ಖಾಸಗಿ ಶಾಲೆಗಳಲ್ಲಿಲ್ಲ ರಾಜ್ಯೋತ್ಸವ!!
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಪರವಾನಗಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಿ ಲಾಭ ಮಾಡುತ್ತಿರುವ ಖಾಸಗಿ...
ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಪರವಾನಗಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಿ ಲಾಭ ಮಾಡುತ್ತಿರುವ ಖಾಸಗಿ ಶಾಲೆಗಳು ಈಗ ಕನ್ನಡ ರಾಜ್ಯೋತ್ಸವಕ್ಕೂ ತಿಲಾಂಜಲಿ ಇಟ್ಟಿವೆ! ಇತ್ತ ನಮ್ಮ ರಾಜ್ಯ ಸರ್ಕಾರ ಈ ವರ್ಷ ರಾಜ್ಯೋತ್ಸವ ಆಚರಣೆ ಕುರಿತು ಸುತ್ತೋಲೆ ಹೊರಡಿಸುವುದನ್ನೂ ಮರೆತಿದೆ!!
ಕನ್ನಡ ಉಳಿಸಿ ಎಂದು ಹೋರಾಟ ನಡೆಯುತ್ತಿದ್ದರೆ, ಇನ್ನು ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಉಳಿಸಿ ಎಂಬ ಹೋರಾಟವನ್ನೂ ಮಾಡಬೇಕಾದ ಅನಿವಾರ್ಯತೆ ಗೋಚರಿಸುತ್ತಿದೆ. ಶಾಲೆಗಳಲ್ಲಿ ರಾಜ್ಯೋತ್ಸವ ಆಚರಣೆಯಿಂದ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ರಾಜ್ಯ, ಭಾಷೆ, ನೆಲದ ಬಗ್ಗೆ ಅಭಿಮಾನ ಮತ್ತು ಜಾಗೃತಿ ಮೂಡುತ್ತಿತ್ತು. ಆದರೆ ಶಾಲೆಗಳು ಕನ್ನಡ ಮಾಧ್ಯಮದ ಜತೆಗೆ, ಕನ್ನಡ ರಾಜ್ಯೋತ್ಸವನ್ನೂ ಕಡೆಗಣಿಸಿರುವುದು, ಮುಂದಿನ ಪೀಳಿಗೆಯಲ್ಲಿ ಕನ್ನಡದ ನೆಲ, ಜಲ, ಭಾಷೆ ಮೇಲಿರುವ ಅಭಿಮಾನ ಮತ್ತು ಪ್ರೀತಿ ಮತ್ತಷ್ಟು ಕಡಿಮೆಯಾಗಲು ಕಾರಣವಾಗಬಹುದು ಎಂಬ ಆತಂಕ ಸೃಷ್ಟಿಸಿದೆ.
ಶಾಲೆಗಳಲ್ಲಿ ಪ್ರೀತಿಯಿಂದಲೋ, ನೆಪಕ್ಕೋ ಅಂತೂ ಕನ್ನಡ ರಾಜ್ಯೋತ್ವವ ಆಚರಣೆ ನಡೆಯುತ್ತಿತ್ತು. ಆದರೆ ಈ ವರ್ಷವಂತೂ ಖಾಸಗಿ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ನ.1ನ್ನೂ ರಜೆಯನ್ನಾಗಿ ಘೋಷಿಸಿರುವ ಶಾಲೆಗಳು, ಕನ್ನಡ ರಾಜ್ಯೋತ್ಸವ ಆಚರಣೆಗೆ ತಿಲಾಂಜಲಿ ಇಟ್ಟಿವೆ.
ಇತ್ತ ಕನ್ನಡದ ಬಗ್ಗೆ ಅಪಾರ ಕಾಳಜಿ ವಹಿಸಬೇಕಾಗಿದ್ದ ನಮ್ಮದೇ ಸರ್ಕಾರ ಎಲ್ಲ ಶಾಲೆಗಳಿಗೆ ರಾಜ್ಯೋತ್ಸವ ಆಚರಣೆ ಕುರಿತು ಕನಿಷ್ಠ ಸುತ್ತೋಲೆ ಕಳುಹಿಸಲೂ ಮರೆತು ಕೂತಿದೆ. ಇದು ರಾಜ್ಯೋತ್ಸವ ಆಚರಿಸದಿರಲು ಖಾಸಗಿ ಶಾಲೆಗಳಿಗೆ ಉತ್ತಮ ಅವಕಾಶ ಕಲ್ಪಿಸಿದೆ. ಈಗ ಶಾಲೆಗಳು ಕನ್ನಡ ರಾಜ್ಯೋತ್ಸವ ಆಚರಿಸಿಲ್ಲ ಎಂದು ಕ್ರಮ ಕೈಗೊಳ್ಳೋಣ ಅಂದರೆ, ಸರ್ಕಾರವೇ ಸುತ್ತೋಲೆ ಹೊರಡಿಸಿಲ್ಲ. ಆದರೆ ಎಂದಿನಂತೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಯಾಗಿದ್ದು, ಇದು ಹೀಗೇ ಮುಂದುವರಿದರೆ ರಾಜ್ಯೋತ್ಸವ ಆಚರಣೆ ಕೇವಲ ಸರ್ಕಾರಿ ಶಾಲೆಗಳ ಕರ್ತವ್ಯ ಮತ್ತು ಸರ್ಕಾರಿ ಶಾಲೆಯಲ್ಲಿ ಕಲಿಯುವವರಿಗೆ ಮಾತ್ರ ಸೀಮಿತ ಎಂಬ ಭಾವನೆ ಮೊಳೆಯುವುದರಲ್ಲಿ ಅನುಮಾನವಿಲ್ಲ.
ಈ ಬಾರಿ ಶಿಕ್ಷಣ ಸಚಿವರು ಎಲ್ಲ ಶೈಕ್ಷಣಿಕ ವಲಯಗಳಿಂದ ಶಾಲಾ ಮಕ್ಕಳನ್ನು ಬೆಂಗಳೂರಿಗೇ ಕರೆಸಿ, ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದರು. ಒಳ್ಳೆಯದೇ. ಆದರೆ ಬೆಂಗಳೂರಿನ ಶಾಲೆಗಳಲ್ಲಿ ಮತ್ತು ಎಲ್ಲ ಶಾಲೆಗಳಲ್ಲಿ ರಾಜ್ಯೋತ್ಸವ ಆಚರಿಸಿ ಎಂದು ಸುತ್ತೋಲೆ ಹೋರಡಿಸುವುದನ್ನು ಮರೆತರು. ಸರ್ಕಾರ ಮರೆತರೆ ಮರೆಯಲಿ. ಆದರೆ ನಮ್ಮದೇ ರಾಜ್ಯ ಉದಯಿಸಿದ ದಿನವನ್ನು ಸ್ಮರಿಸುವ ಕನಿಷ್ಠ ಸೌಜನ್ಯ ಕೂಡ ಖಾಸಗಿ ಶಾಲೆಗಳಲ್ಲಿ ಕಾಣದಿರುವುದು ಕನ್ನಡದ ಬಗ್ಗೆ ಅವರಿಗಿರುವ ಗೌರವ, ಪ್ರೀತಿಗೆ ಹಿಡಿದ ಕನ್ನಡಿ.
ಆಗಸ್ಟ್ 15, ಜನೆವರಿ 26 ಮುಂತಾದ ರಾಷ್ಟ್ರೀಯ ಹಬ್ಬಗಳನ್ನೂ ಕೆಲವು ಖಾಸಗಿ ಶಾಲೆಗಳು ಕಡೆಗಣಿಸಿದ ಉದಾಹರಣೆಗಳಿವೆ. ರಜೆ ಆನಂದಿಸುವುದಕ್ಕೋಸ್ಕರ ಹಿಂದಿನ ದಿನವೇ ಕಾರ್ಯಕ್ರಮ ನಡೆಸುವ ಪರಿಪಾಠ ರೂಢಿಸಿಕೊಳ್ಳುತ್ತಿದ್ದಾರೆ. ಹಿಂದಿನ ದಿನವೋ, ಅದೇ ದಿನವೂ ಅದನ್ನು ಅಚರಿಸುವ ಪರಿಪಾಠವಾದರೂ ಇದೆ. ಆದರೆ ರಾಜ್ಯೋತ್ಸವ ಆಚರಣೆಯೇ ಇಲ್ಲವಾಗಿದೆ.
ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆಯಿಂದ ಮಕ್ಕಳಿಗೆ ಆ ದಿನದ, ಆ ರಜೆಯ ಮಹತ್ವದ ಅರಿವಾಗುತ್ತಿತ್ತು. ಅದರ ಜತೆಗೆ ಕನ್ನಡ, ರಾಜ್ಯದ ಉದಯ, ಭಾಷೆ, ಕನ್ನಡದ ಹೋರಾಟಗಳು, ಸಮಸ್ಯೆಗಳು ಕೊಂಚಮಟ್ಟಿಗಾದರೂ ಅವರ ಅರಿವಿಗೆ ಬರುತ್ತಿತ್ತು. ಖಾಸಗಿ ಶಾಲೆಗಳು ರಾಜ್ಯೋತ್ಸವ ಆಚರಣೆಯನ್ನೇ ಕೈಬಿಟ್ಟ ಹಿನ್ನೆಲೆಯಲ್ಲಿ ಮಕ್ಕಳಿಗೆ ರಾಜ್ಯೋತ್ಸವ ಮಹತ್ವದ ಅರಿವೇ ಇಲ್ಲದಂತಾಗುವುದರಲ್ಲಿ ಅನುಮಾನವಿಲ್ಲ.
ಹೀಗೆ ಆದರೆ ಮಕ್ಕಳಿಗೆ ಕನ್ನಡ ಹಬ್ಬದ ಅರಿವೇ ಇರುವುದಿಲ್ಲ
ಖಾಸಗಿ ಶಾಲೆಗಳು ರಾಜ್ಯೋತ್ಸವ ಆಚರಿಸದಿರುವುದು ನನ್ನ ಗಮನಕ್ಕೆ ಬಂದಿಲ್ಲ. ರಾಜ್ಯೋತ್ಸವ ಆಚರಿಸದಿರುವ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆ ಪಡೆಯಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
-ಕಿಮ್ಮನೆ ರತ್ನಾಕರ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು.
ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಚರ್ಚಿಸಿ ಮುಂದಿನ ವರ್ಷದಿಂದ ರಾಜ್ಯೋತ್ಸವ ಕಡ್ಡಾಯ ಆಚರಣೆಗೆ ಆದೇಶ ಹೊರಡಿಸಲು ಪ್ರಯತ್ನಿಸುತ್ತೇನೆ. ರಾಜ್ಯೋತ್ಸವ ಕೇವಲ ಸರ್ಕಾರಿ ಆಚರಣೆಗೆ ಸೀಮಿತವಾಗುವುದು ಸೂಕ್ತವಲ್ಲ. ಈ ಸಂಬಂಧ ಶಿಕ್ಷಣ ಇಲಾಖೆ ಆದೇಶ ಹೊರಡಿಸಬೇಕಿತ್ತು.
- ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ರಾಜ್ಯೋತ್ಸವದ ಆಚರಣೆಗೆ ಖಾಸಗಿ ಶಾಲೆಗಳ ನಿರ್ಲಕ್ಷ್ಯ ಖಂಡನೀಯ. ರಾಜ್ಯ ಸರ್ಕಾರವಾದರೂ ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಮುಂದಿನ ವರ್ಷಗಳಲ್ಲಿ ಇದು ಪನರಾವರ್ತಿಸದಂತೆ ಸರ್ಕಾರ ಆದೇಶಿಸಬೇಕು.
- ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
- ವಿನಾಯಕ ಭಟ್ಟ ಮೂರೂರು/ರಾಜೀವ ಹೆಗಡೆ