ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಗ್‌ನಗ್ತಾ ಸಿಡಿಸಿ ಈ ಬಾಂಬು!

ದೇಶಾದ್ಯಂತ ಈಗ ಚುನಾವಣೆ ಕಾವು. ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್‌ನಿಂದ ಅರುಣಾಚಲ ದವರೆಗೆ ಈಗ ರಾಜಕೀಯ ನಾಯಕರ ಘೋಷಣೆಯ...

Mainashree
Updated On : 3 Nov 2013, 10:35 am

ದೇಶಾದ್ಯಂತ ಈಗ ಚುನಾವಣೆ ಕಾವು. ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್‌ನಿಂದ ಅರುಣಾಚಲದವರೆಗೆ ಈಗ ರಾಜಕೀಯ ನಾಯಕರ ಘೋಷಣೆಯ ಘರ್ಜನೆ. ದೇಶದ ಯಾವುದೋ ಮೂಲೆಯಲ್ಲಿ ನೀಡಿದ ಹೇಳಿಕೆ ಇನ್ನೆಲ್ಲೋ ಸಿಡಿಯುತ್ತಿದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ನಮ್ಮ ನಾಯಕರ 'ಬಾಯಿ  ಪಟಾಕಿ'ಗಳು ಆಗಾಗ ಸದ್ದು ಮಾಡಿ ಗದ್ದಲ ಎಬ್ಬಿಸುತ್ತಿವೆ. ಈ ಸಂದರ್ಭದಲ್ಲೇ ದೀಪಾವಳಿ ಹಬ್ಬವೂ ಬಂದಿದೆ. ಹೆಸರೇ ಹೇಳುವಂತೆ ಇದು ದೀಪದ ಹಬ್ಬವಾದರೂ ಪಟಾಕಿ ಇಲ್ಲದೇ ಮೆರುಗಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ತಯಾರಕರು ಒಂದು ವೇಳೆ ಕೆಲ ಮುಖಂಡರ ಹೆಸರಿನಲ್ಲಿ ಪಟಾಕಿ ತಯಾರಿಸಿದರೆ ಅವು ಹೇಗೆ ಸದ್ದು ಮಾಡಬಹುದು ಎಂಬುದರ ಬಗ್ಗೆ ಅಣಕು ಬರಹ ಇಲ್ಲಿದೆ.

ಸಿದ್ದು ಬಾಂಬ್

ಸದ್ಯಕ್ಕೆ ರಾಜ್ಯದ ಅತ್ಯಂತ ಜನಪ್ರಿಯ ಬಾಂಬ್. 'ವರುಣಾ ಎಂಟ್ರಪಿನರ್ಸ್‌' ಮಾರುಕಟ್ಟೆಗೆ ಬಿಟ್ಟಿರುವ ಸಿದ್ದು ಬಾಂಬ್ ಹತ್ತಕ್ಕೂ ಹೆಚ್ಚು ಮಾದರಿಯಲ್ಲಿ ಲಭ್ಯ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಮುಗಿಬಿದ್ದು ಖರೀದಿಸುತ್ತಿರುವ ಸಿದ್ದು ಬಾಂಬ್‌ನ ಸದ್ದು ಜಾಸ್ತಿ. ಈ ಸರಣಿಯ ಯಾವ ಪಟಾಕಿಯೂ ಠುಸ್ ಎನ್ನುವುದಿಲ್ಲ. ಬಾಂಬ್‌ನ ಬತ್ತಿಗೆ ಬೆಂಕಿ ಇಟ್ಟರೆ ಸಾಕು ಢಮ್ ಢಮಾರ್ ಢಮಾರ್ ಎಂದು ಮುಗಿಲು ಮುಟ್ಟುವ ಶಬ್ದದಲ್ಲಿ ಸಿಡಿಯುತ್ತದೆ. ವಿಚಿತ್ರ ಎಂದರೆ ಸಿದ್ದು ಬಾಂಬ್‌ಗೆ ಬೇಕಾದ ಬಿಡಿ ಭಾಗವನ್ನು ಕೆಲ ಸಾಹಿತಿಗಳು ತಯಾರಿಸಿಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲ ಸಾಹಿತಿಗಳ ಮನೆ ಇರುವ ಓಣಿಯಲ್ಲಿ ಇದು ಸಿಡಿಯುವುದೇ ಇಲ್ಲ!
'ಈ ಸಿದ್ದು ಬಾಂಬ್ ಖರೀದಿಸಿದರೆ ಕೆಜಿ ಅಕ್ಕಿ ಉಚಿತ!'

ಎಚ್‌ಡಿಕೆ ರಾಕೆಟ್
ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ತುಮಕೂರಿನ ಕೆಲ ಭಾಗಗಳಲ್ಲಿ ಭರದಿಂದ ಮಾರಾಟವಾಗುತ್ತಿರುವ ಎಚ್‌ಡಿಕೆ ರಾಕೆಟ್ ಅನ್ನು ನಿಖಿಲ್ ಪಟಾಕಿ ಸಂಸ್ಥೆ ತಯಾರಿಸಿದೆ. ಬಾಲಕ್ಕೆ ಬೆಂಕಿ ಬಿದ್ದ ತಕ್ಷಣ ಎಚ್‌ಡಿಕೆ ರಾಕೇಟ್‌ನ ಸದ್ದೋ ಸದ್ದು. ಈ ಬ್ರಾಂಡ್‌ನ ಎಲ್ಲ ರಾಕೇಟ್‌ಗಳು ಆಕಾಶಕ್ಕೆ ಜಿಗಿಯುವುದಿಲ್ಲ. ಅಕ್ಕ,ಪಕ್ಕ, ಸುತ್ತಮುತ್ತ ಎತ್ತಂದರತ್ತ ನುಗ್ಗಿ ಬಿಡುತ್ತದೆ. ಕೆಲವೊಮ್ಮೆ ಇದರ ಗುರಿ ಪಾತಾಳದ ಕಡೆಗೂ ನುಗ್ಗಬಹುದು. ಹಚ್ಚುವಾಗ ಎಚ್ಚರಿಕೆ ಬೇಕು.

ಪರಮೇಶ್ವರ್ ಸುರ್‌ಸುರ್ ಬತ್ತಿ
ಕೊರಟಗೆರೆ ಕ್ರ್ಯಾಕರ್ಸ್ ತಯಾರಿಸಿರುವ ಪರಮೇಶ್ವರ್ ಸುರ್‌ಸುರ್ ಬತ್ತಿ ಈಗ ಬಹಳ ಚಾಲ್ತಿಯಲ್ಲಿದೆ. ಮಕ್ಕಳು, ವೃದ್ಧರು, ಸ್ತ್ರಿ- ಪುರುಷರು ನಿರ್ಭಯವಾಗಿ ಹಚ್ಚಬಹುದಾದ ಹಾನಿ ಇಲ್ಲದ ಪಟಾಕಿ ಇದು. ಹಚ್ಚಿದ ತಕ್ಷಣ ಸುರ್‌ಸುರ್ ಶಬ್ದ ಮಾಡುವ ಈ ಪಟಾಕಿ ಮೇಲಕ್ಕೆ ಹಾರುವುದಿಲ್ಲ, ನೆಲದಲ್ಲೂ ಸುತ್ತುವುದಿಲ್ಲ. ಬೆಂಕಿ ಹಚ್ಚಿದ ಮೇಲೆ ಯಾರಾದರೂ ಕಡ್ಡಾಯವಾಗಿ ಕೈಲಿ ಹಿಡಿದುಕೊಳ್ಳಬೇಕು. ಇಲ್ಲವಾದರೆ ಸದ್ದಾಗುವುದು ಕೇಳಿಸುವುದಿಲ್ಲ. ಸಾಲದ ಆಧಾರದ ಮೇಲೆ ಸುರ್‌ಸುರ್ ಬತ್ತಿ ಸಿಗುತ್ತದೆ. ಸಾಲ ಮರುಪಾವತಿ ಮಾಡಬೇಕಾದ ಅಗತ್ಯವಿಲ್ಲ. ಸುರ್‌ಸುರ್ ಬತ್ತಿ ಜೊತೆಗೆ ಟೋಪಿ ಉಚಿತ.

ಬಿಎಸ್‌ವೈ ಭೂಚಕ್ರ
ಶಿಕಾರಿಪುರ ಸಿಡಿಮದ್ದು ತಯಾರಿಕಾ ಸಂಸ್ಥೆಯ ಬಿಎಸ್‌ವೈ ಭೂಚಕ್ರ ಹಚ್ಚುವುದಕ್ಕೆ ವಿಸ್ತಾರವಾದ ಜಾಗ ಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ತಯಾರಾದ ಭೂಚಕ್ರಗಳ ಪೈಕಿ ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಬೆಂಕಿ ಕಿಡಿ ಸ್ಫುರಿಸುವ ಪಟಾಕಿ ಇದು. ಸುದರ್ಶನ ಚಕ್ರದ ಮಾದರಿಯಲ್ಲಿ 'ದೇವದುರ್ಲಭ' ವೇಗದಲ್ಲಿ ಗಿರಿಗಿರಿ ಸುತ್ತುವ ಈ ಚಕ್ರ ತಿರುಗುವುದು ಮಾತ್ರವಲ್ಲ ಸಿಡಿಯುತ್ತದೆ. ಕೆಲವೊಮ್ಮೆ ಮೇಲಕ್ಕೆ ಜಿಗಿಯುತ್ತದೆ. ಅಷ್ಟು ಮಾತ್ರವಲ್ಲ ಪಟಾಕಿ ಹಚ್ಚಿದವರ ಕಣ್ಣಲ್ಲಿ ನೀರು ತರಿಸಬಲ್ಲ ವಿಶಿಷ್ಟ ದ್ರಾವಕವನ್ನು ಬಿಎಸ್‌ವೈ ಭೂಚಕ್ರದಲ್ಲಿ ಅಳವಡಿಸಲಾಗಿದೆ. ಮನೆಮಂದಿ ಒಟ್ಟಾಗಿ ಇದ್ದಾಗ ಮಾತ್ರ ಈ ಚಕ್ರ ವಿಶಿಷ್ಟ ಮೆರಗು ಪಡೆಯುತ್ತದೆ. ಜತೆಗೆ ಬಿಸಿ ಜಾಸ್ತಿಯಾದರೆ ಸಿಡಿದು ಇಬ್ಭಾಗವಾಗುವುದು ಇದರ ಇನ್ನೊಂದು ಗುಣ.

ದೇವೇಗೌಡ ಆಟಂ ಬಾಂಬ್
ಅತ್ಯಂತ ಪ್ರಬಲ ಪಟಾಕಿ. ಮಾರುಕಟ್ಟೆಯಲ್ಲಿ ಸ್ಟಾಕ್ ಕಡಿಮೆ. ಆದರೆ ಬೇಡಿಕೆ ಹೆಚ್ಚು. ಹಾಸನ ಮೂಲದ ಅತ್ಯಂತ ಹಳೆಯ ಪಟಾಕಿ ತಯಾರಿಕಾ ಸಂಸ್ಥೆ ಇದನ್ನು ಮಾರುಕಟ್ಟೆಗೆ ಬಿಟ್ಟಿದೆ. ಈ ಪಟಾಕಿ ಸಿಡಿದಾಗ ಹೊರ ಬರುವ ಶಬ್ದ ಚಿಕ್ಕದಾದರೂ ನೆಲ ಸಿಕ್ಕಾಪಟ್ಟೆ ಅದುರುತ್ತದೆ. ಸ್ಫೋಟದ ಶಬ್ದಕ್ಕಿಂತ ಅದರ ಪರಿಣಾಮವೇ ಜೋರು. ದೇವೇಗೌಡ ಆಟಂ ಬಾಂಬ್ ಸರಣಿಯ ಯಾವ ಪಟಾಕಿಯೂ ಇದುವರೆಗೆ ಠುಸ್ ಎಂದಿಲ್ಲ.

ಡಿಕೆಶಿ ಗರ್ನಾಲ್
ದೀಪಾವಳಿಗೆ ಮಾತ್ರವಲ್ಲ ಕಾಂಗ್ರೆಸ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಡಿಕೆಶಿ ಗರ್ನಾಲ್ ಸಿಡಿಸದಿದ್ದರೆ ಮೆರುಗೇ ಇರುವುದಿಲ್ಲ. ಕನಕಪುರ ಫೈರ್ ವರ್ಕ್ಸ್ ಸಂಸ್ಥೆ ತಯಾರಿಸಿರುವ ಈ ಗರ್ನಾಲ್ ರಾಜ್ಯದ ಎಲ್ಲ ಭಾಗಗಳಲ್ಲಿ ಲಭ್ಯ. ಇಷ್ಟು ವರ್ಷ ಭಾರಿ ಸದ್ದು ಮಾಡುತ್ತಿದ್ದ ಈ ಪಟಾಕಿ ತಯಾರಿಕಾ ಸಂಸ್ಥೆ ಘಟಕಕ್ಕೆ ಈ ಭಾರಿ ಸುರಿದ ಮಳೆ ನುಗ್ಗಿದೆ. ಹೀಗಾಗಿ ಎಷ್ಟೇ ಬೆಂಕಿ ಹಚ್ಚಿದರೂ ಗರ್ನಾಲ್ ಸಿಡಿಯುತ್ತಲೇ ಇಲ್ಲ. ಡಿಕೆಸಿ ಗರ್ನಾಲ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಹಿರೇಮಠ್ ಕೇಪ್
ಧಾರವಾಡದ ಎಸ್‌ಪಿಎಸ್ ಕ್ರ್ಯಾಕರ್ಸ್ ಮಾರುಕಟ್ಟೆಗೆ ಬಿಟ್ಟಿರುವ ಹಿರೇಮಠ್ ಕೇಪ್ ಅತ್ಯಂತ ಕಡಿಮೆ ದರದ ಪಟಾಕಿ. ಎಲ್ಲೆಂದರಲ್ಲಿ ಸಿಡಿಯುತ್ತದೆ. ಸಿಡಿಸುವ ಜಾಗದ ಆಧಾರದ ಮೇಲೆ ಅದಕ್ಕೆ ಸೂಕ್ತವಾದ ಗಾತ್ರದ ಕೇಪು ತಯಾರಿಸಿಕೊಡುವುದು ಈ ಸಂಸ್ಥೆಯ ವೈಶಿಷ್ಯ್ಟ. ವಿಚಿತ್ರ ಎಂದರೆ ಈ ಕೇಪ್ ಬಳ್ಳಾರಿಯಲ್ಲಿ ಸಿಡಿದರೂ ಶಬ್ದ ದೆಹಲಿ ತಲುಪುತ್ತದೆ. ಈ ಕೇಪ್ ಸಿಡಿದ ಜಾಗ ಒಡೆಯುವುದು ಗ್ಯಾರಂಟಿ.    

ರಮ್ಯಾ ಹೂಕುಂಡ
ಕಡ್ಡಾಯವಾಗಿ ಸ್ತ್ರೀಯರಿಗೆ ಎಂದು ತಯಾರಕರು ಲೇಬಲ್ ಅಂಟಿಸಿದ್ದರೂ, ಒಮ್ಮೆಯಾದರೂ ಈ ಹೂಕುಂಡವನ್ನು ಹಚ್ಚಬೇಕೆಂದು ಎಲ್ಲರೂ ಬಯಸುತ್ತಾರೆ. ಬೆಲೆ ದುಬಾರಿ.
ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಪಟಾಕಿ ಹಚ್ಚಿದಾಗ ಕೆಲವೊಮ್ಮೆ ಜಗಳದ ಶಬ್ದ ಕೇಳಿಸುತ್ತದೆ. ಇನ್ನು ಕೆಲವು ಸಲ ಕಣ್ಣೀರು ಹಾಕಿದಂತೆ ಭಾಸವಾಗುತ್ತದೆ.

ಸದಾನಂದ ಸ್ಪಾರ್ಕ್‌ಲರ್  
ಇದು ಸಿಡಿಯುವುದೂ ಇಲ್ಲ, ತಿರುಗುವುದೂ ಇಲ್ಲ, ಚಿಮ್ಮುವುದೂ ಇಲ್ಲ. ಆಗಾಗ ಮಿಣಕ್ ಮಿಣಕ್ ಎನ್ನುತ್ತದೆ. ಆದರೂ ದೊಡ್ಡ ಶಬ್ದ ಮಾಡುವ ಪಟಾಕಿಗಳ ಸಂತೆಯಲ್ಲಿ ಆಗಾಗ ಸದಾನಂದ ಸ್ಪಾರ್ಕಲರ್ ಬಳಸುತ್ತಾರೆ.

ವಿಶ್ವನಾಥ್ ರಾಕೆಟ್
ಎಚ್‌ಡಿಕೆ ರಾಕೇಟ್ ರೀತಿಯಲ್ಲೇ ವಿಶ್ವನಾಥ್ ರಾಕೆಟ್ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ. ಎಷ್ಟೋ ಸಲ ಮೇಲಕ್ಕೆ ನೆಗೆಯುವ ಮುನ್ಸೂಚನೆ ನೀಡಿ ನೆಲವನ್ನು ಅಪ್ಪಿ ಬಿಡುತ್ತದೆ. ಎರ್ರಾಬಿರ್ರಿ ಚಲನೆ. ಎತ್ತಬೇಕಾದರೂ ಭಾರಿ ಶಬ್ದದೊಂದಿಗೆ ಚಿಮ್ಮಬಲ್ಲ ರಾಕೆಟ್. ಇದಕ್ಕೆ ಮೈಸೂರಿನಲ್ಲಿ ಭಾರಿ ಬೆಲೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement