ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜರ್ಮನಿಗರ ಬಾಯಲ್ಲಿ ಕನ್ನಡ

Mainashree
Updated On : 4 Nov 2013, 12:19 pm

ಕೊಪ್ಪಳ: ಕನ್ನಡಕ್ಕಾಗಿ ಹೋರಾಡುವವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಆದರೆ, ಜರ್ಮನ್ನಿಂದ ಬಂದ ಕೆಲವು ವಿದ್ಯಾರ್ಥಿಗಳು 'ಕನ್ನಡಕ್ಕೆ ಜೈ' ಎನ್ನುತ್ತಿದ್ದು, ಕನ್ನಡದ ಕಂಪಿಗೆ ಮೊರೆ ತಲೆದೂಗಿದ್ದಾರೆ.
ಇದು ಅಚ್ಚರಿಯಾದರೂ ಸತ್ಯ. ಈಗಾಗಲೇ ಕನ್ನಡದಲ್ಲಿ 'ನಮಸ್ತೆ ಸಾರ್, ಊಟ ಆಯ್ತಾ?' ಎಂದು ಮಾತನಾಡುವುದಷ್ಟೇ ಅಲ್ಲ, ಭಾಷೆಯನ್ನು ಚೆನ್ನಾಗಿ ಅರ್ಥ ಮಾಡಿ ಕೊಳ್ಳುತ್ತಿದ್ದಾರೆ. ಇವರಿಗೆ ವಾರಕ್ಕೊಮ್ಮೆ ಕನ್ನಡದ ತರಬೇತಿಯನ್ನು ನೀಡುತ್ತಿರುವುದರಿಂದ ಶೀಘ್ರದಲ್ಲಿಯೇ ಅವರೆಲ್ಲ ಕನ್ನಡವನ್ನು ನಿರರ್ಗಳವಾಗಿ ಮಾತನಾಡುವಂತಾಗುವಲ್ಲಿ ಸಂಶಯವೇ ಇಲ್ಲ.

ಯಾರ್ಯಾರು?: ಜರ್ಮನ್ ದೇಶದ ಸರ್ವಿಸ್ ಸಿವಿಲ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ ಬಂದಿರುವ ಬೆನ್, ಲಿಯಾಂಡರ್, ಲಿಯಾನ್, ಮೈಕೂ ಗುಡ್ವಿಗ್ ಎಂಬ ಐವರು ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿರುವುದು. ಇವರ ಪಿಯುಸಿ ನಂತರದ ಶಿಕ್ಷಣಕ್ಕಾಗಿ ಪಡೆಯುವ ಒಂದು ವರ್ಷದ ಸಂಶೋಧನಾ ತರಬೇತಿಗಾಗಿ ಬಂದಿರುವ ಜತೆಗೆ ಸಂಸ್ಕೃತಿ ಹಂಚಿಕೆಯ ಅಧ್ಯಯನ ಮಾಡುತ್ತಿದ್ದಾರೆ. ಜತೆಗೆ ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿಯೂ ಶ್ರಮಿಸುತ್ತಿದ್ದಾರೆ.

ಬಂದವರೆಲ್ಲರಿಂದಲೂ ಕನ್ನಡ ಕಲಿಕೆ: ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ಸಮೂಹ ಸಾಮರ್ಥ್ಯ ಸಂಸ್ಥೆಯಲ್ಲಿ ವಾಸಿಸುವ ಇವರು ಈ ಸಂಸ್ಥೆಯೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ, ಪ್ರತಿ ವರ್ಷವೂ ಸರ್ವಿಸ್ ಸಿವಿಲ್ ಇಂಟರ್ನ್ಯಾಷನಲ್ ಸಂಸ್ಥೆ ಐವರನ್ನು ಅಧ್ಯಯನ ಮತ್ತು ಸೇವೆಗಾಗಿ ಕಳುಹಿಸಿಕೊಡುತ್ತದೆ. ಬಂದವರೆಲ್ಲರೂ ಕನ್ನಡ ಕಲಿತು ಹೋಗುತ್ತಾರೆ. ನಾಡಿನ ಸಂಸ್ಕೃತಿಯ ಅಧ್ಯಯನ ಕಷ್ಟವಾದಾಗ, ಭಾಷೆ ಕಲಿತು ಸ್ಥಳೀಯರೊಂದಿಗೆ ಬೆರೆತು ತಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳುತ್ತಾರೆ. ಇವರಿಗೆ ಕನ್ನಡ ಕಲಿಸಲು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ತಿಂಗಳು ಐದು ದಿನ ತರಬೇತಿ ನೀಡಲಾಗುತ್ತಿದೆ. ಕಳೆದ ತಿಂಗಳು ಆಗಮಿಸಿರುವ ಇವರು, ಇನ್ನೊಂದು ವರ್ಷ ಇಲ್ಲಿಯೇ ಇರುತ್ತಾರೆ.
ಸಮೂಹ ಸಾಮರ್ಥ್ಯದ ಸಂಪನ್ಮೂಲ ವ್ಯಕ್ತಿ ಎಂ. ಮಾದಯ್ಯ ಈ ವಿದೇಶಿಯರಿಗೆ ಕನ್ನಡ ಕಲಿಸುತ್ತಾರೆ. ಭಾಷೆ ಕಲಿಯುವುದರಲ್ಲಿ ನಿಸ್ಸೀಮರಾಗಿರುವ ಜರ್ಮನ್ನರು ಕನ್ನಡವನ್ನೂ ಬಹು ಬೇಗ ಕಲಿತು ಬಿಡುತ್ತಾರೆ. ಇವರು ಕನ್ನಡ ಬಾರದ ಕನ್ನಡಿಗರಿಗೂ ಮಾದರಿಯಲ್ಲವೇ?

- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement