ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚಿಣ್ಣರ ಪಾಲಿಗಿಲ್ಲ ಜಿಲ್ಲಾ ದರ್ಶನ

Mainashree
Updated On : 4 Nov 2013, 12:17 pm

ಕ.ಪ್ರ.ವಾರ್ತೆ, ಬೆಂಗಳೂರು, ನ. 3-
ಶಿಕ್ಷಣ ಸಚಿವರೇನೋ ವಿದೇಶಕ್ಕೆ ಹೋಗಿ ಬರಬಹುದು. ಶಾಲಾ ಮಕ್ಕಳಿಗೆ ಜಿಲ್ಲಾ ಪ್ರವಾಸವಾದರೂ ಬೇಡವೇ ?
ವಿಚಾರ ಸಂಕಿರಣಕ್ಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ ಅವರು ದಕ್ಷಿಣ ಕೋರಿಯಾದ ಸಿಲೋನ್‌ಗೆ ಹೋಗಿ ಬಂದಿದ್ದಾರೆ. ಆದರೆ, ಮೂರೂವರೆ ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಕರೆದುಕೊಂಡು ಹೋಗಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿರಲಿಲ್ಲ. ಪ್ರತಿವರ್ಷದಂತೆ ಈ ಬಾರಿಯೂ ಶೈಕ್ಷಣಿಕ ಪ್ರವಾಸ ಹೋಗಬೇಕು ಎಂಬುದು ಅವರ ಬಯಕೆಯಾಗಿತ್ತು.
ಸರ್ಕಾರದ ನಿರ್ಲಕ್ಷ್ಯ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಬೇಜವಬ್ದಾರಿ ನೀತಿಯಿಂದಾಗಿ ಏಳನೇ ತರಗತಿ ವಿದ್ಯಾರ್ಥಿಗಳು 'ಚಿಣ್ಣರ ಜಿಲ್ಲಾ ದರ್ಶನ' ಅವಕಾಶದಿಂದ ವಂಚಿತರಾಗಿದ್ದಾರೆ. ಇದಲ್ಲದೇ ದೇಶದ ಬೆನ್ನೆಲುಬಾದ ರೈತರ ಕಷ್ಟ ಹಾಗೂ ಕೃಷಿ ಭೂಮಿಗಳ ಪರಿಚಯಕ್ಕೆಂದು ಪ್ರಾರಂಭಿಸಲಾಗಿದ್ದ 'ಕೃಷಿ ದರ್ಶನ'ವೂ ನಿಂತಿದೆ. ಒಟ್ಟಾರೆ 'ಇನೊವೇಷನ್ ಪ್ರಾಜೆಕ್ಟ್‌'ನಡಿ ಪ್ರತಿ ಶೈಕ್ಷಣಿಕ ಜಿಲ್ಲೆಗೆ ನೀಡುತ್ತಿದ್ದ 50 ಲಕ್ಷ ಅನುದಾನಕ್ಕೆ ಕುತ್ತು ಬಂದಿದೆ. ವಿದ್ಯಾರ್ಥಿಗಳು ಈ ವರ್ಷ ಸ್ವಂತ ಖರ್ಚಿನಿಂದ ಜಿಲ್ಲಾ ಪ್ರವಾಸ ಮಾಡಬೇಕಾದ ಅನಿವಾರ್ಯತೆಯಿದೆ.
ಆದರೆ, ಸಚಿವರು ಮಾತ್ರ ಎಂದಿನಂತೆ ಮೌನ ವಹಿಸಿದ್ದಾರೆ. ಪ್ರತಿ ವರ್ಷ ವಿದ್ಯಾರ್ಥಿಗಳನ್ನು ಈ ಯೋಜನೆಯಡಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಶಿಕ್ಷಕರು ಅನುದಾನ ಸಿಗದೆ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಚಿಣ್ಣರ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಶಿಕ್ಷಣ ಇಲಾಖೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯತ್ತ ಬೆರಳು ತೋರಿಸುತ್ತಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಏನು ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.

ಮಕ್ಕಳಿಗೆ 'ದರ್ಶನ ಭಾಗ್ಯ'ವಿಲ್ಲ!
2004-05ನೇ ವರ್ಷದಿಂದ ಚಿಣ್ಣರ ಕರ್ನಾಟಕ ದರ್ಶನ ಎಂಬ ಯೋಜನೆ ಪ್ರಾರಂಭಿಸಲಾಗಿತ್ತು. ಇದಾದ ಬಳಿಕ ಕರ್ನಾಟಕ ದರ್ಶನದ ಬದಲು 'ಚಿಣ್ಣರ ಜಿಲ್ಲಾ ದರ್ಶನ' ಎಂಬ ಯೋಜನೆ ಪ್ರಾರಂಭಿಸಲಾಯಿತು. ತಾವು ವಾಸಿಸುತ್ತಿರುವ ಅಥವಾ ಕಲಿಯುತ್ತಿರುವ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಅರಿವು ಹೊಂದಿರಬೇಕು.  ಜಿಲ್ಲೆಯ ಬಗ್ಗೆ ಭೌಗೋಳಿಕ ಜ್ಞಾನ ಹೊಂದಿರಬೇಕು ಎಂಬ ಉದ್ದೇಶದಿಂದ ಇದಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 8 ವರ್ಷದಿಂದಲೂ ಇದು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿತ್ತು.  ಏಳು ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಯೋಜನೆಯಡಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲಾ ಪ್ರವಾಸ ಮಾಡುತ್ತಿದ್ದರು. ಪ್ರತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಪ್ರವಾಸಕ್ಕೆ 500 ಹಾಗೂ 45 ವಿದ್ಯಾರ್ಥಿಗಳ ಒಂದು ತಂಡಕ್ಕೆ 22,500 ನಿಗದಿಯಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳನ್ನು ಈ ಪ್ರವಾಸಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಜಿಲ್ಲಾ ದರ್ಶನ ಎರಡು ದಿನಗಳ ಕಾರ್ಯಕ್ರಮ ಆಗಿರುತ್ತಿತ್ತು.

ಎಂಎಚ್‌ಆರ್‌ಡಿ ಅನುಮತಿಯಿಲ್ಲ
ಸರ್ವ ಶಿಕ್ಷಣ ಅಭಿಯಾನದ ಅನುದಾನವನ್ನು ಈ ಪ್ರವಾಸಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಆದರೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಇದಕ್ಕೆ ಕ್ಯಾತೆ ತೆಗೆದಿದ್ದಾರೆ. ಹೀಗಾಗಿ ಸರ್ವ ಶಿಕ್ಷಣ ಅಭಿಯಾನದ ಹಣವನ್ನು ಅಭಿವದ್ಧಿ ಯೋಜನೆ ಹೊರತುಪಡಿಸಿ ಇಂತಹ ಪ್ರವಾಸ ಅಥವಾ ಇನೊವೇಷನ್ ಪ್ರಾಜೆಕ್ಟ್‌ಗಳಿಗಾಗಿ ಬಳಸಿಕೊಳ್ಳಬಾರದು ಎಂದು ಕೇಂದ್ರ ಸೂಚನೆ ನೀಡಿದೆ. ಇದರಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಪ್ರತಿ ಶಾಲೆಯಲ್ಲಿ ನಡೆಯುತ್ತಿದ್ದ ವಿಜ್ಞಾನ ಪ್ರದರ್ಶನ ಸೇರಿದಂತೆ ಇತರ ಕಾರ್ಯಕ್ರಮಗಳಿಗೂ ಕುತ್ತು ಬರುವ ಅಪಾಯವಿದೆ.

ಶಾಲಾ ನಿರ್ವಹಣಾ ವೆಚ್ಚಕ್ಕೆ ಕುತ್ತು!
ನಿರ್ವಹಣಾ ವೆಚ್ಚವೆಂದು ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಸರ್ಕಾರ 15 ಸಾವಿರ ಅನುದಾನ ನೀಡುತ್ತದೆ. ಜಿಲ್ಲಾ ದರ್ಶನಕ್ಕೆ ರಾಜ್ಯ ಸರ್ಕಾರ ಹಣ ನೀಡದಿರುವುದರಿಂದ ಈ ಹಣವನ್ನು ಬಳಸಬೇಕಾದ ಅನಿವಾರ್ಯ ಎದುರಾಗಬಹುದು. ಇಲ್ಲವಾದಲ್ಲಿ ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗುತ್ತದೆ. ಮುಂದಿನ ಮಾರ್ಗೋಪಾಯ ಕುರಿತು ಇವತ್ತಿನವರೆಗೆ ಯಾವುದೇ ಎಸ್‌ಡಿಎಂಸಿ ಹಾಗೂ ಡಿಡಿಪಿಐಗಳಿಗೆ ಸೂಚನೆ ನೀಡದೇ ರಾಜ್ಯ ಸರ್ಕಾರ ಸುಮ್ಮನಿದೆ.  ಸಾಮಾನ್ಯವಾಗಿ ಪ್ರತಿ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಪ್ರವಾಸ ನಡೆಸಲಾಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅನುದಾನ ನೀಡಲು ನಿರಾಕರಿಸಿದ ಬಳಿಕ ರಾಜ್ಯ ಸರ್ಕಾರಕ್ಕೂ ಪ್ರಸ್ತಾವ ಕಳುಹಿಸಿದ್ದರೂ ಇವತ್ತಿವರೆಗೆ ಶಿಕ್ಷಣ ಇಲಾಖೆಗೆ ಯಾವುದೆ ಉತ್ತರ ಬಂದಿಲ್ಲ.

ಕೃಷಿ ಮರೆತ ಸರ್ಕಾರ
ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಿಂದ ಕಳೆದ ಶೈಕ್ಷಣಿಕ ವರ್ಷದಿಂದ 'ಕೃಷಿ ದರ್ಶನ' ಎಂಬ ಒಂದು ದಿನದ ಪ್ರವಾಸಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಆಯಾ ಜಿಲ್ಲೆಯಲ್ಲಿ ಉತ್ತಮ ರೈತರ ಕೃಷಿ ಭೂಮಿಗಳಿಗೆ ಅಥವಾ ಕೃಷಿ ಸಂಶೋಧನಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಕೃಷಿ ಕುರಿತ ಮಾಹಿತಿ ಒದಗಿಸುವುದು ಇದರ ಉದ್ದೇಶ.  ಈ ಪ್ರವಾಸದಿಂದ ವಿದ್ಯಾರ್ಥಿಗಳಲ್ಲಿ ಕೃಷಿ ಕ್ಷೇತ್ರ ಕುರಿತು ಜ್ಞಾನ ಹಾಗೂ ವಿಶ್ವಾಸ ಮೂಡುತ್ತದೆ ಎನ್ನುವುದು ಸರ್ಕಾರದ ಚಿಂತನೆಯಾಗಿತ್ತು. ಈ ಪ್ರವಾಸಕ್ಕಾಗಿ ಪ್ರತಿ ವಿದ್ಯಾರ್ಥಿಗೆ 150 ಖರ್ಚು ಮಾಡಲು ಅನುವು ಮಾಡಿಕೊಡಲಾಗಿತ್ತು.

ಚಿಣ್ಣರ ಜಿಲ್ಲಾ ದರ್ಶನಕ್ಕೆ ಅನುದಾನ ನೀಡಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಿರಾಕರಿಸಿದೆ. ಈ ಯೋಜನೆಯನ್ನು ಇಲಾಖೆ ಕೈಬಿಟ್ಟಿದೆ. ರಾಜ್ಯ ಸರ್ಕಾರ ಅನುದಾನ ನೀಡಲು ಒಪ್ಪಿದರೆ ಮುಂದುವರಿಸಲಾಗುವುದು.
- ಸುಭೋದ್ ಯಾದವ್, ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement