ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹುರ್ರಾ... ಬೇಸಿಗೆ ಬೆಳೆಗೂ ನೀರು

ರಾಜ್ಯದಲ್ಲಿ ನೀರಾವರಿ ಪ್ರದೇಶದ ರೈತರಿಗೆ ಹೀಗೊಂದು ಸಂತಸದ ಸುದ್ದಿ. ನೀರಾವರಿ ಪ್ರದೇಶಗಳಲ್ಲಿ ಈ ಬಾರಿ ಎರಡನೇ ಬೆಳೆಗೆ...

Mainashree
Updated On : 4 Nov 2013, 12:29 pm

ಬೆಂಗಳೂರು: ರಾಜ್ಯದಲ್ಲಿ ನೀರಾವರಿ ಪ್ರದೇಶದ ರೈತರಿಗೆ ಹೀಗೊಂದು ಸಂತಸದ ಸುದ್ದಿ. ನೀರಾವರಿ ಪ್ರದೇಶಗಳಲ್ಲಿ ಈ ಬಾರಿ ಎರಡನೇ ಬೆಳೆಗೆ ನೀರು ಲಭ್ಯವಾಗುವ ಸಾಧ್ಯತೆಯಿದೆ. ರೈತರು ಹಿಂಗಾರು ಬೆಳೆ ನಂತರ ಎರಡನೇ ಬೆಳೆಯನ್ನೂ ಅಂದರೆ, ಬೇಸಿಗೆ ಬೆಳೆಯನ್ನೂ ಬೆಳೆಯಬಹುದು.
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಜುಲೈನಲ್ಲೇ ತುಂಬಿ ಇನ್ನೂ ತುಳುಕುತ್ತಿವೆ. ಅದರಲ್ಲೂ ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶಗಳಲ್ಲಿ ಹಿಂಗಾರು ಮಳೆಯಾಗುತ್ತಿದ್ದು, ಒಳಹರಿವು ಕೂಡ ಚನ್ನಾಗಿದೆ. ಹೀಗಾಗಿ ನಾಲ್ಕು ವರ್ಷಗಳಿಂದ ಎರಡನೇ ನೀರು ಕಾಣದ ಪ್ರದೇಶಗಳಿಗೆ ಈ ಬಾರಿ ಎರಡನೇ ನೀರಿನ ಅವಕಾಶ ಲಭ್ಯವಾಗಲಿದೆ.
ಆದರೆ, ಕಾಲುವೆಗಳಲ್ಲಿ ಅನಗತ್ಯವಾಗಿ ನೀರು ಹರಿಯುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸದೆ ಪೋಲು ಮಾಡಿದರೆ ಎರಡನೇ ನೀರು ಸಿಗುವುದು ಕಷ್ಟ ಸಾಧ್ಯ. ಹೀಗಾಗಿ ಹಿಂಗಾರು ಮುಗಿಯುತ್ತಿದ್ದಂತೆ ಕಾಲುವೆ ಸಲಹಾ ಸಮಿತಿಗಳು ಸಭೆ ನಡೆಸಿ ಎರಡನೇ ನೀರು ಬಳಸಿಕೊಳ್ಳುವ ಬಗ್ಗೆ ವಿಚಾರ ಮಾಡಲಿವೆ. ನಂತರ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಪರಿಶೀಲಿಸಿ ನೀರು ಪೂರೈಕೆ ಬಗ್ಗೆ ನಿರ್ಧರಿಸಲಿವೆ.
ಮುಂಗಾರು ಬೆಳೆಗೆ ಅಂದರೆ ಮೊದಲ ನೀರು ಹರಿಸುವ ಬಗ್ಗೆ ವಿಳಂಬ ಮಾಡಿದ್ದ ಕಾಲುವೆ ಸಲಹಾ ಸಮಿತಿಗಳು ಈ ಬಾರಿ ಮುಂಗಡವಾಗಿಯೇ ಕ್ರಮಕೈಗೊಳ್ಳಲಿವೆ. ಹೀಗಾಗಿ ರಾಜ್ಯದಲ್ಲಿ 12ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಬೆಳೆಯ ಬಂಪರ್ ಲಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಹೆಚ್ಚಾದಷ್ಟೂ ಬೇಸಿಗೆ ಬೆಳೆ ಖಚಿತ: ರಾಜ್ಯದಲ್ಲಿ ಮುಂಗಾರು ಮುಕ್ತಾಯವಾಗಿದ್ದು, ಹಿಂಗಾರು ಮಳೆ ಉತ್ತಮ ನಿರೀಕ್ಷೆ ಮೂಡಿಸಿದೆ. ಅದರಲ್ಲೂ ತುಮಕೂರು, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸದ್ಯಕ್ಕೆ ಸರಾಸರಿಯಷ್ಟು ಮಳೆಯಾಗಿದೆ. ಹಿಂಗಾರು ಡಿಸೆಂಬರ್ ಅಂತ್ಯದವರೆಗೂ ಇರುವುದರಿಂದ ಅನೇಕ ಕಡೆ ರೈತರು ಹಿಂಗಾರು ಬೆಳೆ ಶುರು ಮಾಡಿದ್ದಾರೆ. ಜನವರಿ ವೇಳೆಗೆ ಹಿಂಗಾರು ಅಂತ್ಯಗೊಳ್ಳಲಿದ್ದು, ನಂತರ ಬೇಸಿಗೆ ಬೆಳೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಜಲಾಶಯಗಳಲ್ಲಿ ನಿರೀಕ್ಷಿತ ನೀರಿದ್ದರೆ ಸರ್ಕಾರ ಕಾಲುವೆಗಳಿಗೆ ಎರಡನೇ ಹರಿಸುವುದು ವಾಡಿಕೆ. ಹಾಗೆ ನೋಡಿದರೆ 2006ರ ನಂತರ ರೈತರಿಗೆ ಸಮರ್ಪಕ ನೀರೇ ಸಿಕ್ಕಿಲ್ಲ. 2007 ಮತ್ತು 2009ರಲ್ಲಿ ಕೆಲವೇ ಜಿಲ್ಲೆಗಳಲ್ಲಿ ಕೆಲವು ಕಡೆ ಮಾತ್ರ ಎರಡನೇ ನೀರು ನೀಡಲಾಗಿತ್ತು. ಅದರಲ್ಲೂ 2010ರ ನಂತರ ಈತನಕ ಮಳೆಯೂ ಇಲ್ಲದೆ, ಜಲಾಶಯಗಳೂ ತುಂಬದೆ ಎರಡನೇ ನೀರು ಕನಸು ಎನ್ನುವಂತಾಗಿತ್ತು.
ಆದರೆ, ಜಲಾಶಯಗಳು ಮೂರು ತಿಂಗಳಿನಿಂದ ಮೈದುಂಬಿರುವುದರಿಂದ ರೈತರಲ್ಲಿ ಈ ಬಾರಿ ಬೇಸಿಗೆ ಬೆಳೆ ಖಚಿತ ಎಂಬ ಭಾವನೆ ಮೂಡಿಸುತ್ತಿದೆ. ಮಳೆ ಸುರಿಯುತ್ತಿರುವ ಪ್ರದೇಶಗಳಲ್ಲಿ ರೈತರು ಬೆಳೆಗಳಿಗೆ ನೀರು ಕಟ್ಟುವುದು ಕಡಿಮೆಯಾಗುತ್ತಿದ್ದು, ಈ ನೀರನ್ನು ಉಳಿಸಿದಷ್ಟೂ ಬೇಸಿಗೆ ಬೆಳೆಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement