ಕಾಲುಬಾಯಿ ಜ್ವರಕ್ಕೆ ಬಿತ್ತು ಮೂಗುದಾರ
ಕ.ಪ್ರ.ವಾರ್ತೆ ರಾಮನಗರ ನ.4-
ಜಾನುವಾರುಗಳ ಪಾಲಿಗೆ ಮಹಾಮಾರಿಯಾಗಿದ್ದ ಕಾಲುಬಾಯಿ ಜ್ವರಬಾಧೆ ಇದೀಗ ನಿಯಂತ್ರಣಕ್ಕೆ ಬಂದಿದೆ. ರಾಸುಗಳ ಸಾವಿನ ಪ್ರಮಾಣವೂ ತಗ್ಗಿದ್ದು, ಹೈನೋದ್ಯಮ ಅವಲಂಬಿತ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಮನಗರವೂ ಸೇರಿದಂತೆ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ವ್ಯಾಪ್ತಿಯ 12 ತಾಲೂಕುಗಳಲ್ಲಿ ಕಾಲುಬಾಯಿ ಜ್ವರಕ್ಕೆ ಸುಮಾರು 2600 ರಾಸುಗಳು ಬಲಿಯಾಗಿವೆ. ಕಳೆದೊಂದು ವಾರದಿಂದ ಸಾವನ್ನಪ್ಪಿದ ರಾಸುಗಳ ಸಂಖ್ಯೆ ದಿನಕ್ಕೆ 2-3 ಮಾತ್ರವೇ ಆಗಿದೆ. ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ಪ್ರಾರಂಭದಲ್ಲಿ ದಿನಕ್ಕೆ 50-60 ರಾಸುಗಳು ಸಾವನ್ನಪ್ಪಿದ ನಿದರ್ಶನವಿದೆ. ಆದರೆ, ಕಳೆದೊಂದು ವಾರದಿಂದ ದಿನಕ್ಕೆ 2-3 ರಾಸುಗಳಷ್ಟೇ ಸತ್ತಿವೆ. ಅವು ಈ ಮೊದಲೇ ರೋಗಪೀಡಿತವಾಗಿದ್ದ ಪಡ್ಡೆ ಮತ್ತು ಕರುಗಳಾಗಿವೆ.
ಯಶಸ್ಸಿಗೆ ನಾನಾ ಕಾರಣ: ಕಾಲುಬಾಯಿ ಜ್ವರ, ಗಳಲೇ ರೋಗ, ಹಂದಿ ರೋಗ ಆವರಿಸುತ್ತಿದ್ದಂತೆಯೇ ಕೆಎಂಎಫ್ ಅಧೀನದ ಒಕ್ಕೂಟಗಳ ಪೈಕಿ ಅತಿ ಹೆಚ್ಚು ಕಾಳಜಿ ವಹಿಸಿದ್ದು ಬಮೂಲ್ ಆಡಳಿತ ವರ್ಗ ಮತ್ತು ಅಧಿಕಾರಿಗಳು ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ವಾಷಿಂಗ್ ಸೋಡಾ ಮಿಶ್ರಣ ಸಿಂಪಡಣೆಯಿಂದ ರೋಗ ಹರಡುವ ವೈರಾಣುಗಳನ್ನು ನಾಶಪಡಿಸಲು ಸಾಧ್ಯವೆಂದು ವಿಜ್ಞಾನಿಗಳು ನೀಡಿದ ಸಲಹೆಯಿಂದ ಪ್ರೇರಿತವಾದ ಬಮೂಲ್ ಆಡಳಿತವು ತನ್ನ ವ್ಯಾಪ್ತಿಯ ದನದ ಕೊಟ್ಟಿಗೆ, ಸುತ್ತಮುತ್ತಲ ಪರಿಸರದಲ್ಲಿ ಸಿಂಪಡಣೆ ಮಾಡಿಸಿತು.
ಇದೇ ವೇಳೆಗೆ ಅಲೋಪಥಿಯೊಟ್ಟಿಗೆ ಹೋಮಿಯೋಪಥಿ ಚಿಕಿತ್ಸೆಯೂ ರೋಗವನ್ನು ಹತೋಟಿಗೆ ತರುವಲ್ಲಿ ಗುಣಾತ್ಮಕವಾಗಿ ಕೆಲಸ ಮಾಡಿದೆ. ಹವಾಮಾನ ತಜ್ಞರ ಭವಿಷ್ಯದಂತೆ ಹಿಂಗಾರು ದುರ್ಬಲಗೊಂಡು, ಒಣ ಹವೆ ಇದ್ದದ್ದೂ ವೈರಾಣುಗಳ ನಾಶಕ್ಕೆ ಸಹಕಾರಿ ಆಗಿದೆ.
ಸಮರೋಪಾದಿ ಕಾರ್ಯಕ್ರಮ: ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ, ಕೆಎಂಎಫ್ ಅಧೀನದ ಸಂಚಾರಿ ಪಶು ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿ ತಡವಾಗಿ ಎಚ್ಚೆತ್ತರಾದರೂ ಚಿಕಿತ್ಸಾ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದೂ ಯಶಸ್ವಿನ ಕಾರಣಗಳಲ್ಲಿ ಒಂದೆನ್ನಬಹುದು. ಅದೆಷ್ಟೋ ಪಶು ವೈದ್ಯರು ಆಸ್ಪತ್ರೆಗಳನ್ನು ಬಿಟ್ಟು ಹೊರ ಹೋಗುತ್ತಿರಲೇ ಇಲ್ಲ. ಈ ಬಾರಿ ಅವರಿಗೆ ಸರ್ಕಾರದಿಂದಲೇ ಅವರಿಗೆ ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಮಾಡಲಾಗಿತ್ತು. ದೂರವಾಣಿ ಕರೆ ಬಂದರೂ ಸಾಕು ರೈತನ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ.
ಕೇವಲ ಅಧಿಕಾರಿಗಳು ಮತ್ತು ಪಶು ವೈದ್ಯರಿಗಷ್ಟೇ ಅಲ್ಲದೆ ಸೀಮಿತ ಚುನಾಯಿತ ಪ್ರತಿನಿಧಿಗಳೂ ತಮ್ಮ ಭಾಗದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬರು ವಾರಗಟ್ಟಲೆ ಕೆಲಸ ಬಿಟ್ಟು, ರೈತರಿಗೆ ಸ್ಪಂದಿಸುವುದಕ್ಕೇ ಸಮಯ ಮೀಸಲಿರಿಸಿದ್ದೂ ಇದೆ. ಅಂತೆಯೇ ಕಾಲುಬಾಯಿ ಜ್ವರಬಾಧೆ ಮತ್ತು ಗಳಲೇ ರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನೂ ಹಾಕಲಾಗಿದೆ. ಒಟ್ಟಾರೆ, ಸಂಘಟಿತ ಪ್ರಯತ್ನದ ಫಲವಾಗಿ ಅದೃಷ್ಟವಶಾತ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದಿದೆ. ಇದರೊಂದಿಗೆ ರಾಸುಗಳ ಸಾಲು ಸಮಾಧಿಯೂ ತಪ್ಪಿದೆ.
ಎರಡು ರೋಗಕ್ಕೆ ಒಂದೇ ಲಸಿಕೆ
ಕಾಲುಬಾಯಿ ಜ್ವರಕ್ಕೆ ಕೆಎಂಎಫ್, ಗಳಲೇ ರೋಗಕ್ಕೆ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಮುಂಜಾಗ್ರತಾ ಕ್ರಮದ ಲಸಿಕೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಉಭಯ ರೋಗಗಳಿಗೂ ಒಂದೇ ಲಸಿಕೆ ನೀಡುವ ನಿಟ್ಟಿನಲ್ಲಿ ಕೆಎಂಎಫ್ ಚಿಂತನೆ ನಡೆಸುತ್ತಿದೆ. ಕಾಲುಬಾಯಿ ಮತ್ತು ಗಳಲೇ ಉಭಯ ರೋಗಗಳ ತಡೆಗೆ ಹೊಸದಾಗಿ ಪ್ರಯೋಗಿಸಲು ಉದ್ದೇಶಿಸಿರುವ ಲಸಿಕೆ ಹೆಸರು ಬಯೋ ವ್ಯಾಕ್. ಇದನ್ನು 2014ನೇ ಜನವರಿಯಲ್ಲಿ ರಾಸುಗಳೀಗೆ ನೀಡುವ ನಿಟ್ಟಿನಲ್ಲಿ ಕೆಎಂಎಫ್ ಉನ್ನತ ಅಧಿಕಾರಿಗಳು ಮತ್ತು ತಜ್ಞ ವೈದ್ಯರು ವಿಜ್ಞಾನಿಗಳ ಜತೆ ಚರ್ಚಿಸುತ್ತಿದ್ದಾರೆ. ಇದಕ್ಕೆ ವಿಜ್ಞಾನಿಗಳು ಹಸಿರು ನಿಶಾನೆ ನೀಡಿದ್ದೇ ಆದರೆ ಎರಡೆರಡು ಬಾರಿ ಮುಂಜಾಗ್ರತಾ ಕ್ರಮದ ಲಸಿಕೆ ನೀಡುವ ತಾಪತ್ರಯ ತಪ್ಪಲಿದೆ. ಕಾರ್ಯಕ್ರಮದ ಪ್ರಾರಂಭದ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ರೈತರಿಗೆ ಅರಿವು ಮೂಡಿಸಲಾಗುವುದು ಎಂದು ತಜ್ಞ ಪಶು ವೈದ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಮಾಸಾಂತ್ಯಕ್ಕೆ ಪರಿಹಾರ ವಿತರಣೆ
ಮೃತ ರಾಸುಗಳಿಗೆ ಈಗಾಗಲೇ ನಿರ್ಧರಿಸಿರುವ ಮಾರ್ಗಸೂಚಿಯನ್ವಯ ಪರಿಹಾರ ವಿತರಣೆಯನ್ನು ನವೆಂಬರ್ ಮಾಸಾಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಬಮೂಲ್ ಉನ್ನತ ಮೂಲಗಳು ದೃಢಪಡಿಸಿವೆ. ಕೆಎಂಎಫ್ ನೀಡುವ ಪರಿಹಾರವನ್ನು ಸರ್ಕಾರದ ಪರಿಹಾರದ ಜತೆಗೂಡಿಸಿ ವಿತರಿಸಬೇಕೇ ಅಥವಾ ಪ್ರತ್ಯೇಕವಾಗಿಯೇ ನೀಡಬೇಕೇ ಎನ್ನುವ ವಿಷಯದಲ್ಲಿ ಮೂಡಿರುವ ಗೊಂದಲ ಒಂದೆರಡು ದಿನದಲ್ಲಿ ನಿವಾರಣೆಯಾಗಲಿದೆ ಎಂದು ಹೇಳಲಾಗಿದೆ. ಅಕ್ಟೋಬರ್ 31ರವರೆಗೆ ಸಂಭವಿಸಿದ ರಾಸುಗಳ ಸಾವಿನ ಪ್ರಕರಣವನ್ನಷ್ಟೇ ಬಮೂಲ್ ಅಧಿಕಾರಿಗಳು ಸದ್ಯಕ್ಕೆ ಪರಿಗಣಿಸಿದ್ದಾರೆ. ನ.1ರ ನಂತರದ ಸಾವಿನ ಪ್ರಕರಣಗಳನ್ನು ನೇರವಾಗಿ ಸರ್ಕಾರ ಸಮಿತಿ ಗಮನಕ್ಕೆ ತಂದು, ಅರ್ಹ ಫಲಾನುಭವಿಗಳು ಪರಿಹಾರ ಪಡೆಯಬೇಕಿದೆ.
ಪರಿಶೀಲನಾ ಕಾರ್ಯಕ್ಕೆ ಚುರುಕು
ಕಾಲುಬಾಯಿ ಜ್ವರ ಮತ್ತು ಗಳಲೇ ರೋಗದಿಂದ ಸಾವನ್ನಪ್ಪಿದ ರಾಸುಗಳ ನಿಖರ ಮಾಹಿತಿಯನ್ನು ಅರಿಯುವುದಕ್ಕಾಗಿ ತಹಸೀಲ್ದಾರ್ ನೇತೃತ್ವದಲ್ಲಿ ತಾಲೂಕುವಾರು ಪರಿಶೀಲನಾ ಕಾರ್ಯಕ್ಕೆ ಚುರುಕು ನೀಡಿದ್ದು, ಪಟ್ಟಿ ಬಹುತೇಕ ಅಂತಿಮವಾಗಿದೆ. ಈ ಮೊದಲು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ, ಕರ್ನಾಟಕ ಹಾಲು ಮಹಾ ಮಂಡಳದ ಅಧಿಕಾರಿಗಳ ಪಟ್ಟಿ ತಾಳೆಯೇ ಆಗುತ್ತಿರಲಿಲ್ಲ. ಈಗಷ್ಟೇ ವಾಸ್ತವದ ನೆಲಗಟ್ಟಿನಲ್ಲಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಪಟ್ಟಿ ಅಂತಿಮಪಡಿಸುತ್ತಿದ್ದಾರೆ. ಹೂಳಲಾಗಿರುವ ಮೃತ ರಾಸುಗಳನ್ನು ಹೊರ ತೆಗೆದು, ಮರು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದ ಅಧಿಕಾರಿಗಳಿಗೆ ಚನ್ನಪಟ್ಟಣ ತಾಲೂಕಿನ ಕೆಲವೆಡೆ ತೀವ್ರ ಪ್ರತಿರೋಧ ಎದುರಾಗಿದೆ. ಈ ಬಳಿಕ ಮರು ಮರಣೋತ್ತರ ಪರೀಕ್ಷೆ ಉದ್ದೇಶವನ್ನು ಅಧಿಕಾರಿಗಳು ಕೈ ಬಿಟ್ಟಿದ್ದಾರೆನ್ನಲಾಗಿದೆ.
ಕಾಲುಬಾಯಿ ಜ್ವರಬಾಧೆ ಮತ್ತು ಗಳಲೇ ರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಬಯೋ ವ್ಯಾಕ್ ಲಸಿಕೆ ನೀಡುವ ಕುರಿತು ವಿಜ್ಞಾನಿಗಳ ಜತೆ ಚರ್ಚಿಸಲಾಗುತ್ತಿದೆ. ಸಮ್ಮತಿ ಸಿಕ್ಕರೆ ಮುಂದಿನ ಜನವರಿಯಲ್ಲೇ ಲಸಿಕೆ ನೀಡಿಕೆ ಪ್ರಾರಂಭಗೊಳ್ಳಲಿದೆ. ಸದ್ಯಕ್ಕೆ ಬಮೂಲ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹತೋಟಿಗೆ ಬಂದಿದೆ.
- ಡಾ.ದೇವರಾಜ್, ಉಪ ವ್ಯವಸ್ಥಾಪಕರು ಮತ್ತು ತಜ್ಞ ಪಶು ವೈದ್ಯರು, ಬಮೂಲ್
- ಮತ್ತೀಕೆರೆ ಜಯರಾಮ್