ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಊಟಕೆ ಹಾಜರ್, ಶಾಲೆಗೆ ಚಕ್ಕರ್!

Mainashree
Updated On : 6 Nov 2013, 1:28 am

ಹಾವೇರಿ: ಭಕ್ತ ಕನಕದಾಸರು, ಸಂತ ಶಿಶುನಾಳ ಶರೀಫರ ಮೂಲಕ ಸಾಹಿತ್ಯಿಕ ಶ್ರೀಮಂತಿಕೆಗೆ ಉನ್ನತ ಕೊಡುಗೆ ನೀಡಿರುವ ದಾರ್ಶನಿಕರ ಕರ್ಮಭೂಮಿ ಹಾವೇರಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳೆಲ್ಲ ಅಡುಗೆ ಮನೆಗಳಂತಾಗಿವೆ!
ಎರಡು ದಶಕಗಳ ಹಿಂದೆ ಸರ್ಕಾರಿ ಶಾಲೆಗಳಿಗೆ ಕೊಠಡಿ ಹಾಗೂ ಸಿಬ್ಬಂದಿ ಕೊರತೆ ಕಾಡುತ್ತಿತ್ತು. ಈಗ ಸರ್ಕಾರಗಳು ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಲೇ ಸಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಒಟ್ಟು 1,460 ಶಾಲೆಗಳಿವೆ. ಈ ಪೈಕಿ 1,163 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿದ್ದರೆ, ಸಮಾಜ ಕಲ್ಯಾಣ ಇಲಾಖೆಯ 27, ಸ್ಥಳೀಯ ಸಂಸ್ಥೆಯ 1, ಅನುದಾನಿತ 45, ಅನುದಾನರಹಿತ 221 ಹಾಗೂ 3 ಮದರಸಾಗಳು ಸೇರಿವೆ. ಒಟ್ಟು 387 ಪ್ರೌಢಶಾಲೆಗಳಿದ್ದು, ಈ ಪೈಕಿ 136 ಸರ್ಕಾರಿ. ಸಮಾಜ ಕಲ್ಯಾಣ ಇಲಾಖೆಯ 18, ಸ್ಥಳೀಯ ಸಂಸ್ಥೆಗಳ 2, ಅನುದಾನಿತ 146, ಅನುದಾನರಹಿತ 83 ಹಾಗೂ ಮದರಸಾಗಳು 2 ಇವೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 2,26,688 ಇದ್ದು, ಈ ಪೈಕಿ 470 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಧ್ವನಿ ಎತ್ತುವರೇ ನಾಯಕರು?
ಕನ್ನಡ ಭಾಷೆಯ ಬಗ್ಗೆ ಭಾಷಣ ಮಾಡುವ ಕನ್ನಡ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಕನ್ನಡ ಭಾಷೆ ಉಳಿದರೆ ಕನ್ನಡ ನಾಡು ಉಳಿಯಲು ಸಾಧ್ಯ ಎಂಬ ಕಟುವಾಸ್ತವ ಮನಗಾಣಬೇಕಿದೆ. ಭಾಷಣ ಮಾಡುವ ಮುನ್ನ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಭಾಷಾ ಪ್ರೇಮ ಮೆರೆಯಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿರುವುದನ್ನು ಪರಿಗಣಿಸಿ ಅನೇಕ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ. ಶಾಲೆಗಳ ಈ ಸ್ಥಿತಿಗೆ ಕನ್ನಡಿಗರಾದ ನಾವೆಲ್ಲರೂ ಕಾರಣ ಎಂಬ ಅರಿವು ಮೂಡಿ, ಪರಿಹಾರ ಸಾಧ್ಯವಾದರೆ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ಸಾರ್ಥಕತೆ ಬರಲು ಸಾಧ್ಯ.

ಕೇವಲ ಸೌಲಭ್ಯಕ್ಕಾಗಿ!
ಸದ್ಯ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ನೀಗಿದೆ. ಬಹುತೇಕ ಶಾಲೆಗಳಲ್ಲಿ ನುರಿತ ಬೋಧಕರೂ ಇದ್ದಾರೆ. ಬೆರಳೆಣಿಕೆ ಶಾಲೆಗಳಲ್ಲಿ ಮಾತ್ರ ಕಲಿಕಾ ಗುಣಮಟ್ಟದಲ್ಲಿ ಕೊರತೆ ಕಂಡುಬಂದಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರು, ಅಲ್ಲಿ ಮಧ್ಯಾಹ್ನದ ಬಿಸಿಯೂಟ, ಸೈಕಲ್, ಸಮವಸ್ತ್ರ ಇತ್ಯಾದಿ ಸೌಲಭ್ಯಗಳ ಬಗ್ಗೆಯೇ ಹೆಚ್ಚು ಆಸಕ್ತರಾಗಿದ್ದಾರೆ. ಇದೇ ಕಾರಣದಿಂದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಳಿಕ ತರಗತಿಗಳೇ ನಡೆಯುವುದಿಲ್ಲ! ಮಕ್ಕಳು ಯೂಟ ಮಾಡಿದ ಮೇಲೆ ಹೊಲ ಮುಂತಾದೆಡೆ ದುಡಿಯಲು ಹೋಗುತ್ತಾರೆ ಎಂದು ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಬೇಸರದಿಂದ ಹೇಳುತ್ತಾರೆ.
 
ಹೈಟೆಕ್ ಸೌಲಭ್ಯ
ಹಳ್ಳಿ ಮಕ್ಕಳನ್ನು ಸೆಳೆಯಲು ಆಂಗ್ಲ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳು ಆಯಾ ಪ್ರದೇಶಗಳಿಗೆ ವಾಹನ ಸೌಕರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಆದರೆ, ಕನ್ನಡ ಶಾಲೆಗಳಿರುವ ಪ್ರದೇಶಗಳಲ್ಲಿ ಸಮರ್ಪಕ ಬಸ್ ಸಂಚಾರ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದು ದಾಖಲಾತಿ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ.

ಸರ್ಕಾರದ ನೀತಿಯೇ ಕಾರಣ?
ಸರ್ಕಾರಿ ಶಾಲೆಗಳು ಇಂಥ ದಯನೀಯ ಸ್ಥಿತಿಗೆ ತಲುಪಲು ಸರ್ಕಾರಗಳ ದ್ವಂದ್ವ ನೀತಿಗಳೇ ಪ್ರಮುಖ ಕಾರಣ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳನ್ನು ಸೆಳೆಯಲು ಯತ್ನಿಸುತ್ತಿರುವ ಸರ್ಕಾರ ಮತ್ತೊಂದೆಡೆ ಸಲೀಸಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಕಡು ಬಡವರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೇ ಸೇರಿಸಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಲು ಇದೇ ಪ್ರೇರಣೆಯಾಗಿದೆ. ಹಳ್ಳಿಗಳಲ್ಲೂ ಕಾನ್ವೆಂಟ್‌ಗಳು ತಲೆ ಎತ್ತುತ್ತಿವೆ. ಇಂಥ ಕಡೆಗಳಲ್ಲಿ ಬಡವರ ಮಕ್ಕಳು ಪುಕ್ಕಟೆ ಪ್ರವೇಶಾವಕಾಶ, ಉಚಿತ ಶಿಕ್ಷಣ, ಮಧ್ಯಾಹ್ನ ಊಟ, ಸೈಕಲ್, ಪುಸ್ತಕ ಇತ್ಯಾದಿ ಸೌಲಭ್ಯಗಳನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರಿ ಶಾಲೆ ಸೇರುವ ಸ್ಥಿತಿ ಉದ್ಭವಿಸಿದೆ.

- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement