ ಸಂಖ್ಯೆ 30ರಷ್ಟಿದೆ.
ಈಗ, ಅವರನ್ನು ಅಧ್ಯಕ್ಷಗಿರಿಯಿಂದ ಕೆಳಗಿಳಿಸಲು, ಈ ಮೂವತ್ತು ಪದಾಧಿಕಾರಿಗಳಲ್ಲಿ ಸುಮಾರು 3ನೇ ಎರಡರಷ್ಟು ಜನ (ಕನಿಷ್ಠ 10 ಜನ) ಶ್ರೀನಿವಾಸನ್ ಅವರ ವಿರುದ್ಧವಾಗಿ ಅವಿಶ್ವಾಸ ಮಂಡಿಸಬೇಕು. ಸದ್ಯದ ಪರಿಸ್ಥಿಯಲ್ಲಿ ಅದು ಸಾಧ್ಯವಿಲ್ಲವೆನ್ನುತ್ತಿವೆ ಕೆಲ ಮೂಲಗಳು. ಬಿಸಿಸಿಐನಲ್ಲೇ ಶ್ರೀನಿವಾಸನ್ ಅವರ ವಿರುದ್ಧ ಕೆಲವರು ಧ್ವನಿಯೆತ್ತಿದ್ದರೂ, ಅವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ, ಕೇವಲ ಹೇಳಿಕೆಗಳ ಮೂಲಕ ಅವರನ್ನು ಕೆಳಗಿಳಿಯುವಂತೆ ಮಾಡುವುದು ಸಾಧ್ಯವಿಲ್ಲ. ಹಾಗಾಗಿ, ಸದ್ಯಕ್ಕೆ ಶ್ರೀನಿವಾಸ್ ಅವರು ಸೇಫ್ ಎನ್ನುತ್ತಿವೆ ಕೆಲ ಮೂಲಗಳು. ದೇಶದ ಪ್ರಾದೇಶಿಕ ಕ್ರಿಕೆಟ್ ಸಂಸ್ಥೆಗಳಲ್ಲಿ 11 ಸಂಸ್ಥೆಗಳು ಶ್ರೀನಿವಾಸ್ ಪರವಾಗಿವೆ. ಒಡಿಶಾ, ಜಾರ್ಖಂಡ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಸೌರಾಷ್ಟ್ರ, ಗುಜರಾತ್, ಮಹಾರಾಷ್ಟ್ರ, ವಿದರ್ಭ, ರಾಜಸ್ಥಾನ, ತಮಿಳುನಾಡು ಹಾಗೂ ಕರ್ನಾಟಕ - ಇವು ಶ್ರೀನಿವಾಸ್ ಪರವಾಗಿವೆ.
ಅಸ್ಸಾಂ, ತ್ರಿಪುರ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬರೋಡಾ, ಮಧ್ಯಪ್ರದೇಶ ಹಾಗೂ ಕೇರಳ ಸಂಸ್ಥೆಗಳು (ಒಟ್ಟು 9 ಸಂಸ್ಥೆಗಳು) ಶ್ರೀನಿವಾಸನ್ ಅವರ ವಿರೋಧಿಗಳು.
ಇನ್ನು, ಬಂಗಾಳ, ಮುಂಬೈ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ಹೈದರಾಬಾದ್, ಆಂಧ್ರಪ್ರದೇಶ, ಗೋವಾ, ನ್ಯಾಷನಲ್ ಕ್ರಿಕೆಟ್ ಕ್ಲಬ್, ಸರ್ವೀಸಸ್, ಯೂನಿವರ್ಸಿಟೀಸ್ ಹಾಗೂ ರೇಲ್ವೇಸ್ ಸಂಸ್ಥೆಗಳು (ಒಟ್ಟು 10) ನಿರ್ಲಿಪ್ತ ಮನೋಭಾವ ಹೊಂದಿವೆ. ಇವು ಶ್ರೀನಿ ಪರವಾಗಿಯೂ ಇಲ್ಲ. ವಿರೋಧವಾಗಿಯೂ ಇಲ್ಲ. ಬಿಸಿಸಿಐ ಜೊತೆ ಮೂವರು ಸಹಾಯಕ ಸಂಸ್ಥೆಗಳೂ ಇವೆಯಾದರೂ, ಅವುಗಳ ಪದಾಧಿಕಾರಿಗಳಿಗೆ ಮತದಾನದ ಹಕ್ಕಿಲ್ಲ.
ಇವೆಲ್ಲವನ್ನೂ ಹೊರತುಪಡಿಸಿದಂತೆ, ಶ್ರೀನಿವಾಸ್ ಅವರೂ 31ನೇ ಮತ ಹಾಕುವ ಹಕ್ಕು ಹೊಂದಿದ್ದಾರೆ. ಆದರೆ, ಅವಿಶ್ವಾಸ ನಿರ್ಣಯ ಮಂಡನೆಯಾದರೆ, ಶ್ರೀನಿ ಅವರಿಗೆ ಮತದಾನ ಹಕ್ಕು ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಶ್ರೀನಿ ಪರ- ವಿರೋಧಗಳ ಲೆಕ್ಕಾಚಾರ
ಪರ 11ಮತ
-    ಒಡಿಶಾ
-    ಜಾರ್ಖಂಡ್
-    ಹರ್ಯಾಣ
-    ಜಮ್ಮು- ಕಾಶ್ಮೀರ
-    ಸೌರಾಷ್ಟ್ರ
-    ಗುಜರಾತ್
-    ಮಹಾರಾಷ್ಟ್ರ
-    ವಿದರ್ಭ
-    ರಾಜಸ್ಥಾನ
-   ತಮಿಳುನಾಡು
-    ಕರ್ನಾಟಕ

ವಿರುದ್ಧ 9 ಮತ
-    ಆಸ್ಸಾಂ
-    ತ್ರಿಪುರ
-    ದೆಹಲಿ
-    ಪಂಜಾಬ್
-    ಹಿಮಾಚಲಪ್ರದೇಶ
-    ಉತ್ತರಪ್ರದೇಶ
-    ಬರೋಡಾ
-   ಮಧ್ಯಪ್ರದೇಶ
-   ಕೇರಳ

ತಟಸ್ಥ 10 ಮತ
- ಪಶ್ಚಿಮ ಬಂಗಾಳ
-  ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ 
-  ಮುಂಬೈ 
-  ಹೈದರಾಬಾದ್
-  ಆಂಧ್ರಪ್ರದೇಶ 
-  ರಾಷ್ಟ್ರೀಯ ಕ್ರಿಕೆಟ್ ಕ್ಲಬ್ 
-  ಸರ್ವೀಸಸ್
- ಯುನಿವರ್ಸಿಟಿಸ್ 
- ರೇಲ್ವೇಸ್ 
- ಗೋವಾ

ಮೇಯಪ್ಪನ್ ಆರೋಪ ಸಾಬೀತಾದರೆ...
ಫಿಕ್ಸಿಂಗ್ ಹಗರಣದಲ್ಲಿ ಮೇಯಪ್ಪನ್ ಹಗರಣ ಸಾಬೀತಾದರೆ, ಈ ಕೆಳಗಿನ ಮೂರು ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳಬಹುದಾಗಿದೆ.
1.    ಮೇಯಪ್ಪನ್ ಆರೋಪ ಸಾಬೀತಾದಲ್ಲಿ, ಸಿಎಸ್‌ಕೆ ಫ್ರಾಂಚೈಸಿಯನ್ನು ಬಿಸಿಸಿಐ ರದ್ದುಪಡಿಸಬಹುದು.
2.    ಮೇಯಪ್ಪನ್ ಅವರ ಹಗರಣ ಗೊತ್ತಿದ್ದೂ, ಸಿಎಸ್‌ಕೆ ಫ್ರಾಂಚೈಸಿಯು ಅವರನ್ನು ಸಿಎಸ್‌ಕೆ ಮುಖ್ಯಸ್ಥ ಸ್ಥಾನದಲ್ಲಿ ಮುಂದುವರೆಸಿದ್ದಲ್ಲಿ, ಫ್ರಾಂಚೈಸಿಯನ್ನು ಅನಿರ್ದಿಷ್ಟಾವಧಿವರೆಗೆ ನಿಷೇಧಿಸಬಹುದಾಗಿದೆ. ಅಥವಾ ದೊಡ್ಡ ಮೊತ್ತದ ದಂಡವನ್ನು ಫ್ರಾಂಚೈಸಿ ಮೇಲೆ ಹೇರಬಹುದಾಗಿದೆ.
3.    ಮೇಯಪ್ಪನ್ ಹಗರಣದ ಬಗ್ಗೆ ಯಾವ ಅರಿವೂ ಇಲ್ಲದೇ, ಅವರನ್ನು ಸಿಎಸ್‌ಕೆ ಮುಖ್ಯಸ್ಥರನ್ನಾಗಿ ಮುಂದುವರೆಸಿದ್ದರೆ, ಸಿಎಸ್‌ಕೆ ಫ್ರಾಂಚೈಸಿಗೆ ಮುಂದಿನ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಬಹುದು. ಅಲ್ಲದೇ, ಕೋಟಿಗಟ್ಟಲೇ ದಂಡವನ್ನೂ ಹೇರಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement