ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಪಘಾತಕ್ಕೆ ಬಲಿಯಾದ್ರು 3 ಶಬರಿ ಯಾತ್ರಿಗಳು

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿ ಪಳನಿಗೆ ಟೆಂಪೋ ಟ್ರಾವೆಲರ್‌ನಲ್ಲಿ ತೆರಳುತ್ತಿದ್ದ ನಗರದ 14 ಜನರ ಪೈಕಿ ಮೂವರು ...

Rashmi Kasaragodu
Updated On : 5 Nov 2013, 12:43 pm

ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿ ಪಳನಿಗೆ ಟೆಂಪೋ ಟ್ರಾವೆಲರ್‌ನಲ್ಲಿ ತೆರಳುತ್ತಿದ್ದ ನಗರದ 14 ಜನರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ಸೋಮವಾರ ಸಂಭವಿಸಿದೆ.
ತಮಿಳುನಾಡು ಡಿಂಡಿಗಲ್‌ನ ಅಮ್ಮಪಟ್ಟಿ ಬಳಿ ರಾತ್ರಿ 1.30  ತಮಿಳುನಾಡು ಸರ್ಕಾರಿ ಬಸ್ಸು ಹಾಗೂ ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ  ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕಾಶ್ ನಗರ ನಿವಾಸಿ ಭರತ್‌ಕುಮಾರ್, ಮಾಗಡಿ ರಸ್ತೆಯ ವಿನಯ್, ಮಹಾಲಕ್ಷ್ಮಿ ಬಡಾವಣೆಯ ಲೋಕೇಶ್ ಮೃತರು. ಗಂಭೀರ ಗಾಯಗೊಂಡಿರುವ ಟೆಂಪೋ ಟ್ರಾವೆಲರ್ ಚಾಲಕನನ್ನು ಸಮೀಪದ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದ್ದರೂ, ಬಳಿಕ ಅವರೂ ಅಸುನೀಗಿದ್ದಾರೆ.
ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿದ್ರೆಯ ಮಂಪರಿನಲ್ಲಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಸ್ನೇಹಿತರು-ಸಹೋದ್ಯೋಗಿಗಳು: ಭರತ್‌ಕುಮಾರ್ ಮತ್ತು ವಿನಯ್ ಕೆಂಗೇರಿಯಲ್ಲಿರುವ ಹಿಂದೂಜಾ ಸಂಸ್ಥೆಯ ಉದ್ಯೋಗಿಗಳು. ಇವರಿಬ್ಬರು ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಸೇರಿದಂತೆ ಒಟ್ಟು 14 ಜನ ರ ಜತೆ ಗುರುವಾರ ರಾತ್ರಿ ಮಲ್ಲೇಶ್ವರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಟೆಂಪೋಟ್ರಾವೆಲರ್ ಒಂದರಲ್ಲಿ ಶಬರಿಮಲೆಗೆ ಹೊರಟಿದ್ದರು. ಶಬರಿಮಲೆ ಹಾಗೂ ರಾಮೇಶ್ವರ ದೇವಸ್ಥಾನಗಳ ದರ್ಶನ ಪಡೆದ ಇವರು ಭಾನುವಾರ ರಾತ್ರಿ ಪಳನಿಗೆ ಹೊರಟಿದ್ದರು.
ಆದರೆ, ರಾತ್ರಿ 1.30ರ ಸುಮಾರಿಗೆ ದಿಂಡಿಗಲ್ ಸಮೀಪದ ಅಮ್ಮಪಟ್ಟಿ ಬಳಿ ಬರುತ್ತಿದ್ದಂತೆ ಎದುರುಗಡೆಯಿಂದ ಬರುತ್ತಿದ್ದ ಸರ್ಕಾರಿ ಬಸ್ಸು ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಭರತ್, ವಿನಯ್ ಮತ್ತು ಲೋಕೇಶ್ ಸ್ಥಳದಲ್ಲೇ ಮೃತಪಟ್ಟರು ಎಂದು ಭರತ್ ಸಂಬಂಧಿ, ಅಪಘಾತದಲ್ಲಿ ಗಾಯಗೊಂಡಿರುವ ಯಶ್ವಂತ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ರಾತ್ರಿ ನಗರಕ್ಕೆ ಶವಗಳು: ಭರತ್ ಹಿಂದೂಜಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ನಗರದ ಮರಿಯಪ್ಪ ಕಾಲೇಜಿನಲ್ಲಿ ಕರೆಸ್ಪಾಂಡೆನ್ಸ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಭರತ್ ಮತ್ತು ಸ್ನೇಹಿತರು ಈ ಹಿಂದೆಯೂ ಶಬರಿಮಲೆಗೆ ಹೋಗಿದ್ದು ಅವರಲ್ಲಿ ಯಶ್ವಂತ್ ಇದೇ ಪ್ರಥಮಬಾರಿ ಅಲ್ಲಿಗೆ ತೆರಳುತ್ತಿರುವುದು. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅವರು ಸಮೀಪದ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ತೀವ್ರನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದ ಅವರು ಕೆಲ ಗಂಟೆಗಳ ಬಳಿಕ ಅಸುನೀಗಿದ್ದಾರೆ. ಮಡಿದವರ ಪಾರ್ಥಿವ ಶರೀರವನ್ನು ವಾಹನದಲ್ಲಿ ತರಲಾಗುತ್ತಿದ್ದು, ಸೋಮವಾರ ರಾತ್ರಿ ಸಂಬಂಧಿತರಿಗೆ ಒಪ್ಪಿಸಲಾಗುವುದು. ಗಾಯಗೊಂಡವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು ಅವರು ಮತ್ತೊಂದು ವಾಹನದಲ್ಲಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಭರತ್ ಸಂಬಂಧಿ ಶಂಕರ್ ತಿಳಿಸಿದ್ದಾರೆ.

ಇದೆಂಥಾ ವಿಪರ್ಯಾಸ..!

ಶಬರಿಮಲೆ ದರ್ಶನ ಮಾಡಿ ಪಳನಿಗೆ ತೆರಳುವಾಗ ಸಂಭವಿಸಿದ ಈ ಅಪಘಾತದಲ್ಲಿ ಮೃತಪಟ್ಟಿರುವ ಭರತ್ ಪ್ರಕಾಶನಗರದ 3ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ ನಿವಾಸಿ. 2011ರ ಜ. 14ರಂದು ಶಬರಿಮಲೆಯಲ್ಲಿ ನಡೆದ ಕಾಲ್ತುಳಿತದಲ್ಲೂ ಪ್ರಕಾಶನಗರದ 5ನೇ ಮುಖ್ಯರಸ್ತೆ ನಿವಾಸಿ ಶ್ರೀನಿವಾಸಶೆಟ್ಟಿ ಎಂಬವರು ಮೃತಪಟ್ಟಿದ್ದರು. ವಿಪರ್ಯಾಸವೆಂದರೆ ಇವರಿಬ್ಬರೂ ಪ್ರಕಾಶನಗರ ಅಯ್ಯಪ್ಪಸ್ವಾಮಿ ದೇವಸ್ಥಾನ ಪಕ್ಕದಲ್ಲೇ ವಾಸವಾಗಿದ್ದರು.

ನಿದ್ರೆ ಬಂದರೆ ಸ್ವಲ್ಪ ಹೊತ್ತು ರೆಸ್ಟ್ ತಗೊಳ್ಳಿ ಎಂದು ರಾತ್ರಿ ಪ್ರಯಾಣ ವೇಳೆ ಡ್ರೈವರ್‌ಗೆ ಹೇಳಿದ್ದೆ. ಆದರೆ ಅವರು ಪರವಾಗಿಲ್ಲ ಎಂದು ಪ್ರಯಾಣ ಮುಂದುವರಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಡಬ್ ಅಂತ ದೊಡ್ಡ ಶಬ್ದ ಆಯ್ತು. ಎಚ್ಚರ ಆದಾಗ ಆಸ್ಪತ್ರೆಯಲ್ಲಿದ್ದೆ.
- ಯಶ್ವಂತ್, ಗಾಯಾಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement