ಬಾಳ ದೀಪ ಆರೀತು ಜೋಕೆ...!
ದೀಪಾವಳಿ ಬೆಳಕಿನ ಹಬ್ಬ. ಬದುಕಿನ ಕತ್ತಲೆ ಕಳೆದು ಹೊಸ ಬೆಳಕನ್ನು ನೀಡುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಹಬ್ಬದಲ್ಲಿ ಅದೆಷ್ಟೋ...
ಬೆಂಗಳೂರು: ದೀಪಾವಳಿ ಬೆಳಕಿನ ಹಬ್ಬ. ಬದುಕಿನ ಕತ್ತಲೆ ಕಳೆದು ಹೊಸ ಬೆಳಕನ್ನು ನೀಡುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಹಬ್ಬದಲ್ಲಿ ಅದೆಷ್ಟೋ ಮಕ್ಕಳು ಸಹಿತ ಸಾರ್ವಜನಿಕರು ಅಂಧತ್ವಕ್ಕೆ, ಕಿಡುವುತನಕ್ಕೆ ಒಳಗಾಗಿ ತಮ್ಮ ಬಾಳನ್ನು ಕತ್ತಲೆಡೆಗೆ ನೂಕಲ್ಪಡುವುದು ಮಾತ್ರ ವಿಪರ್ಯಾಸ.
ಹೌದು. ಪ್ರತಿವರ್ಷ ದೀಪಾವಳಿಯಂದು ರಾಜಧಾನಿ ಬೆಂಗಳೂರಿನಲ್ಲೇ ಸುಮಾರು 500ರಿಂದ 600 ಜನ ಗಾಯಗೊಳ್ಳುತ್ತಾರೆ. ಇನ್ನು ರಾಜ್ಯದಲ್ಲಿ ಸುಮಾರು 1,000ರಿಂದ 2,000 ಜನ ಇದರ ಪ್ರತಾಪಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಮಕ್ಕಳೇ ಶೇ. 90ರಷ್ಟಿದ್ದು, ಅದರಲ್ಲೂ 8- 14 ವಯೋವುತಿಯ ಬಾಲಕರೇ ಅಧಿಕ. ಪಟಾಕಿ ಸಿಡಿಸುವುದರ ಮೂಲಕ ಗಾಯಗೊಂಡವರು ಶೇ. 50ರಷ್ಟಿದ್ದರೆ, ದಾರಿಹೋಕರ ಪ್ರಮಾಣ ಶೇ.50ರಷ್ಟು. ಪ್ರತಿ ಬಾರಿಯೂ 5- 6 ಮಂದಿ ಶಾಶ್ವತ ದೃಷ್ಟಿಹೀನಾರಾಗುತ್ತಿದ್ದಾರೆ!
ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದರಿಂದ ಇಂತಹ ಅವಘಡಗಳು ಸಂಭವಿಸುತ್ತವೆ. ಪಟಾಕಿ ಸಿಡಿಸುವುದರಿಂದ ಪರಿಸರಕ್ಕೂ ಅಪಾರ ಹಾನಿಯಾಗುತ್ತಿದೆ. ಪಟಾಕಿಯಲ್ಲಿನ ಕಾಪರ್(ತಾಮ್ರ), ಕ್ಯಾಮಿಯಂ, ಲೇಡ್(ಸೀಸ), ಮೆಗ್ನೀಷಿಯಂ, ಸೋಡಿಯಂ, ಜಿಂಕ್, ನೈಟ್ರೀಟ್ ಹಾಗೂ ನೈಟ್ರೇಟ್‌ನಂತಹ ರಾಸಾಯನಿಕ ಸಿಡಿ ಮದ್ದುಗಳು ದೃಷ್ಟಿ, ಕಿವುಡುತನ, ಚರ್ಮ ಹಾಗೂ ಪರಿಸರವನ್ನು ಹಾಳು ಮಾಡುತ್ತವೆ. ಇವೆಲ್ಲ ಅವಘಡ, ಬಾಧಕಗಳಿಂದ ಮುಕ್ತರಾಗಿರಲು ಇಲ್ಲಿದೆ ಕೆಲ ಟಿಪ್ಸ್...
ತೊಂದರೆಗಳು...
1. ಪಟಾಕಿಗಳನ್ನು ಸಿಡಿಸುವುದರಿಂದ ಅಸ್ತಮಾ, ಅಲರ್ಜಿ ಇರುವವರಿಗೆ ತೊಂದರೆ ಹೆಚ್ಚು.
2. ತುಂಬಾ ಶಬ್ದದಿಂದ ಚಿಕ್ಕ ಮಕ್ಕಳು, ವೃದ್ಧರು ಹಾಗೂ ಪ್ರಾಣಿಗಳು ಕಿವುಡಾಗುವ ಸಾಧ್ಯತೆ.
3. ಅಧಿಕ ಕಿಡಿ ಸಿಡಿಸುವ ಪಟಾಕಿಗಳು ಪರಿಸರಕ್ಕೆ ಹಾನಿ.
4. ಪಟಾಕಿ ನೇರವಾಗಿ ಕಣ್ಣಿಗೆ ಸಿಡಿದಾಗ ಸ್ಲಿಂಗ್ಟ್‌ರ್ಸ್ ಕಣ್ಣಿನ ಕಾರ್ನಿಯಾಕ್ಕೆ ಅಂಟಿಕೊಳ್ಳುತ್ತದೆ. ಅತಿಯಾದ ಸ್ಫೋಟವಾದರೆ ಕಣ್ಣಿನ ಗುಡ್ಡೆ ಎರಡು ಹೋಳಾಗುತ್ತದೆ.
5. ಸ್ಫೋಟಕವಾದಾಗ ಅದರಲ್ಲಿನ ಪಾರ್ಟಿಕಲ್ಸ್ ಕಣ್ಣಿಗೆ ಹೋಗುವುದು, ಗುಡ್ಡೆಗೆ ಗಾಯವಾದರೆ ಶಾಶ್ವತ ದೃಷ್ಟಿಹೀನತೆ ಉಂಟಾಗುತ್ತದೆ.
6. ಅಕ್ಷಿಪಟಲದಲ್ಲಿ ತೊಂದರೆಯಾದರೆ ದೃಷ್ಟಿ ಮತ್ತೆಂದೂ ಬಾರದು.
ದೃಷಿಯಿಲ್ಲದ ಜೀವನ ಇದ್ದೂ ಇಲ್ಲದಂತೆ. ಅದಕ್ಕಾಗಿ ಎಚ್ಚರಿಕೆ ವಹಿಸಿ ಸಂತೋಷದಿಂದ ಹಬ್ಬ ಆಚರಿಸಿ. ಪಟಾಕಿ ಸಿಡಿಸುವಾಗ, ರಾಕೆಟ್ ಹಾರಿಸುವಾಗ ತುಂಬಾ ಜಾಗ್ರತೆಯಿಂದಿರಿ, ಆಗ ತುಂಟಾಟ ಒಳಿತಲ್ಲ. ದೀಪವಾಳಿಯಂದು ದೀಪ ನೋಡೋ ಕಣ್ಣುಗಳುನ್ನು ಕಳೆದುಕೊಳ್ಳಬಾರದು ಎಂದು ಕೇಳಿಕೊಳ್ಳುತ್ತೇನೆ.
- ಡಾ. ಶಿವಪ್ರಸಾದ್ ರೆಡ್ಡಿ, ನಿರ್ದೇಶಕ ಮಿಂಟೋ ಆಸ್ಪತ್ರೆ
ನಿಮ್ಮ ಸಂತೋಷಕ್ಕೆ ಅಡ್ಡಿ ಪಡಿಸಿಕೊಳ್ಳಿ ಎಂದು ಹೇಳಲ್ಲ. ಎಲ್ಲಕ್ಕೂ ಮಿತಿಯಿರಲಿ. ಹೆಚ್ಚು ಶಬ್ದ ಮಾಡುವ, ಪರಿಸರಕ್ಕೆ, ಜೀವಿಗಳಿಗೆ ಮಾರಕವಾಗುವ ಪಟಾಕಿಗಳನ್ನು ತ್ಯಜಿಸಿ. ಎಲ್ಲರೂ ತಮಗೆ ಬೇಕಾದ ಜಾಗದಲ್ಲಿ ಪಟಾಕಿ ಸಿಡಿಸದೇ ಎಲ್ಲರೂ ಸೇರಿ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಿ, ಅವಘಡಗಳು ಕಡಿಮೆಯಾಗುತ್ತವೆ.
- ಸುರೇಶ್ ಹೆಬ್ಳೀಕರ್, ಪರಿಸರವಾದಿ
25-30ಕೋಟಿ
ರಾಜ್ಯದಲ್ಲಿ ಪಟಾಕಿಗಾಗಿ ಖರ್ಚು ಮಾಡುವ ಹಣ
60-65ಡೆಸಿಬಲ್
ಅಧಿಕ ಪ್ರಮಾಣದ ಶಬ್ದವುಂಟು ಮಾಡುವ ಹಾನಿ
ಸಂಜೆ 6-10ಗಂಟೆ
ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿಕೊಳ್ಳಿ