ಧರ್ಮಸ್ಥಳ ನಿಂದಕರ ವಿರುದ್ಧ ಕಾನೂನು ಸಮರ
ಮಂಗಳೂರು: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಹಾಗೂ ದಾಖಲೆ ರಹಿತ ಆರೋಪಿ ಮಾಡಿ ತೇಜೋವಧೆ ನಡೆಸಿದವರ ವಿರುದ್ಧ ಕಾನೂನು ಸಮರಕ್ಕೆ ನಗರದ ಎಸ್ಡಿಎಂ ಕಾನೂನು ಕಾಲೇಜ್ ನಿರ್ಧರಿಸಿದೆ.
ಶುಕ್ರವಾರ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಬಿ.ಕೆ.ರವೀಂದ್ರ, ಡಾ. ವೀರೇಂದ್ರ ಹೆಗ್ಗಡೆ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರಾಗಿದ್ದು, ಅವರ ಹಾಗೂ ಕ್ಷೇತ್ರದ ವಿರುದ್ಧ ಮಾಡಿರುವ ದಾಖಲೆ ರಹಿತ ಆರೋಪಗಳಿಂದ ಎಲ್ಲರ ಮನಸ್ಸಿಗೆ ನೋವಾಗಿದೆ. ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣವನ್ನು ಗುರಿಯಾಗಿಸಿ ಮಹೇಶ್ ಶೆಟ್ಟಿ ಮತ್ತು ನಾಗರಿಕ ಸೇವಾ ಟ್ರಸ್ಟ್ನ ಸೋಮನಾಥ ನಾಯಕ್ ಬಹಿರಂಗವಾಗಿ ನಿಂದಿಸಿದ್ದಾರೆ. ಈ ಕುರಿತು ಎಲ್ಲ ದಾಖಲೆಗಳು ನಮ್ಮಲ್ಲಿವೆ. ಅದರ ಆಧಾರದಲ್ಲಿ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಕೋರ್ಟ್ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹಾಕಲಿದ್ದೇವೆ. ಯಾವುದೇ ಕಾರಣಕ್ಕೂ ಬೀದಿಗಿಳಿದು ಹೋರಾಡುವುದಿಲ್ಲ ಎಂದರು.
ಆಪಾದನೆಗೆ ದಾಖಲೆ ಬೇಕು: ಪ್ರಜಾಪ್ರಭುತ್ವದಲ್ಲಿ ಯಾರ ವಿರುದ್ಧ ಆರೋಪಿಸಿದರೂ ಅದಕ್ಕೆ ಸೂಕ್ತ ದಾಖಲೆ ಬೇಕು. ಅದಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ನೈತಿಕ ಮಾರ್ಗವೂ ಅಲ್ಲ. ಧರ್ಮಸ್ಥಳದ ಯೋಜನೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಮಾಹಿತಿ ಕೇಳಬೇಕೇ ವಿನಾಃ ವೃಥಾ ಮಾಧ್ಯಮ ಮುಂದೆ ತೇಜೋವಧೆಗೆ ಮುಂದಾಗುವುದು ಆರೋಗ್ಯಕರ ಲಕ್ಷಣವಲ್ಲ ಎಂದರು.
ತಡೆಯಾಜ್ಞೆ ಇದ್ದರೂ ಆರೋಪ: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ವೃಥಾ ಆರೋಪ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದ್ದರೂ ಕೆಲವರು ಅದನ್ನೇ ಮುಂದುವರಿಸಿ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ. ವಿನಾಃ ಕಾರಣ ಧರ್ಮಾಧಿಕಾರಿ ಮತ್ತು ಕ್ಷೇತ್ರದ ವಿರುದ್ಧ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿದೆ. ಸೌಜನ್ಯಾ ಹತ್ಯಾಚಾರ ಪ್ರಕರಣವನ್ನು ನಾವು ಖಂಡಿಸುತ್ತಿದ್ದು, ಸಿಐಡಿ ವರದಿಯಲ್ಲಿ ಧರ್ಮಾಧಿಕಾರಿ ಕುಟುಂಬದ ಪಾತ್ರ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಅಗತ್ಯವಾದರೆ ಸಿಬಿಐ ತನಿಖೆಗೆ ಸಮ್ಮತಿಸುತ್ತೇವೆ. ಆದರೂ ಕೆಲವರು ಧರ್ಮಾಧಿಕಾರಿಗಳ ಹಾಗೂ ಕ್ಷೇತ್ರದ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.