ಬಯಲು ಶೌಚ ಮುಕ್ತಕ್ಕೆ ಕೊಪ್ಪಳದಲ್ಲಿ ಸಂಕಲ್ಪ
ಕನ್ನಡಪ್ರಭ ವಾರ್ತೆ, ಕೊಪ್ಪಳ, ನ. 5-
ಜಿಲ್ಲೆಯಲ್ಲಿ 2.66 ಲಕ್ಷ ಮನೆಗಳು ಇವೆ. ಈ ಪೈಕಿ 41 ಸಾವಿರ ಮನೆಗಳಲ್ಲಿ ಶೌಚಾಲಯಗಳಿವೆ. ಇನ್ನು ಕೆಲವರು ಗುಂಪು ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ಆದರೆ, 2.19 ಲಕ್ಷ ಕುಟುಂಬಗಳಿಗೆ ಇನ್ನು ಬಯಲು ಶೌಚಾಲಯವೇ ಗತಿಯಾಗಿದೆ. ಹೀಗಾಗಿ, ಮುಕ್ತಿ ಹಾಡಲು ಮುಂದಾಗಿರುವ ಕೊಪ್ಪಳ ಜಿಲ್ಲಾ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಕೊಪ್ಪಳ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಮಾಡಿದೆ.
ಇದಕ್ಕೆ ಪಣತೊಟ್ಟಿರುವ ಜಿಪಂ ಅಧ್ಯಕ್ಷ ಟಿ. ಜನಾರ್ದನ ಅವರು ಅಭಿಯಾನ ನವೆಂಬರ್ 1ರಿಂದ ಪ್ರಾರಂಭಿಸಿದ್ದು, ಪ್ರಥಮ ವರ್ಷದಲ್ಲಿಯೇ 1 ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿಯೊಂದಿಗೆ ಕಾಮಗಾರಿ ಪ್ರಾರಂಭಿಸಿದ್ದಾರೆ. ನಿರ್ಮಾಣ ಕಾರ್ಯಕ್ಕೆ ಕಾಲಮಿತಿ ಅಳವಡಿಸಲಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಈ ವರ್ಷದ ಗುರಿ ತಲುಪುವುದಕ್ಕೆ ಯತ್ನಿಸಲಾಗುತ್ತಿದೆ.
ಏನಿದು ಯೋಜನೆ?: ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ರು. 4700 ನೀಡುತ್ತಾರೆ. ಆದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ರು. 4500 ಸೇರಿ ರು. 9200 ನೀಡಲಾಗುತ್ತದೆ. ಶೌಚಾಲಯದ ಅಂದಾಜು ವೆಚ್ಚ ರು. 10 ಸಾವಿರ ಆಗುತ್ತದೆ. ಹೀಗಾಗಿ, ಉಳಿದ ರು. 8 ನೂರು ಫಲಾನುಭವಿ ಭರಿಸಿದರೆ ಪ್ರತಿ ಕುಟುಂಬವೂ ಶೌಚಾಲಯವನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಜಿಪಂ ಅಧ್ಯಕ್ಷ ಟಿ. ಜನಾರ್ದನ.
ಬಹುತೇಕ ರೋಗರುಜಿನಗಳಿಗೆ ಬಯಲು ಶೌಚಾಲಯವೇ ಕಾರಣವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಬರ್ಹಿದೆಸೆಗೆ ಹೋಗಲು ರಾತ್ರಿವರೆಗೂ ಕಾಯಬೇಕು. ಬೆಳಗಾಗುವುದರೊಳಗಾಗಿ ಇಲ್ಲವೇ ರಾತ್ರಿಯಾದ ಮೇಲೆಯೇ ಬಯಲಲ್ಲಿ ಶೌಚಕ್ಕೆ ಹೋಗಬೇಕಾದ ಸ್ಥಿತಿ ಇದೆ.
ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ನಾನಾ ರೋಗಗಳಿಗೂ ಕಾರಣವಾಗುತ್ತದೆ. ಅಲ್ಲದೆ, ಗ್ರಾಮದ ಹೊರವಲಯದಲ್ಲಿ ಬಯಲಲ್ಲಿಯೇ ಶೌಚ ಮಾಡುವುದರಿಂದ ಗಲೀಜು ಆಗಿ, ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಈ ಶೌಚಾಲಯ ಅಭಿಯಾನ ಪ್ರಾರಂಭಿಸಲಾಗುವುದು ಎನ್ನುತ್ತಾರೆ.
ಎಲ್ಲರೂ ಕೈಜೋಡಿಸಿ: ಈ ಮಾರ್ಚ್ ಅಂತ್ಯಕ್ಕೆ 1 ಲಕ್ಷ ಶೌಚಾಲಯ ನಿರ್ಮಾಣ ಮಾಡಿದ್ದೇ ಆದಲ್ಲಿ ಮುಂದಿನ ವರ್ಷ ಉಳಿದ ಎಲ್ಲ ಕುಟುಂಬಕ್ಕೂ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ಕಾರಣ ಇದಕ್ಕೆ ಸಾರ್ವಜನಿಕರ ಸಹಾಕರ ತೀರಾ ಅಗತ್ಯ. ಇಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಎಲ್ಲರೂ ಕೈಜೋಡಿಸಿದರೆ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಜಿಪಿಎಸ್: ಈ ಹಿಂದೆ ಅನೇಕ ಬಾರಿ ಸರ್ಕಾರ ಇಂಥ ಶೌಚಾಲಯಗಳನ್ನು ನೀಡಲಾಗಿದ್ದರೂ ಅವುಗಳನ್ನು ಸರಿಯಾಗಿ ಕಟ್ಟಿಯೇ ಇಲ್ಲ. ಕೆಲವರಂತೂ ಕಟ್ಟಿದ ಹಣವನ್ನು ಎತ್ತಿ ಹಾಕಿದ್ದಾರೆ. ಆದರೆ, ಈ ಬಾರಿ ಇದನ್ನು ತಪ್ಪಿಸುವುದಕ್ಕಾಗಿಯೇ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ನಿರ್ಮಾಣದ ಮೂರು ಹಂತಗಳಲ್ಲಿ ಜಿಪಿಎಸ್ ತಪಾಸಣೆ ನಡೆಯುವುದರಿಂದ ಮೋಸ ಮಾಡುವುದಕ್ಕೆ ಅವಕಾಶವೇ ಇಲ್ಲ. ಹಣ ಪಡೆದವರು ಶೌಚಾಲಯ ನಿರ್ಮಾಣ ಮಾಡಲೇಬೇಕು ಎಂದು ಅಧಿಕಾರಿಗಳು ವಿಶ್ಲೇಷಣೆ ಮಾಡುತ್ತಾರೆ.
ನಿರ್ಮಾಣಕ್ಕೆ ಸಂಕಲ್ಪ
ಕೊಪ್ಪಳ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಶೌಚಾಲಯ ನಿರ್ಮಾಣ ಅಭಿಯಾನವನ್ನೇ ಪ್ರಾರಂಭಿಸುತ್ತಿದ್ದು, ಜಾರಿ ಮಾಡುವ ಮೂಲಕ ಜನರ ಬಹು ದೊಡ್ಡ ಸಮಸ್ಯೆ ನೀಗಿಸಲಾಗುತ್ತದೆ. ಅಲ್ಲದೆ, ಸ್ವಚ್ಛತೆಗೆ ನಾಂದಿ ಹಾಡಲಾಗುತ್ತದೆ.
- ಟಿ. ಜನಾರ್ದನ, ಅಧ್ಯಕ್ಷ, ಜಿಪಂ
- ಸೋಮರಡ್ಡಿ ಅಳವಂಡಿ