ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಂಚಾಯತ್ ರಾಜ್ಗೆ 'ರಾಜೀವ್ ಸಶಕ್ತಿ'

Mainashree
Updated On : 4 Nov 2013, 12:19 pm

ಮೈಸೂರು:  ಕೇಂದ್ರ ಪುರಸ್ಕೃತ ರಾಜೀವ್ಗಾಂಧಿ ಪಂಚಾಯಿತಿ ಸಶಕ್ತೀಕರಣ ಅಭಿಯಾನ್ (ಆರ್ಜಿಪಿಎಸ್ಎ) ಅನುಷ್ಠಾನಕ್ಕೆ ರಾಜ್ಯದಲ್ಲೂ ಕ್ರಮಕೈಗೊಳ್ಳಲಾಗುತ್ತಿದೆ.
ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ಯೋಜನೆಯ ಅನುದಾನ ಹಂಚಿಕೆಯಲ್ಲಿ ವಿನೂತನ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಅನುವಾಗುವಂತೆ, ಕಾರ್ಯಕ್ರಮ ಅನುಷ್ಠಾನಕ್ಕೆ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ರೂಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.
ಈ ಸಮಿರ್ತಿಯಲ್ಲಿ ಪಂಚಾಯತ್ ರಾಜ್ ಕಾರ್ಯದರ್ಶಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಆಯುಕ್ತರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ನಿರ್ದೇಶಕರು, ಆರ್ಡಿಪಿಆರ್ ಆಂತರಿಕ ಆರ್ಥಿಕ ಸಲಹೆಗಾರರು, ಯೋಜನಾ ಉಸ್ತುವಾರಿ ಮತ್ತು ಮಾಹಿತಿ ವಿಭಾಗದ ನಿರ್ದೇಶಕರು ಸದಸ್ಯರಾಗಿದ್ದಾರೆ. ಪಂಚಾಯತ್ ರಾಜ್ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಕಾರ್ಯವೈಖರಿ ಅನುಷ್ಠಾನ: ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯವು ದೇಶಾದ್ಯಂತ ಜಾರಿಗೊಳಿಸುತ್ತಿರುವ ಇ- ಪಂಚಾಯತ್, ಪಂಚಾಯತ್ ಎಂಪವರ್ಮೆಂಟ್ ಆ್ಯಂಡ್ ಅಕೌಂಟಬಿಲಿಟಿ ಇನ್ಸೆಂಟೀವ್ ಸ್ಕೀಮ್(ಪಿಇಎಐಎಸ್), ಪಂಚಾಯತ್ ಮಹಿಳಾ ಏವಂ ಯುವಶಕ್ತಿ ಅಭಿಯಾನ(ಪಿಎಂಇವೈಎಸ್ಎ) ಹಾಗೂ ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ(ಬಿಆರ್ಜಿಎಫ್) ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾದ ಸಾಮಥ್ಯಾಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಮ್ಮಿಲನಗೊಳಿಸಿ, ಪಂಚಾಯತ್ ರಾಜ್ ಸಂಸ್ಥೆಗಳು, ಅವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಮರ್ಥ್ಯಭಿವೃದ್ಧಿ ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2012-13ನೇ ಸಾಲಿನಿಂದ ಆರ್ಜಿಪಿಎಸ್ಎ ಯೋಜನೆ ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ ಪಂಚಾಯ್ತಿಗಳ ಸಬಲೀಕರಣ, ಮಹಿಳೆಯರಿಗೆ ಮೀಸಲಾತಿ, ಆಡಳಿತ ವಿಕೇಂದ್ರೀಕರಣ, ರಾಜ್ಯ ಹಣಕಾಸು ಆಯೋಗದ ರಚನೆ, ಜಿಲ್ಲಾ ಯೋಜನಾ ಸಮಿತಿಗಳ ರಚನೆ, ಅವುಗಳ ಕಾರ್ಯವೈಖರಿ ಅನುಷ್ಠಾನ ಮಾಡಲಾಗುವುದು.
ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ರಾಪಂ, ತಾಪಂ ಮಟ್ಟದಲ್ಲಿ ಆಡಳಿತ ಮತ್ತು ತಾಂತ್ರಿಕ ಸಹಕಾರ ಅಗತ್ಯ. ಸಾಮರ್ಥ್ಯಾಭಿವೃದ್ಧಿ ಮತ್ತು ತರಬೇತಿ, ಸಾಂಸ್ಥಿಕ ರಚನೆ, ಪಂಚಾಯ್ತಿಗಳಲ್ಲಿ ಇ- ಆಡಳಿತ, ಮಾಹಿತಿ, ಶಿಕ್ಷಣ ಮತ್ತು ಸಂವಹನ, ರಾಜ್ಯ ಚುನಾವಣಾ ಆಯೋಗ ಬಲವರ್ಧನೆ ಮತ್ತು ವಿನೂತನ ಚಟುವಟಿಕೆಗಳನ್ನು ಈ ಯೋಜನೆ ಒಳಗೊಂಡಿದೆ.

ನಿರ್ಮಲ ಭಾರತ ಅಭಿಯಾನ್ ಕಾರ್ಯಕ್ರಮ
ನಿರ್ಮಲ ಭಾರತ ಅಭಿಯಾನ್(ಎನ್ಬಿಎ) ಕಾರ್ಯಕ್ರಮದ ಪ್ರಗತಿ ರಾಜ್ಯದ 13 ಜಿಲ್ಲೆಗಳಲ್ಲಿ ಸಮಾಧಾನಕರವಾಗಿಲ್ಲ. ಈ ಜಿಲ್ಲೆಗಳು ಯೋಜನೆಯಲ್ಲಿ ನಿರೀಕ್ಷಿತ ಪ್ರಮಾಣಧಲ್ಲಿ ಗುರಿ ಸಾಧಿಸದೇ ಹಿಂದೆ ಬಿದ್ದಿವೆ. ಹೀಗಾಗಿ ಈ ಜಿಲ್ಲೆಗಳಲ್ಲಿ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಲು ಯಾವ ರೀತಿಯ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಸಮಾಲೋಚಕರೊಂದಿಗೆ ಕಾರ್ಯಾಗಾರ ನಡೆಸುವಂತೆ ಕೊಡಗು, ಬೆಳಗಾವಿ, ಗದಗ, ಹಾವೇರಿ, ಕೋಲಾರ, ದಕ್ಷಿಣ ಕನ್ನಡ ಜಿಪಂ ಸಿಇಒಗಳಿಗೆ ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ನಿರ್ದೇಶಕರು ಸೂಚಿಸಿದ್ದಾರೆ.
ನಿರ್ಮಲ ಭಾರತ ಅಭಿಯಾನ ಬೇಡಿಕೆ ಆಧಾರಿತ ಮತ್ತು ಸಮೂದಾಯ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು, ನೈರ್ಮಲ್ಯದ ಬಗ್ಗೆ ಗ್ರಾಮೀಣ ಜನರಲ್ಲಿರುವ ಮೂಢನಂಬಿಕೆ, ಆಚಾರ- ವಿಚಾರ ತೊಡೆದು ಹಾಕಿ, ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವ ವಾತಾವರಣ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಮೂವರು ಸಮಾಲೋಚಕರನ್ನು ನೇಮಿಸಿಕೊಂಡಿದ್ದರೂ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಗಮನಹರಿಸುವಂತೆ ಅವರು ರಾಜ್ಯದ ಎಲ್ಲಾ ಜಿಪಂ ಸಿಇಒಗಳಿಗೆ ಸಲಹೆ ಮಾಡಿದ್ದಾರೆ.

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement