ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾಕ್ಷರ ಉಡುಪಿಯಲ್ಲಿ ಹೆಚ್ಚುತ್ತಿದೆ ಆಂಗ್ಲ ಅಕ್ಷರ!

Mainashree
Updated On : 2 Nov 2013, 5:07 am

ಉಡುಪಿ: ರಾಜ್ಯದಲ್ಲಿಯೇ ಅತಿ ಹೆಚ್ಚು ಸಾಕ್ಷರತೆ ಹೊಂದಿದ ಜಿಲ್ಲೆ ಎಂದು ಉಡುಪಿ ಖ್ಯಾತಿಗಳಿಸಲು ಕಾರಣವಾಗಿದ್ದು ಕನ್ನಡ ಶಾಲೆಗಳಿಂದ. ಆದರೆ, ಅದೇ ಕನ್ನಡ ಮಾಧ್ಯಮದಲ್ಲಿ ಓದಿದ ಜನರಿಗೆ ಮಾತ್ರ ವಿಪರೀತ ಆಂಗ್ಲ ವ್ಯಾಮೋಹ.
ಕಳೆದೊಂದು ದಶಕಗಳಿಂದ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅದಕ್ಕೂ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿ ಸುಮಾರು 1143 ಕನ್ನಡ ಮಾಧ್ಯಮ ಶಾಲೆಗಳಿವೆ. ಅವುಗಳಲ್ಲಿ 888 ಪ್ರಾಥಮಿಕ ಹಾಗೂ 255 ಪ್ರೌಢಶಾಲೆಗಳು. ಸದ್ಯಕ್ಕೆ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಕೊರತೆಯಿಲ್ಲ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಕೆಲವು ಶಾಲೆಗಳನ್ನು ಹೊರತುಪಡಿಸಿ, ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಬೆರಳೆಣಿಕೆಯಷ್ಟಿದೆ. ಉಡುಪಿ ಜಿಲ್ಲೆಯಲ್ಲಿ 1000ಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳಿವೆ. ವರ್ಷಕ್ಕೆ 20- 30 ಸಾವಿರ ಡೊನೇಷನ್ ಪಡೆದುಕೊಳ್ಳುವ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ.

ಪೇಜಾವರಶ್ರೀ, ಯು.ಆರ್. ರಾವ್, ಡಾ.ವಿ.ಎಸ್. ಆಚಾರ್ಯ...
ಉಡುಪಿ ಜಿಲ್ಲೆಯಲ್ಲಿ ಶತಮಾನೋತ್ಸವ ದಾಟಿದ ಸುಮಾರು 10 ಕನ್ನಡ ಮಾಧ್ಯಮ ಶಾಲೆಗಳಿವೆ.  ಬಹುತೇಕ ಶಾಲೆಗಳು ಚೆನ್ನಾಗಿಯೇ ನಡೆಯುತ್ತಿದ್ದು, ಸದ್ಯಕ್ಕಂತೂ ಮುಚ್ಚುವ ಪರಿಸ್ಥಿತಿಯಲ್ಲಿಲ್ಲ. ಆದರೂ ಉಡುಪಿ ನಗರದ ಮಧ್ಯ ಭಾಗದಲ್ಲಿ ಒಂದು ಜಿಪಂ ಮಾದರಿ ಪ್ರಾಥಮಿಕ ಶಾಲೆ ಇದೆ. ಅದನ್ನು ಮೈನ್ ಶಾಲೆ ಎನ್ನುತ್ತಾರೆ. ಈ ಶಾಲೆಯಲ್ಲಿ ಪೇಜಾವರಶ್ರೀ, ವಿಜ್ಞಾನಿ ಯು.ಆರ್. ರಾವ್ ಮುಂತಾದ ಮಹಾನುಭಾವರು ಶಿಕ್ಷಣ ಪಡೆದಿದ್ದಾರೆ. ಇತ್ತೀಚೆಗೆ ಈ ಶಾಲೆಗೂ ವಿದ್ಯಾರ್ಥಿಗಳ ಕೊರತೆ ಕಾಡುತ್ತಿದ್ದು, ಮೂಲ ಸೌಕರ್ಯಗಳು ಕೊರತೆಯೂ ಕಾಡುತ್ತಿದೆ. ಆದ್ದರಿಂದ ಒಂದೆರಡು ವರ್ಷಗಳಲ್ಲಿಯೇ ಇದು ಮುಚ್ಚುವ ಸ್ಥಿತಿ ತಲುಪಬಹುದು. ಮಾಜಿ ಸಚಿವ ದಿ. ಡಾ.ವಿ.ಎಸ್. ಆಚಾರ್ಯ, ಆರ್ಥಿಕ ತಜ್ಞ ದಿ. ಕೆ.ಕೆ. ಪೈ ಅವರಂಥವರು ಕಲಿತ ಕಡಿಯಾಳಿ ಶಾಲೆಯೂ ಶತಮಾನ ಕಂಡಿದ್ದು, ಇವುಗಳ ಸ್ಥಿತಿ ಇತರೆ ಶಾಲೆಗಳಿಗೆ ಹೋಲಿಸಿದಲ್ಲಿ ಉತ್ತಮವಾಗಿಯೇ ಇದೆ.

ಜನಪ್ರತಿನಿಧಿಗಳಿಗಿಲ್ಲ ಕಾಳಜಿ
ಜಿಲ್ಲೆಯ ಶಾಸಕ, ಸಂಸದರು, ಸಚಿವರು, ಇತರ ಜಿಪಂ- ತಾಪಂ ಜನಪ್ರತಿನಿಧಿಗಳಿಗೆ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಯಾವುದೇ ಕಾಳಜಿಯೂ ಇಲ್ಲ. ಅವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕಳುಹಿಸುತ್ತಿರುವುದು ಆಂಗ್ಲ ಮಾಧ್ಯಮ ಶಾಲೆಗಳಿಗೇ. ಕನ್ನಡವನ್ನು ತಲೆ ಮೇಲೆಯೇ ಹೊತ್ತವರಂತೆ ಆಡುವವರು ಜಿಲ್ಲೆಯಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಕನ್ನಡ ಸಮ್ಮೇಳನಗಳ ಸಂಘಟಕರೂ, ಕನ್ನಡದ ಕಟ್ಟಾಳುಗಳೂ, ಸಾಹಿತಿಗಳೂ ಇದ್ದಾರೆ. ಆದರೆ ಅವರ್ಯಾರೂ ಅದನ್ನು ವಾಸ್ತವವಾಗಿ ಆಚರಣೆ ತರುತ್ತಿಲ್ಲ. ಅವರೂ ಮಕ್ಕಳನ್ನೂ ಆಂಗ್ಲ ಶಾಲೆಗಳಿಗೇ ಕಳುಹಿಸುತ್ತಿದ್ದಾರೆ.
ಪೋಷಕರಿಗೂ ಆಂಗ್ಲ ವ್ಯಾಮೋಹ
ಇದೇ ವೇಗದಲ್ಲಿ ಜಿಲ್ಲೆಯ ಪೋಷಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಮುದುವರಿದರೆ ಮುಂದಿನ ಪೀಳಿಗೆಗೆ ಕನ್ನಡ ಮಾತನಾಡಲೂ ಬರುವುದು ಕಷ್ಟ. ಕನ್ನಡ ಸಾಹಿತ್ಯದ ಗಂಧ ಗಾಳಿ ಇರುವುದಿಲ್ಲ. ಜಿಲ್ಲೆಯಲ್ಲಿ ಕನ್ನಡ ಸಂಸ್ಕೃತಿ, ನಾಡು ನುಡಿಯನ್ನೂ ಕೇಳವವರೂ ಇರುವುದಿಲ್ಲ.

ಮುಚ್ಚಲಿವೆ 37 ಶಾಲೆಗಳು
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕಳೆದ 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಕನ್ನಡ ಶಾಲೆಗಳು ಬಾಗಿಲೆಳೆದುಕೊಂಡಿವೆ. ಇನ್ನೊಂದೆರಡು ವರ್ಷಗಳಲ್ಲಿ ಇನ್ನೂ 50 ಕನ್ನಡ ಶಾಲೆಗಳು ಬಾಗಿಲು ಮುಚ್ಚುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಈಗಿರುವ 888 ಕನ್ನಡ ಮಾಧ್ಯಮ ಶಾಲೆಗಳಲ್ಲಿ 37 ಶಾಲೆಗಳಲ್ಲಿ 10ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಜಿಲ್ಲೆಯ ಶಾಲೆಗಳಲ್ಲಿನ ಶಿಕ್ಷಣ, ಸೌಲಭ್ಯಗಳ ಗುಣಮಟ್ಟ ಅತ್ಯುತ್ತಮವಾಗಿದೆ. ಬಹುತೇಕ ಶಾಲೆಗಳು ಹಳೆಯದಾದರೂ ಒಳ್ಳೆಯ ಕಟ್ಟಡಗಳಿವೆ, ಬೇಕಾದಷ್ಟು ಕೊಠಡಿಗಳಿವೆ. ಆಟದ ಮೈದಾನಗಳಿವೆ. ಮಧ್ಯಾಹ್ನದ ಬಿಸಿಯೂಟ ಇದೆ. ಒಳ್ಳೆಯ ಶಿಕ್ಷಕರಿದ್ದಾರೆ. ಆದರೆ ಈ ಸೌಲಭ್ಯಗಳನ್ನೆಲ್ಲ ಪಡೆಯಲು ವಿದ್ಯಾರ್ಥಿಗಳೇ ಇಲ್ಲ!

ವಿಶೇಷ ಅನುದಾನ ನೀಡಿ
ಬಿಜಾಪುರ:
371ಕಲಂ ಅನ್ವಯ ವಿಶೇಷ ಸ್ಥಾನಮಾನದಿಂದ ಹೊರಗುಳಿದ, ಹಿಂದುಳಿದ ಬಿಜಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಕೋರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಬಿಜಾಪುರದಲ್ಲಿ ಹೇಳಿದರು.

- ಚೈತ್ರಾ ಹೆರ್ಗ/ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement