ಮುಗಿದ ಹಳ್ಳಿ ಹಕ್ಕಿ ಹಾಡು
ಕ.ಪ್ರ. ವಾರ್ತೆ, ಮೈಸೂರು, ನ.3-
ಕಾಡಿನ ನಡುವೆ ತನ್ನಿಚ್ಛೆಯಿಂದ ಹಕ್ಕಿಯಂತೆ ಹಾರಾಡಿಕೊಂಡಿದ್ದ 'ಜಂಗಲ್ ಜಾಕಿ' ಚಿತ್ರದ ನಾಯಕ ನಟ ರಾಜೇಶ್‌ನ ಸಾವಿನ ಸುದ್ದಿ ಮೈಸೂರಿಗರನ್ನು ದಿಗಿಲುಗೊಳಿಸಿದೆ.
ಖಾಸಗಿ ಚಾನೆಲ್ 'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋ ನಡೆಸಲು ರಾಜ್ಯದ ನಾನಾ ಕಡೆಗಳಿಂದ ಕಾಡಿನಲ್ಲಿ ವಾಸ ಮಾಡುತ್ತಿರುವ ಆದಿವಾಸಿ ಹುಡುಗರನ್ನು ಹುಡುಕಿ ಕರೆತರಲಾಗಿತ್ತು. ಅವರಲ್ಲಿ ಎಚ್.ಡಿ. ಕೋಟೆ ತಾಲೂಕಿನ ಬಳ್ಳೆ ಹಾಡಿಯ ಕೃಷ್ಣ ಮತ್ತು ಲಕ್ಷ್ಮೀ ಎಂಬವರ ಏಕೈಕ ಮಗನಾಗಿದ್ದ ರಾಜೇಶ್ ವಾಹಿನಿಯವರ ಕಣ್ಣಿಗೆ ಬಿದ್ದಿದ್ದ.
ಮುಗ್ಧತೆಯಿಂದ ವರ್ತಿಸುತ್ತ, ಪೆದ್ದುತನದ ಮಾತುಗಳನ್ನು ಆಡಿ ತನ್ನತ್ತ ಗಮನ ಸೆಳೆದಿದ್ದ ರಾಜೇಶ್, ರಿಯಾಲಿಟಿ ಶೋನಲ್ಲೂ ತನ್ನ ಮುಗ್ಧತನದ ಯಾನವನ್ನು ಮುಂದುವರೆಸಿದ್ದ. ನಗರದ ಹುಡುಗಿಯರು, ಹಳ್ಳಿಯ ಹುಡುಗರ ಸಂಗಮವಾಗಿದ್ದ ರಿಯಾಲಿಟಿ ಶೋ ರಾಜ್ಯಾದ್ಯಂತ ಒಳ್ಳೆಯ ಹೆಸರು ಪಡೆದಿತ್ತು. ಅದರಲ್ಲೂ ರಾಜೇಶ್‌ನನ್ನು ನೋಡಲು ಪ್ರೇಕ್ಷಕರು ಕಾದು ಕುಳಿತಿದ್ದ ಹೊಸ ಪ್ರವೃತ್ತಿಯೇ ಆರಂಭವಾಗಿ ಬಿಟ್ಟಿತ್ತು.
ಐಶ್ವರ್ಯಳೊಂದಿಗೆ ಕಿರಿಕ್ ಮಾಡಿದ್ದ: 'ಹಳ್ಳಿ ಹೈದ ಪ್ಯಾಟೇಗ್ ಬಂದ' ಶೋನಲ್ಲಿ ತನ್ನ ಜೊತೆಗಾರ್ತಿಯಾಗಿದ್ದ ಐಶ್ವರ್ಯಳೊಂದಿಗೆ ಕಿರಿಕ್ ತೆಗಿದಿದ್ದ ರಾಜೇಶ್, ಆಕೆಯನ್ನು ತನ್ನ ಆದಿವಾಸಿ ಭಾಷೆಯಲ್ಲೇ ಬೈದಿದ್ದ. ತನ್ನ ಕೋಪ ನೆತ್ತಿಗೇರುತ್ತಿದ್ದಂತ ನನ್ನ ಸಹವಾಸಕ್ಕೆ ಬರಬೇಡ. 'ಕುಂತರೆ ಕುರುಬ ನಿಂತರೆ ಕಿರುಬ...' ಎಂಬ ಮಾತನ್ನ ಉದುರಿಸಿ ತೊಡೆ ತಟ್ಟಿದ್ದ. ಅಲ್ಲಿಂದ ರಾಜೇಶ್‌ನ ಖ್ಯಾತಿ ಮತ್ತಷ್ಟು ಎತ್ತರಕ್ಕೆ ಹೋಗುತ್ತಿದ್ದಂತೆ ರಾಜೇಶ್- ಐಶ್ವರ್ಯಳ ಜೋಡಿ ಮೋಡಿ ಮಾಡಿತ್ತು.
ಅಪ್ಪುವಿನ ಅಭಿಮಾನಿ: ರಿಯಾಲಿಟಿ ಶೋ ಮುಗಿಯುವದೊರಳಗಾಗಿ ತನ್ನ ಇಷ್ಟಾದೇವರು ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಬೇಕೆಂಬ ಹೆಬ್ಬಯಕೆಯನ್ನು ವಾಹಿನಿಯವರಲ್ಲಿ ತೋಡಿಕೊಂಡಿದ್ದ. ಅವನ ಆಸೆಯನ್ನು ಈಡೇರಿಸುವುದಕ್ಕಾಗಿಯೇ ಶೋನ ಕೊನೆಯಲ್ಲಿ ಅಪ್ಪು ಅವರನ್ನೆ ಕರೆಸಿ ರಾಜೇಶ್ ಆಸೆಯನ್ನು ಈಡೇರಿಸುವುದರೊಂದಿಗೆ ಅಪ್ಪುವಿನ ಕೈಯಲ್ಲೇ ಪ್ರಶಸ್ತಿ ಪ್ರದಾನ ಮಾಡಿಸಿದ್ದರು.
ಬಿಗ್‌ಬಾಸ್‌ನ ಅತಿಥಿಯಾಗಿದ್ದ: ಕನ್ನಡದ ಖಾಸಗಿ ಚಾನೆಲ್‌ವೊಂದು ಇತ್ತೀಚೆಗೆ ನಡೆಸಿದ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ರಾಜೇಶ್‌ಗೆ ಸ್ಥಾನ ಕಲ್ಪಿಸಿಕೊಡಲು ನಿರ್ಧರಿಸಲಾಗಿತ್ತು. ಅದೇ ವೇಳೆಯಲ್ಲಿ ರಾಜೇಶ್ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದನು. ಆದ ಕಾರಣ ಆತನನ್ನು ಶೋನಿಂದ ಕೈಬಿಡಲಾಗಿತ್ತು. ಬಳಿಕ ರಾಜೇಶ್‌ಗಿದ್ದ ಖ್ಯಾತಿಯನ್ನು ಕಂಡು ಒಂದು ದಿನದ ಮಟ್ಟಿಗೆ ಶೋನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಬಳ್ಳೆಯಿಂದ ಬಂದು ಮೈಸೂರಿನ ಪರಸಯ್ಯನಹುಂಡಿಯಲ್ಲಿ ಮನೆ ಮಾಡಿಕೊಂಡಿದ್ದ ರಾಜೇಶ್ ಅಲ್ಲಿ ಅಕ್ಕಪಕ್ಕದ ಚಿಕ್ಕ ಮಕ್ಕಳೊಂದಿಗೆ ಸೇರಿ ಆಟವಾಡುತ್ತಿದ್ದ. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ಬೇಜಾರು ಕಳೆಯುವುದಕ್ಕಾಗಿ ಅವರಿಗೆ ವಾಲಿಬಾಲ್ ಮತ್ತು ನೆಟ್ ತೆಗೆದುಕೊಟ್ಟಿದ್ದ. ಮನೆಯ ಹಿಂಭಾಗದಲ್ಲಿ ಇದ್ದ ಖಾಲಿ ನಿವೇಶನದಲ್ಲಿ ಆಗಾಗ ಆಟವಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದರು.
'ಲವ್ ಈಸ್ ಪಾಯಿಸನ್'ನಲ್ಲಿ ಅಭಿನಯ
ಬೆಂಗಳೂರು: ರಾಜೇಶ್ ಅವರ ಇತ್ತೀಚಿನ ಲವ್ ಈಸ್ ಪಾಯಿಸನ್ ಚಿತ್ರದಲ್ಲಿ ಪೂನಂ ಪಾಂಡೆ ಅಭಿನಯಿಸಲು ಬಂದಿದ್ದರು. ಲವ್... ಬಿಡುಗಡೆಯಾಗಲು ಸಿದ್ಧಗೊಳ್ಳುವ ಹೊತ್ತಿನಲ್ಲೇ ರಾಜೇಶ್ ಇಹಲೋಕ ತ್ಯಜಿಸಿದ್ದಾರೆ. ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅರುಣ್ ಸಾಗರ್, ವಿಜಯ್ ರಾಘವೇಂದ್ರ, ಅವರು ರಾಜೇಶ್ ಅಕಾಲ ನಿಧನದ ಸುದ್ದಿ ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜಂಗಲ್ ಜಾಕಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಐಶ್ವರ್ಯ ಅವರು ರಾಜೇಶ್ ನಿಧನದ ಸುದ್ದಿಗೆ ಪ್ರತಿಕ್ರಿಯಿಸಿ, 'ನನ್ನ ಜೀವನದಲ್ಲಿ ಇದು ಅತ್ಯಂತ ಆಘಾತ ನೀಡಿದ ಸುದ್ದಿ. ರಾಜೇಶ್ ನನ್ನ ಒಳ್ಳೆಯ ಗೆಳೆಯನಾಗಿದ್ದ. ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದನ್ನು ಕೇಳಿ ಬೇಸರವಾಗಿತ್ತು. ಆದರೆ ಈಗ ಅವನ ಹಠಾತ್ ನಿಧನ ಶಾಕ್ ಆಗಿದೆ ಎಂದಿದ್ದಾರೆ.
ಇಂದು ಅಂತ್ಯಕ್ರಿಯೆ
ಎಚ್.ಡಿ. ಕೋಟೆ: ಮಹಡಿ ಮೇಲಿಂದ ಬಿದ್ದು ಸಾವಿಗೀಡಾದ ಜಂಗಲ್ ಜಾಕಿ ಚಿತ್ರದ ನಟ ರಾಜೇಶ್ ಅಂತ್ಯಕ್ರಿಯೆಯು ನ.4ರ ಬೆಳಗ್ಗೆ 11.30ಕ್ಕೆ ತಾಲೂಕಿನ ಬಳ್ಳೆ ಹಾಡಿಯ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.