ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೂಲೆಗುಂಪಾದ ನ್ಯಾ. ಮಳೀಮಠ್ ವರದಿ

Mainashree
Updated On : 4 Nov 2013, 12:28 pm

ಬೆಂಗಳೂರು: ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರು ನೀಡಿದ್ದ 'ಭಾರತದ ಕಾನೂನು ಸುಧಾರಣೆ' ಕುರಿತ ಸಮಗ್ರ ವರದಿ ಸುಮಾರು ಕಳೆದ 10 ವರ್ಷಗಳಿಂದ ಧೂಳು ತಿನ್ನುತ್ತಿದೆ.
ಇದು ನ್ಯಾ. ಮಳೀಮಠ್ ಸೇರಿದಂತೆ ಅವರ ಸಮಿತಿಗೆ ಬೇಸರ ತಂದಿದೆ. ವರದಿ ಜಾರಿಯಾಗದಿರಲು ರಾಜಕೀಯ ಕುಮ್ಮಕ್ಕು ಕಾರಣ ಎಂದು ಸಮಿತಿ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಮಳೀಮಠ್ ಸಮಿತಿ ವರದಿ ಸಲ್ಲಿಸಿ 10 ವರ್ಷ ಕಳೆದಿದ್ದರೂ ಕೇಂದ್ರ ಸರ್ಕಾರ ಅಥವಾ ಕೇಂದ್ರದ ಗೃಹ ಇಲಾಖೆ ಈ ವರದಿ ಜಾರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಆದರೆ, ಮಳೀಮಠ್ ವರದಿ ಶೀಘ್ರದಲ್ಲಿ ಜಾರಿಗೆ ತರಬೇಕು ಎಂಬ ಕೂಗು ರಾಜ್ಯದಲ್ಲಿ ಕೇಳಿಬರುತ್ತಿದ್ದು, ಈ ಸಂಬಂಧ ನಮ್ಮ ರಾಜ್ಯದ ಸಂಸದರು ಸಂಸತ್‌ನಲ್ಲಿ ಧ್ವನಿ ಎತ್ತಲಿ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ದಂಡ ಸಂಹಿತೆ ಕಾಯ್ದೆ 498ಎ ಕಾಯ್ದೆ ಸುಧಾರಣೆ ಅಗತ್ಯ ಎಂಬುದು ಸಾಕಷ್ಟು ಕುಟುಂಬಗಳು ಹಾಗೂ ಪುರುಷರಿಂದ ಒತ್ತಾಯ ಕೇಳಿಬರುತ್ತಿವೆ. ಆದಷ್ಟು ಬೇಗ ಈ ಕಾಯ್ದೆಯ ಸುಧಾರಣೆ ಹಾಗೂ ತಿದ್ದುಪಡಿ ಮಾಡಿ ರಾಷ್ಟ್ರಪತಿ ಅಂಕಿತ ಹಾಕಿಸಿ, ಅಮಾಯಕರನ್ನು ರಕ್ಷಿಸಿ ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ವರದಕ್ಷಿಣೆ ಕಾಯ್ದೆ ಬಗ್ಗೆ ಏನು ಹೇಳಿತ್ತು: ವರದಕ್ಷಿಣೆ ಕಾಯ್ದೆಯು ನಾನ್ ಬೇಲಬಲ್ (ಜಾಮೀನು ರಹಿತ) ಮತ್ತು ನಾನ್ ಕಾಂಪೌಂಡಬಲ್ (ರಾಜಿಯಾಗಲು ಆಗದ) ಆಗಿದ್ದು, ಇದರಿಂದ ಸಾಕಷ್ಟು ಮಂದಿಗೆ (ಆರೋಪಿ ಸ್ಥಾನದಲ್ಲಿರುವವರಿಗೆ) ತೊಂದರೆಯಾಗುತ್ತಿದೆ.
ಹಾಗಾಗಿ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಸುಧಾರಣೆ ಮಾಡುವ ಅಗತ್ಯವಿದ್ದು, ಜಾಮೀನು ರಹಿತ ಎಂದಿರುವುದನ್ನು ಜಾಮೀನು ದೊರಕುವಂತೆ ಹಾಗೂ ಕಾಂಪೌಂಡಬಲ್(ರಾಜಿಯಾಗುವಂತೆ) ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲವೊಂದು ಸುಧಾರಣೆ ಮಾಡಬೇಕಿದೆ. ಹೀಗೆ ಮಾಡಿದಲ್ಲಿ ಆರೋಪ ಎದುರಿಸುತ್ತಿರುವವರು ಹಾಗೂ ದೂರುದಾರರು ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಸಹ ಇಚ್ಛಿಸಿದಲ್ಲಿ ಮತ್ತೆ ಒಂದಾಗಬಹುದು. ಆದ ತಪ್ಪನ್ನು ಅರಿವ ದಂಪತಿ ತಮ್ಮ ತಪ್ಪನ್ನು ಮರೆತು ಮತ್ತೆ ಒಂದಾಗಲು ಇಚ್ಛಿಸಿದಲ್ಲಿ ಇದು ಸಹಾಯವಾಗುತ್ತದೆ. ಇದರಿಂದ ಸಾಕಷ್ಟು ಕುಟುಂಬಗಳು ಉಳಿಯುತ್ತವೆ ಎಂಬುದು ಇದರ ಉದ್ದೇಶ.

ರಾಜಿ ಹೇಗೆ?: ಮಾಡಿದ ತಪ್ಪಿನ ಅರಿವಾದಲ್ಲಿ ಹಾಗೂ ಮತ್ತೆ ಒಂದಾಗಲು ಇಚ್ಛಿಸಿದಲ್ಲಿ ಇಬ್ಬರೂ(ದಂಪತಿ) ಸೇರಿ ಒಂದು ಪತ್ರವನ್ನು ನೀಡಬೇಕು. ಈ ಪ್ರಕರಣ ಹಿಂಪಡೆದು ಮತ್ತೆ ನಾವಿಬ್ಬರೂ ಒಂದಾಗಲೂ ಬಯಸುತ್ತೇವೆ ಎಂದು ಹೇಳಿಕೆ ಬರೆದು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ನೀಡಬೇಕು.
ಅದನ್ನು ಪರಿಶೀಲಿಸುವ ನ್ಯಾಯಾಧೀಶರು ಮತ್ತೆ ಇಬ್ಬರ ವಿಚಾರಣೆ ನಡೆಸುತ್ತಾರೆ ಹಾಗೂ ರಾಜಿಯಾಗಲು ಕಾರಣವನ್ನು ಕೇಳುತ್ತಾರೆ. ಅದಾದ ನಂತರ ದಂಪತಿ ಯಾವುದೇ ಒತ್ತಡಕ್ಕೆ ಮಣಿಯದೆ ಸ್ವಇಚ್ಛೆಯಿಂದ ರಾಜಿಯಾಗಲು ಮುಂದಾಗಿದ್ದಾರೆ ಎಂದು ತಿಳಿದಲ್ಲಿ ನ್ಯಾಯಾಲಯ ಅದಕ್ಕೆ ಸಮ್ಮತಿ ಸೂಚಿಸಬುಹುದು. ಅವರಿಂದ ಸಾಕ್ಷ್ಯಕ್ಕೆ ಒಂದು ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗುತ್ತದೆ. ಅದನ್ನು ಅವರು ರಾಜ್ಯದ ಹೈಕೋರ್ಟ್‌ಗೆ ನೀಡಿ ಅಲ್ಲಿಂದ ಒಪ್ಪಿಗೆ ಪಡೆದು ಬಂದ ನಂತರ ಕೆಳಗಿನ(ಸಂಬಂಧಪಟ್ಟ) ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ಪರಿಶೀಲಿಸುವ ನ್ಯಾಯಾಧೀಶರು ಪ್ರಕರಣವನ್ನು ಮುಕ್ತಾಯಗೊಳಿಸಬಹುದು.

ನ್ಯಾ. ಮಳೀಮಠ್ ವರದಿ
ಕರ್ನಾಟಕ ಹಾಗೂ ಕೇರಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ.ಎಸ್.ಮಳೀಮಠ್ ಅವರ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು. ಅಪರಾಧ ನ್ಯಾಯ ವ್ಯವಸ್ಥೆ ಕುರಿತು ಸುಧಾರಣೆ ಅಗತ್ಯವೇ, ಬೇಡವೇ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ ಮಳೀಮಠ್ ಅವರು, ದೇಶಾದ್ಯಂತ 3,164 ಜನರನ್ನು ಸಂಪರ್ಕಿಸಿ ಅವರ ಜತೆ ಚರ್ಚಿಸಿ ನಂತರ ಈ ವರದಿ ಸಿದ್ದಪಡಿಸಿದ್ದರು. ಅದರಲ್ಲಿ ನೊಂದವರು, ಪುರುಷರು, ಮಹಿಳೆಯರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಕಾನೂನು ತಜ್ಞರು, ಸರ್ಕಾರಿ ನೌಕರರು, ನ್ಯಾಯಾಧೀಶರು, ಪೊಲೀಸರು ಸಹ ಇದ್ದಾರೆ. ಅವರಲ್ಲಿ 284 ಮಂದಿ ಸೂಕ್ತ ಉತ್ತರ ನೀಡಿದ್ದರು. 2000ರ ನವೆಂಬರ್ ತಿಂಗಳಲ್ಲಿ ಸಮಿತಿಯು ತನ್ನ ಕೆಲಸ ಆರಂಭಿಸಿತ್ತು. 2003ರ ಏಪ್ರಿಲ್ 21ರಂದು ಅಂತಿಮ ವರದಿಯನ್ನು ಕೇಂದ್ರದ ಗೃಹ ಇಲಾಖೆಗೆ ಅಂದರೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಸಲ್ಲಿಸಿತ್ತು.
ಸಮಿತಿಯಲ್ಲಿ ಆರು ಮಂದಿ ಇದ್ದರು. ಅವರಲ್ಲಿ ವಿ.ಎಸ್.ಮಳೀಮಠ್, ಭಾರತ ಯೋಜನಾ ಆಯೋಗದ ಮಾಜಿ ಸಲಹೆಗಾರ ಎಸ್.ವರದಾಚಾರಿ, ರಾಜಸ್ತಾನದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಗುಪ್ತಾ, ಗೃಹ ಇಲಾಖೆಯ ಜಂಟಿ ನಿರ್ದೇಶಕ ದುರ್ಗಾದಾಸ್ ಗುಪ್ತಾ, ಬಾರ್ ಕೌನ್ಸಿಲ್‌ನ ಅಧ್ಯಕ್ಷ ಸುಬ್ಬಾರಾವ್, ಪಶ್ಚಿಮ ಬಂಗಾಳ ವಿವಿಯ ಕುಲಪತಿ ಎನ್.ಆರ್.ಮಾಧವ ಮೆನನ್ ಇದ್ದರು.

ಈ ಕ್ರಿಮಿನಲ್ ನ್ಯಾಯ ಪದ್ಧತಿ ಬ್ರಿಟೀಷ್ ಕಾಲದಿಂದ ಬಂದಿದೆ. ಈಗಲೂ ಇದೇ ಪದ್ಧತಿ ಇದೆ. ವಾಸ್ತವಿಕವಾಗಿ ನೋಡಿದಾಗ ದೇಶದ ಪರಿಸ್ಥಿತಿಗೆ ಅದು ಹೊಂದುತ್ತಿಲ್ಲ. ಈ ಪದ್ಧತಿಯಲ್ಲಿ ಶಿಕ್ಷೆ ಆಗುತ್ತಿಲ್ಲ. ಹಾಗಾಗಿ 158 ಸುಧಾರಣೆಗಳ ಬಗ್ಗೆ ವರದಿ ಸಲ್ಲಿಸಿದ್ದೇವೆ. ಆದರೆ, ಇದಕ್ಕೆ ರಾಜಕೀಯದವರ ಅಡ್ಡಗಾಲು ಕಾರಣ. ಇದು ಬೇಸರ ತಂದಿದೆ.
-ನ್ಯಾ. ಮಳೀಮಠ್, ಅಧ್ಯಕ್ಷ, ರಾಜ್ಯ ಕಾನೂನು ಸಮಿತಿ
 
498ಎ ಕಾಯ್ದೆ ತಿದ್ದುಪಡಿ ತಂದರೆ ಸಾಕಷ್ಟು ಕುಟುಂಬಗಳಿಗೆ ಸಹಾಯವಾಗುತ್ತದೆ. ಆದರೆ, ನಮ್ಮ ಜನಪ್ರತಿನಿಧಿಗಳು ಈ ವಿಷಯವನ್ನು ಕೇಂದ್ರದಲ್ಲಿ ಪ್ರಸ್ತಾಪಿಸಬೇಕಿದೆ. ಇಲ್ಲವಾದಲ್ಲಿ ಕುಟುಂಬಗಳು ಚೂರಾಗುವುದು ಹಾಗೂ ಅಮಾಯಕರು ಶಿಕ್ಷೆ ಅನುಭವಿಸುವುದು ತಪ್ಪಿದ್ದಲ್ಲ.
-ಸುರೇಶ್, ನೊಂದವರು

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement