ಮೇಲ್ವಿಚಾರಣಾ ಸಮಿತಿ ಸಭೆ: ವಿರೋಧಿಸಲಿದೆ ಕರ್ನಾಟಕ
ಸುಪ್ರೀಂ ಕೋರ್ಟ್ ಆದೇಶದಂತೆ ರೂಪುಗೊಂಡಿರುವ 'ಕಾವೇರಿ ಮೇಲ್ವಿಚಾರಣಾ ಸಮಿತಿ'ಯು ಕಾವೇರಿ ನಿರ್ವಹಣಾ ಮಂಡಳಿಯ...
ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ರೂಪುಗೊಂಡಿರುವ 'ಕಾವೇರಿ ಮೇಲ್ವಿಚಾರಣಾ ಸಮಿತಿ'ಯು ಕಾವೇರಿ ನಿರ್ವಹಣಾ ಮಂಡಳಿಯ ಹಾದಿಯಲ್ಲೇ ಹೆಜ್ಜೆ ಹಾಕುವುದಕ್ಕೆ ಕರ್ನಾಟಕ ಶತಾಯಗತಾಯ ವಿರೋಧಿಸಲಿದೆ. ನೂತನ ಸಮಿತಿಯ ಪ್ರಥಮ ಸಭೆ ಶನಿವಾರ ನಡೆಯಲಿದ್ದು, ಕರ್ನಾಟಕ ತನ್ನ ವಿರೋಧವನ್ನು ದಾಖಲಿಸಲಿದೆ.
ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಈ ನಿಟ್ಟಿನಲ್ಲಿ ಕಾನೂನು ತಜ್ಞ ಫಾಲಿ ನಾರಿಮನ್ ಅವರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ.
ಕಾವೇರಿ ನ್ಯಾಯಾಧಿಕರಣದ ಐತೀರ್ಪಿನಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಕಾಲದಲ್ಲಿ ಆಗದಿರುವ ಬಗ್ಗೆ ತಮಿಳುನಾಡು ತಕರಾರು ತೆಗೆದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರ ವಕೀಲರಾದ ಫಾಲಿ ನಾರಿಮನ್ ಅವರ ಸಲಹೆ ಮೇರೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡುವಂತೆ ಮೇ 10ರಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.
ನೂತನ ಮೇಲ್ವಿಚಾರಣಾ ಸಮಿತಿಯು ಶನಿವಾರದ ಸಭೆಯಲ್ಲಿ ಕಾರ್ಯ ನಿರ್ವಹಣೆ ಕುರಿತು ತೀರ್ಮಾನ ಕೈಗೊಳ್ಳಲಿದೆ.
ಮಾರ್ಗಸೂಚಿ ನೀಡಿದ್ದ ಐತೀರ್ಪು: ಕಾವೇರಿ ನ್ಯಾಯಾಧಿಕರಣ ತನ್ನ ಅಂತಿಮ ಐತೀರ್ಪಿನಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸೂಚಿಸಿತ್ತು. ಮಂಡಳಿಯು ಕಾರ್ಯನಿರ್ವಹಿಸಲು ಹದಿನಾಲ್ಕು ಅಂಶಗಳ ಮಾರ್ಗಸಚಿಯನ್ನೂ ನೀಡಿತ್ತು.
ಜೂನ್ 1ರಿಂದ ಆರಂಭವಾಗಲಿರುವ 'ಜಲವರ್ಷ'ದಲ್ಲಿ ಕಾರ್ಯ ನಿರ್ವಹಿಸಲಿರುವ ನೂತನ ಮೇಲ್ವಿಚಾರಣಾ ಸಮಿತಿಯು ನಿರ್ವಹಣಾ ಮಂಡಳಿಗಾಗಿ ರೂಪಿಸಿರುವ ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಕಾವೇರಿ ನದಿ ಪಾತ್ರದ ಜಲಾಶಯಗಳ ಹೊರ ಹರಿವಿನ ಪ್ರಮಾಣ ನಿಯಂತ್ರಣ ಮಂಡಳಿಯ ಆದೇಶದಂತೆ ನಿಗದಿ ಮಾಡಬೇಕೆಂಬುದು ಸೇರಿದಂತೆ ಹಲವು ಅಂಶಗಳು ಕರ್ನಾಟಕಕ್ಕೆ ಮಾರಕವಾಗಲಿವೆ.
ನ್ಯಾಯಾಧಿಕರಣವು ಆಯಾ ರಾಜ್ಯಗಳಿಗೆ ಹಂಚಿಕೆ ಮಾಡರುವ ನೀರಿನ ಪ್ರಮಾಣವನ್ನು ಮೀರಿ ಬಳಕೆ ಮಾಡಿರುವುದನ್ನು ನಿಯಂತ್ರಿಸಲು ನ್ಯಾಯಾಧಿಕಣದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅದಕ್ಕೆ ಕರ್ನಾಟಕ ಸಮ್ಮತಿಸುವುದೆಂದರೆ- ನಿರ್ವಹಣಾ ಮಂಡಳಿಯನ್ನು ಒಪ್ಪಿಕೊಂಡಂತೆಯೇ ಆಗುತ್ತದೆ. ಹೀಗಾಗಿ ಮೇಲ್ವಿಚಾರಣಾ ಸಮಿತಿಯು ನಿರ್ವಹಣಾ ಸಮಿತಿ ಮಾದರಿಯಲ್ಲಿ ಕಾರ್ಯನಿರ್ವಹಿಸುವುದನ್ನು ಕರ್ನಾಟಕ ಬಿಲ್ಕುಲ್ ಒಪ್ಪದಿರಲು ನಿರ್ಧರಿಸಿದೆ. ಇದುವರೆಗೆ ಇದ್ದ ಕಾವೇರಿ ನಿಗಾ ಸಮಿತಿಯಂತೆಯೇ ತಾತ್ಕಾಲಿಕ ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಿಸಬೇಕೆಂಬುದು ಕರ್ನಾಟಕ ಒತ್ತಾಯ.
ನೀರು ಬಿಡುಗಡೆ ಮೇಲೆ ನಿಯಂತ್ರಣ ಸಾಧಿಸುವ ನಿರ್ವಹಣಾ ಮಂಡಳಿಯು, ಅದನ್ನು ತನ್ನ ಅಧಿಕಾರ ಜಾರಿಗೊಳಿಸಲು ಜಲಾಶಯಗಳಿಗೆ ತನ್ನ ಪ್ರತಿನಿಧಿಗಳು ಭೇಟಿ ನೀಡಲು ಮುಕ್ತ ಅವಕಾಶವನ್ನು ದಕ್ಕಿಸಿಕೊಳ್ಳಲಿದೆ. ಕರ್ನಾಟಕಕ್ಕೆ ಮಾರಕವಾಗುವ ಮತ್ತೊಂದು ಅಂಶವೆಂದರೆ- ಕುಡಿಯುವ ನೀರಿನ ಹಂಚಿಕೆಯನ್ನು ನ್ಯಾಯಾಧಿಕರಣ ಮಾಡಿದೆ. ಮತ್ತೆ ಯಾವುದೇ ರಾಜ್ಯ ಹೊಸದಾಗಿ ಕುಡಿಯುವ ನೀರಿಗೆ ಬೇಡಿಕೆ ಇಡುವಂತಿಲ್ಲ ಎಂಬುದು. ವಾಸ್ತವವಾಗಿ ಕುಡಿಯುವ ನೀರು ಹಂಚಿಕೆಯಲ್ಲಿ ನ್ಯಾಯಾಧಿಕರಣ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದೆ. ಒಂದು ವೇಳೆ ಮಾರ್ಗಸೂಚಿಗಳನ್ನು ಒಪ್ಪಿಕೊಂಡರೆ ಕೋಟಿ ಮೀರುತ್ತಿರುವ ಬೆಂಗಳೂರಿಗೆ ಹೊಸದಾಗಿ ಕಾವೇರಿ ನೀರು ಕೊಡಲು ಮುಂದೆಂದೂ ಸಾಧ್ಯವಾಗುವುದೇ ಇಲ್ಲ!
ಇನ್ನು ಅರ್ಜಿ ಇತ್ಯರ್ಥವಾಗಿಲ್ಲ: ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಸಿವಿಲ್ ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ. ಆ ಅರ್ಜಿಗಳು ಇತ್ಯರ್ಥವಾಗಿ ತನಗೆ ಆಗಿರುವ ಅನ್ಯಾಯ ಸರಿಪಡಿಸಿದರೆ ಮಾತ್ರ ಮೇಲ್ವಿಚಾರಣಾ ಸಮಿತಿ ರಚನಗೆ ಕರ್ನಾಟಕ ಒಪ್ಪಲಿದೆ.