ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

100 ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಯೋಜನೆ

ಪದವಿ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನಿರುದ್ಯೋಗಿಗಳಾಗಬಾರದೆಂಬ ಕಾರಣಕ್ಕೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಜಾರಿಗೆ ತಂದ ...

Rashmi Kasaragodu
Updated On : 5 Nov 2013, 12:03 pm

ಶಿವಮೊಗ್ಗ: ಪದವಿ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನಿರುದ್ಯೋಗಿಗಳಾಗಬಾರದೆಂಬ ಕಾರಣಕ್ಕೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಜಾರಿಗೆ ತಂದ ಮಹತ್ವಾಕಾಂಕ್ಷಿಯ ವೃತ್ತಿ ಶಿಕ್ಷಣ ಯೋಜನೆ (ಎನ್ವಿಇಕ್ಯೂಎಫ್) ಈ ಬಾರಿ ರಾಜ್ಯದ 100 ಪದವಿಪೂರ್ವ ಕಾಲೇಜಿಗಳಲ್ಲಿ ಅನುಷ್ಠಾನಕ್ಕೆ ಬರುತ್ತಿದೆ. ವಿದ್ಯಾರ್ಥಿಯು ಪದವಿ ಪಡೆದ ನಂತರ ಕೌಶಲ್ಯಯುತ ಅಭ್ಯರ್ಥಿಯಾಗಿ ಔದ್ಯೋಗಿಕ ಮಾರುಕಟ್ಟೆಗೆ ಪ್ರವೇಶಿಸಬೇಕು ಹಾಗೂ ಸ್ವ ಉದ್ಯೋಗಕ್ಕೂ ಆಸಕ್ತಿ ತೋರಬೇಕೆಂಬ ಉದ್ದೇಶದಿಂದ ಯೋಜನೆ ರೂಪಗೊಂಡಿದ್ದು, 2012-13ರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿದೆ.
100 ಕಾಲೇಜು: ಪ್ರೌಢ, ಪದವಿಪೂರ್ವ, ಪದವಿ ಹಂತ ಹೀಗೆ ಬೇರೆ ಬೇರೆ ಹಂತಗಳಲ್ಲಿ ವೃತ್ತಿ ಶಿಕ್ಷಣ ತರಬೇತಿ ನೀಡುವ ಯೋಜನೆ ಇದಾಗಿದ್ದು, ಸದ್ಯ ರಾಜ್ಯದ 100 ಆಯ್ದ ಸಂಯುಕ್ತ ಪದವಿ ಪೂರ್ವ ಕಾಲೇಜುಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಪ್ರತಿ ಕಾಲೇಜಿಗೆ ಮೊದಲ ಹಂತದಲ್ಲಿ ತಲಾ ರು. 1.30 ಲಕ್ಷ ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಮಾಧ್ಯಮ ಶಿಕ್ಷಣ ಅಭಿಯಾನದಡಿಯಲ್ಲಿ ಯೋಜನೆ ಕಾರ್ಯಗತಗೊಳ್ಳುತ್ತಿದ್ದು, ಒಟ್ಟಾರೆ ಪ್ರತಿ ಕಾಲೇಜಿಗೆ ರು. 4.55 ಲಕ್ಷ ಲಭ್ಯವಾಗಲಿದೆ.
ಏನೇನು ಚಟುವಟಿಕೆ: ಆಯ್ಕೆಯಾಗಿರುವ ಕಾಲೇಜುಗಳಲ್ಲಿ ಈ ಯೋಜನೆಯಡಿ ವಿವಿಧ ಚಟುವಟಿಕೆ ನಡೆಸಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದದ್ದು ಕ್ಷೇತ್ರ ಸಂದರ್ಶನ. ಅದಕ್ಕೂ ಮುನ್ನ ಪಠ್ಯಕ್ರಮ, ಸಿಡಿ, ತಂತ್ರಾಶ ಮಾಡಿಕೊಳ್ಳಬೇಕು. ಇದಕ್ಕೆಂದು ಹಣ ನಿಗದಿಪಡಿಸಲಾಗಿದೆ.
ಹಾಗೆಯೇ ಕಾರ್ಯಕ್ರಮದ ಜಾಗೃತಿಗಾಗಿಯೂ ನಿಗದಿತ ಹಣ ಖರ್ಚು ಮಾಡಬೇಕು. ಶಾಲಾ ಮಟ್ಟದಲ್ಲಿ ಅರಿವು ಮೂಡಿಸುವುದು, ಯೋಜನೆಯ ವಿವರ ಮುದ್ರಿಸಿ ಪೋಷಕರಿಗೆ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಿಗೆ ಹಂಚುವುದು ಸೇರಿದಂತೆ ಸಂಬಂಧಿಸಿದ ಕ್ಷೇತ್ರದ ಕೈಗಾರಿಕೋದ್ಯಮಿಗಳನ್ನೊಳಗೊಂಡಂತೆ ಕಾರ್ಯಕ್ರಮ ರೂಪಿಸುವುದು.
ಏಕಾಗಿ ಯೋಜನೆ: ಶಿಕ್ಷಣ ಪಡೆದು ಔದ್ಯೋಗಿಕ ಮಾರುಕಟ್ಟೆ ಪ್ರವೇಶಿಸುವ ಬಹುತೇಕ ಅಭ್ಯರ್ಥಿ ಸಂಬಂಧಿಸಿದ ಕ್ಷೇತ್ರದ ಉದ್ಯೋಗಕ್ಕೆ ಪಕ್ವತೆ ಹೊಂದಿರುವುದಿಲ್ಲ ಎಂಬ ಗಂಭೀರ ಆರೋಪ ಔದ್ಯೋಗಿಕ ಕ್ಷೇತ್ರದಿಂದ ಆಗಿಂದಾಗೆ ಕೇಳಿಬರುತ್ತಲೇ ಇರುತ್ತದೆ. ಹೀಗಾಗಿ ಅಧ್ಯಯನ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮಾರುಕಟ್ಟೆ, ಕೈಗಾರಿಕೆಯ ಕುರಿತು ಆಸಕ್ತಿ ತೋರುವ ಮಾಹಿತಿಯನ್ನು ನೀಡುವ ಪ್ರಯತ್ನ ಯೋಜನೆ ಮಾಡಲಿದೆ.
ವಿದ್ಯಾರ್ಥಿಗಳು ಕ್ಷೇತ್ರ ಸಂದರ್ಶನ ಮಾಡುವ ಮೂಲಕ ಕ್ಷೇತ್ರದ ಬಗ್ಗೆ ಅರಿವು, ಅದರ ವ್ಯಾಪ್ತಿ, ಉಪಯೋಗ ಹಾಗೂ ಪ್ರಾಯೋಗಿಕ ಕಲಿಕಾ ಮಟ್ಟ ಉತ್ತಮಗೊಳ್ಳುತ್ತದೆ. ಜೊತೆಗೆ ಒಂದು ಕೈಗಾರಿಕೆಗೆ ಭೇಟಿ ಕೊಟ್ಟನೆಂದರೆ   ಅಲ್ಲಿನ ವ್ಯವಸ್ಥೆ, ಮಾನವ ಸಂಪನ್ಮೂಲ ಬಳಕೆ, ತಂತ್ರಜ್ಞಾನ ಇತ್ಯಾದಿ ಮಾಹಿತಿ ಪಡೆದುಕೊಳ್ಳುತ್ತಾನೆ. ಒಟ್ಟಾರೆ ಒಂದು ಚಿತ್ರಣ ಅವನ ತಲೆಯಲ್ಲಿ ಮೂಡುತ್ತದೆ.
ನೀತಿ ನಿಯಮ: ಪಠ್ಯ ವಿಷಯಗಳ ಆಧಾರದ ಪ್ರಕಾರ ಕ್ಷೇತ್ರ ಸಂದರ್ಶನ ಏರ್ಪಡಿಸುವುದು ಪ್ರಮುಖ ಅಂಶ. ಹಾಗೆಯೇ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾರಿಕೆಗಳಿಗೆ ಮಾತ್ರ ಭೇಟಿ ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಭೇಟಿ ನೀಡುವ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿ ಶಿಕ್ಷಕರು, ಉಪನ್ಯಾಸಕರು, ಸಂಬಂಧಿಸಿದ ಕೈಗಾರಿಕೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ವಾನುಮತಿ ಪಡೆದು ಕ್ಷೇತ್ರ ಸಂದರ್ಶನ ಯೋಜನೆಯನ್ನು ತಯಾರಿಸಬೇಕಾಗುತ್ತದೆ.
ಒಂದು ವರ್ಷದಲ್ಲಿ ಮೂರು ಬಾರಿ ಕ್ಷೇತ್ರ ಭೇಟಿ ಮಾಡಬೇಕಾಗುತ್ತದೆ. ಕ್ಷೇತ್ರ ಸಂದರ್ಶನದ ವಿವರಗಳನ್ನು ವೃತ್ತಿ ಶಿಕ್ಷಕರು, ವಿದ್ಯಾರ್ಥಿಗಳ ಮತ್ತು ಪೋಷಕರಿಗೆ ಕನಿಷ್ಠ ಒಂದು ವಾರದ ಮುಂಚೆ ಸಂದರ್ಶನ ನೀಡುವ ಸ್ಥಳ, ದಿನಾಕ, ಉದ್ದೇಶ ಮತ್ತು ಅದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಬೇಕಾಗುತ್ತದೆ. ಯೋಜನೆಯ ಉದ್ದೇಶ ಈಡೇರುವ ಉದ್ದೇಶದಿಂದ ಕೆಲವು ಷರತ್ತು, ಸೂಚನೆ ಹಾಕಿದ್ದು, ಉಲ್ಲಂಘಿಸಿದರೆ ಸಂಬಂಧಿಸಿದವರನ್ನೇ ನೇರ ಹೊಣೆ ಮಾಡುವುದಾಗಿ ಸೂಚಿಸಿ, ಪ್ರತಿ ಕಾಲೇಜಿಗೆ ರು. 1.30 ಲಕ್ಷ ಬಿಡುಗಡೆ ಮಾಡಲಾಗಿದೆ.
ಈ ಹಣವನ್ನು ಯಾವು ಉದ್ದೇಶ ಮತ್ತು ಚಟುವಟಿಕೆಗಳಿಗೆ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶ ಮತ್ತು ಚಟುವಟಿಕೆಗಳಿಗೆ ನಿಗದಿತ ಮಿತಿಯಲ್ಲಿ ಬಳಸಬೇಕು. ಮಾರ್ಗ ಪಲ್ಲಟ ಮಾಡುವುದು ಾಗೂ ಚಟುವಟಿಕೆವಾರು ನಿಗದಿಪಡಿಸಿದ ಮೊತ್ತ ಮೀರುವುದು ನಿಯಮ ಬಾಹಿರವಾಗುತ್ತದೆ ಎಂದು ಎಚ್ಚರಿಸಲಾಗಿದೆ.


ಎಷ್ಟು ಕಾಲೇಜು

ಎಷ್ಟು ಕಾಲೇಜು
ಬೆಂಗಳೂರು    21
ಬೆಳಗಾವಿ    4
ಬಳ್ಳಾರಿ    2
ಬೀದರ್    3
ಬಿಜಾಪುರ    3
ಚಾಮರಾಜನಗರ    2
ಚಿಕ್ಕಬಳ್ಳಾಪುರ    5
ಚಿಕ್ಕಮಗಳೂರು    4
ಚಿತ್ರದುರ್ಗ    2
ದಕ್ಷಿಣ ಕನ್ನಡ    2
ದಾವಣಗೆರೆ    4
ಧಾರವಾಡ    1
ಗದಗ    1
ಗುಲ್ಬರ್ಗ    1
ಹಾಸನ    5
ಹಾವೇರಿ    2
ಕೊಡಗು    2
ಕೋಲಾರ    2
ಕೊಪ್ಪಳ    2
ಮಂಡ್ಯ    4
ಮೈಸೂರು    2
ರಾಯಚೂರು    3
ರಾಮನಗರ    5
ಶಿವಮೊಗ್ಗ    3
ತುಮಕೂರು    6
ಉಡುಪಿ    3
ಉ.ಕನ್ನಡ    4
ಯಾದಗಿರಿ    1
ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement