ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾಹಿತ್ಯ ತರ್ಜುಮೆಯಾಗಿದ್ದರೆ ಕನ್ನಡಕ್ಕೂ ನೊಬೆಲ್ ಬರುತ್ತಿತ್ತು: ಸಿಎಂ ಸಿದ್ದರಾಮಯ್ಯ

ಕನ್ನಡ ಸಾಹಿತ್ಯ ವಿವಿಧ ಭಾಷೆಗಳಿಗೆ ತರ್ಜುಮೆ ಆಗಿದ್ದರೆ ಕನ್ನಡಕ್ಕೂ ನೊಬೆಲ್ ಪ್ರಶಸ್ತಿ ಬರುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

Mainashree
Updated On : 2 Nov 2013, 4:28 am

ಬೆಂಗಳೂರು: ಕನ್ನಡ ಸಾಹಿತ್ಯ ವಿವಿಧ ಭಾಷೆಗಳಿಗೆ ತರ್ಜುಮೆ ಆಗಿದ್ದರೆ ಕನ್ನಡಕ್ಕೂ ನೊಬೆಲ್ ಪ್ರಶಸ್ತಿ ಬರುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಕನ್ನಡ 2 ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆಯಾಗಿದ್ದು, ಇದು ಜಗತ್ತಿನ ಯಾವ ಭಾಷೆಗೂ ಕಡಿಮೆಯಿಲ್ಲ. ಆದ್ದರಿಂದಲೇ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಇದು ಜಗತ್ತಿನ ಯಾವ ಭಾಷೆಗೂ ಸರಿಸಾಟಿ ಆಗಬಲ್ಲದು. ಕನ್ನಡ ಸಾಹಿತ್ಯ ವಿವಿಧ ಭಾಷೆಗಳಿಗೆ ತರ್ಜುಮೆ ಆಗಿದ್ದಿದ್ದರೆ ಕನ್ನಡಕ್ಕೂ ನೊಬೆಲ್ ಪ್ರಶಸ್ತಿ ಬರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡದವರೂ ಸಾಧಕರೇ: ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು ಗಣ್ಯರಾಗುತ್ತಾರೆ, ಬುದ್ಧಿವಂತರಾಗುತ್ತಾರೆ, ವಿಜ್ಞಾನಿಯಾಗುತ್ತಾರೆ. ಇಂಗ್ಲಿಷ್‌ನಲ್ಲಿ ಕಲಿತವರಿಗೆ ಎಲ್ಲವೂ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ. ಅಂತಹ ಕಲ್ಪನೆ ಇಂದು ಅನೇಕರಲ್ಲಿದೆ. ಆದರೆ, ಕನ್ನಡ ಮಾಧ್ಯಮದಲ್ಲಿ ಕಲಿತವರು ಕೂಡ ಎಲ್ಲವನ್ನೂ ಪಡೆಯಬೇಕು. ಕನ್ನಡದಲ್ಲೇ ಕಲಿತು ಸಾಧಕರಾದವರು ಹಲವರಿದ್ದಾರೆ. ಹಾಗಾಗಿ, ಇಂಗ್ಲಿಷ್‌ಅನ್ನು ಒಂದು ಭಾಷೆಯಾಗಿ ಕಲಿಯಿರಿ ಅಡ್ಡಿ ಇಲ್ಲ. ಆದರೆ, ಎಲ್ಲೇ ಇದ್ದರೂ ಕನ್ನಡದ ನೆಲ-ಜಲ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

58 ಏಕೆ ?: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮೊದಲಿಗೆ 50 ಸಾಧಕರಿಗೆ ಮಾತ್ರ ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಇದು 58ನೇ ಕನ್ನಡ ರಾಜ್ಯೋತ್ಸವವಾದ್ದರಿಂದ 58 ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಸಾಧಕರ ಆಯ್ಕೆಗೆ ಸಮಿತಿ ರಚಸಿದ್ದು, ಸಮಿತಿಯೇ ಎಲ್ಲರನ್ನೂ ಆಯ್ಕೆ ಮಾಡಿದೆ. ತಾವು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಯ್ಯಪ್ಪನ್ ಎಂಬುವರ ಹೆಸರನ್ನು ಸೂಚಿಸಿದ್ದು ಬಿಟ್ಟರೆ ಮತ್ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ ಎಂದರು. ಹೀಗೆ ಸಾಧಕರನ್ನು ಗುರುತಿಸುವುದು ಕನ್ನಡಿಗರೆಲ್ಲರನ್ನೂ ಗೌರವಿಸಿದಂತೆ ಎಂದೂ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 58 ಸಾಧಕರನ್ನು ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಪ್ರಧಾನ ಕಾರ್ಯದರ್ಶಿ ರಮೇಶ್ ಬಿ. ಝಳಕಿ, ಆಯುಕ್ತ ಕೆ.ಆರ್.ರಾಮಕೃಷ್ಣ ಹಾಜರಿದ್ದರು.

ಕನ್ನಡದ ಅನಿವಾರ್ಯತೆ ಸೃಷ್ಟಿಯಾಗಬೇಕು...
ರಾಜ್ಯದ ರಾಜಧಾನಿಯಾಗಿರುವ ನಗರದಲ್ಲೇ ಶೇ. 80ರಷ್ಟು ಕನ್ನಡೇತರರು ಇದ್ದಾರೆ. ಅವರೆಲ್ಲ ಕನ್ನಡ ಮಾತನಾಡದೇ ಬದುಕಬಹುದು ಎಂಬ ವಾತಾವರಣ ಇದೆ. ಆದರೆ, ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳಗಳಲ್ಲಿ ಅಲ್ಲಿನ ಭಾಷೆಯ ವಾತಾವರಣ ಮಾತ್ರವಲ್ಲ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯತೆ ಇದೆ. ಕರ್ನಾಟಕದಲ್ಲೂ ಕನ್ನಡ ಕಲಿಯಲೇಬೇಕಾದ ಅನಿವಾರ್ಯತೆ ಹಾಗೂ ಕನ್ನಡದ್ದೇ ಆದ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement