ಮೌಢ್ಯಕ್ಕೆ ಸಿಗುತ್ತೆ ಶಿಕ್ಷೆ!
ಮೂಢನಂಬಿಕೆ ಆಚರಣೆ ಮಾಡಿದರೆ ಅಥವಾ ಪ್ರಚೋದಿಸಿದರೆ ಜೈಲು ಕಂಬಿ ಎಣಿಸಬೇಕಾದೀತು! ಇಂಥದೊಂದು ಕಾನೂನು ರಾಜ್ಯದಲ್ಲಿ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.5-
ಮೂಢನಂಬಿಕೆ ಆಚರಣೆ ಮಾಡಿದರೆ ಅಥವಾ ಪ್ರಚೋದಿಸಿದರೆ ಜೈಲು ಕಂಬಿ ಎಣಿಸಬೇಕಾದೀತು!
ಇಂಥದೊಂದು ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ. ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಮೂಢನಂಬಿಕೆಗಳನ್ನು ಪ್ರತಿಬಂಧಿಸಲು ರಾಷ್ಟ್ರೀಯ ಕಾನೂನು ಶಾಲೆ ಹಾಗೂ ಸಾಮಾಜಿಕ ಅಧ್ಯಯನ ಕೇಂದ್ರವು ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕರಡು ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ನೀಡಿದೆ.
'ಆಚರಣೆಗಳ ನೆಪದಲ್ಲಿ ಜನರನ್ನು ಮೂಢರನ್ನಾಗಿಸುವ ಪ್ರಯತ್ನಗಳು ನಡೆದಿವೆ. ರಾಜ್ಯದಲ್ಲಿ ಇಂತಹ ಅನಾಚಾರಗಳಿಗೆ ನಿಯಂತ್ರಣ ಹೇರಬೇಕಿದೆ. ಮೂಢನಂಬಿಕೆ ಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ' ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧೇಯಕವನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿಯೇ ಮಂಡಿಸುವುದಾಗಿ ಹೇಳಿದ್ದಾರೆ.
ವಾಮಾಚಾರ, ವಶೀಕರಣ, ಬೆತ್ತಲೆ ಸೇವೆ, ಮಡೆಸ್ನಾನ, ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಜ್ಯೋತಿಷ್ಯ, ವಾಸ್ತುಶಾಸ್ತ್ರ ಸೇರಿದಂತೆ ಸಾಕಷ್ಟು ಆಚರಣೆಗಳನ್ನು ಮೂಢನಂಬಿಕೆಯಲ್ಲಿ ಸೇರಿಸಿ ರಾಜ್ಯ ಸರ್ಕಾರಕ್ಕೆ ವಿಧೇಯಕದ ಕರಡು ಪ್ರತಿ ಸಲ್ಲಿಸಲಾಗಿದೆ. ಮಹಾರಾಷ್ಟ್ರ ಮಾದರಿಯಲ್ಲಿಯೇ ಇಂತಹ ಅನಾಚಾರಗಳಲ್ಲಿ ಭಾಗಿಯಾಗಿರುವವರಿಗೆ 50 ಸಾವಿರ ದಂಡ ಹಾಗೂ 7 ತಿಂಗಳಿಗಿಂತಲೂ ಅಧಿಕ ದಿನದ ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಿದೆ. ಆದರೆ ನರಬಲಿಗೆ ಪ್ರೇರೇಪಿಸುವವರು ಹಾಗೂ ನಡೆಸುವರಿಗೆ ಮರಣ ದಂಡನೆ ಅಥವಾ ಆಜೀವ ಸೆರೆವಾಸ ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಈ ಕಾಯಿದೆ ಜಾರಿಗೆ ಬಂದರೆ ಕೇವಲ ಮೂಢನಂಬಿಕೆ ಆಚರಣೆ ಮಾತ್ರ ಶಿಕ್ಷಾರ್ಹ ಅಪರಾಧವಾಗುವುದಿಲ್ಲ. ಬದಲಾಗಿ ಇಂತಹ ಅನಾಚಾರಗಳಿಗೆ ಪ್ರಚಾರ ನೀಡುವ ಮಾಧ್ಯಮ, ಸಂಘ ಸಂಸ್ಥೆಗಳು ಕೂಡ ಈ ಕಾಯಿದೆಯ ವ್ಯಾಪ್ತಿಗೆ ಬರಲಿವೆ.
ಬೆಳಗಾವಿ ಅಧಿವೇಶನದಲ್ಲಿ: ಕಾನೂನು ಇಲಾಖೆ ಹಾಗೂ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದು ವಿಧೇಯಕದ ಕರಡು ಪ್ರತಿಯನ್ನು ಇನ್ನಷ್ಟು ಅಚ್ಚುಕಟ್ಟಾಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ನ.25ರಿಂದ ಆರಂಭವಾಗುತ್ತಿರುವ ಬೆಳಗಾವಿ ಅಧಿವೇಶನದಲ್ಲಿಯೇ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಸೂಚಿಸಿದ್ದಾರೆ.
ಪ್ರತಿಬಂಧಕ್ಕೆ ವಿಶೇಷ ಪ್ರಾಧಿಕಾರ: ಮೂಢ ಆಚರಣೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರ ರಚಿಸಬೇಕು. ಈ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವ ಜವಾಬ್ದಾರಿಯನ್ನು ರಾಜ್ಯಪಾಲರಿಗೆ ನೀಡಬೇಕು. ಈ ಪ್ರಾಧಿಕಾರವು ಜಾಗೃತ ಸಮಿತಿಗಳ ನೆರವಿನಿಂದ ರಾಜ್ಯದಲ್ಲಿ ಮೂಢನಂಬಿಕೆಯನ್ನು ಪ್ರತಿಬಂಧಿಸಲಿದೆ ಎಂದು ಕರಡು ಪ್ರತಿಯಲ್ಲಿ ಶಿಫಾರಸು ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಜಾಗೃತ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಲಿದ್ದಾರೆ. ಮೂಢನಂಬಿಕೆ ಆಚರಣೆಗಳ ನಿಯಂತ್ರಣಕ್ಕೆ ಜನಾಂದೋಲನ ಮಾಡುವುದು ಹಾಗೂ ಇಂತಹ ಆಚರಣೆಗಳನ್ನು ಬಯಲಿಗೆಳೆಯುವುದು ಈ ಸಮಿತಿಗಳ ಕೆಲಸವಾಗಿರಲಿದೆ. ಇದಲ್ಲದೇ ಮೂಢನಂಬಿಕೆಗೆ ಸಂಬಂಧಿಸಿ ಸಾರ್ವಜನಿಕರಿಂದ ದೂರುಗಳನ್ನು ಈ ಜಾಗೃತ ಸಮಿತಿಯೇ ಪಡೆಯಲಿದೆ.
ಯಾವುದೆಲ್ಲ ಅಪರಾಧ?
-ಪಂಕ್ತಿ ಭೇದ
- ನರಬಲಿ
- ಭೂತೋಚ್ಚಾಟನೆ
- ಅಘೋರಿ ಹಾಗೂ ಸದೃಶ ಆಚರಣೆ
- ದೈವಿ ಪ್ರಶ್ನೆ
- ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವ
- ದೈವ ಅಥವಾ ಆಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆ ಎಂದು ಘೋಷಿಸುವುದು
- ವಾಮಾಚಾರ, ಮಾಟಮಂತ್ರ, ಬಾನಾಮತಿ, ವಶೀಕರಣ
- ಸ್ವದಂಡನೆ ಆಚಾರಣೆಗೆ ಒತ್ತಾಯಿಸುವುದು ಅಥವಾ ಅವಕಾಶ ಕಲ್ಪಿಸುವುದು(ದೆಹಕ್ಕೆ ಕೊಕ್ಕೆ ಚುಚ್ಚಿಕೊಂಡು ನೇತಾಡುವುದು ಹಾಗೂ ರಥವನ್ನು ಎಳೆಯುವುದು)
-ಮಕ್ಕಳ ಆರೋಗ್ಯ ಸುಧಾರಿಸುವ ನೆಪದಲ್ಲಿ ಮುಳ್ಳುಗಳ ಮೇಲೆ ಅಥವಾ ಎತ್ತರದಿಂದ ಎಸೆಯುವುದು
- ಋತುಮತಿ ಅಥವಾ ಗರ್ಭಿಣಿ ಮಹಿಳೆಯರನ್ನು ದೂರ ಇರಿಸುವುದು
- ಸಮಾಜದ ದುರ್ಬಲ ವರ್ಗದ ಮಹಿಳೆಯರ ಮೇಲೆ ಬಣ್ಣದ ನೀರು ಎರಚುವುದು
- ಬೆತ್ತಲೆ ಸೇವೆ
- ಅತಿಮಾನುಷ ಶಕ್ತಿಯ ನೆಪದಲ್ಲಿ ಮಹಿಳೆಯರನ್ನ ಲೈಂಗಿಕವಾಗಿ ಶೋಷಿಸುವುದು
- ಪ್ರಾಣಿಯ ಕತ್ತನ್ನು ಕಚ್ಚಿ ಬಲಿ ಕೊಡುವುದು
- ಮಡೆ ಸ್ನಾನ
- ಜಾತಿ ಅಥಲಾ ಲಿಂಗ ತಾರತಮ್ಯ
- ಪಾದರಕ್ಷೆಗಳನ್ನು ತಲೆಯ ಮೇಲೆ ಹೊರುವುದು
- ಫಲ ಜ್ಯೋತಿಷ್ಯ, ಜಾತಕಫಲ, ಶಕುನ, ಕಾಲನಿರ್ಣಯ, ನ್ಯೂಮರಾಲಜಿ, ಪವಾಡ, ಯಕ್ಷಣಿ ವಿದ್ಯೆ, ಜಾದುಗಾರಿಕೆ
- ಮೌಢ್ಯವನ್ನು ಪ್ರಚೋದಿಸುವ ಜಪಮಾಲೆ, ರುದ್ರಾಕ್ಷಿ, ಮಣಿಸರ, ಹರಳುಗಳ ಮಾರಾಟ
- ಹಸ್ತ ಸಾಮುದ್ರಿಕೆ, ತಾಯತ, ತೋಳ್ಬಳೆ, ಜಾತಕ ಬರಹ, ಕುಂಡಲಿ ಮಾರಾಟ
- ಅಸ್ಪೃಶ್ಯತೆ
- ದೇವದಾಸಿ ಪದ್ಧತಿ
- ಬಾಲ್ಯವಿವಾಹ
-ಅಜಲು ಪದ್ಧತಿ
- ಗೆಜ್ಜೆ ಪೂಜೆ
- ಜಾತಿ ನೆಪದಲ್ಲಿ ಮಡಿ ಮೈಲಿಗೆ
- ಧಾರ್ಮಿಕ ಕಾರ್ಯಗಳಿಗೆ ಪ್ರಾಣಿವಧೆ
- ಮರ್ಯಾದೆ ಹತ್ಯೆ, ಸಾಮಾಜಿಕ ಬಹಿಷ್ಕಾರ
ಜ್ಯೋತಿಷ್ಯಕ್ಕೆ ನಿರ್ಬಂಧ!
ಮೌಢ್ಯಗಳಿಗೆ ಪ್ರಚಾರ ನೀಡುವ ಕಾರ್ಯಕ್ರಮವನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರ ಮಾಡುವುದು ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಲಿದೆ. ಜ್ಯೋತಿಷ್ಯ, ವಾಸ್ತು ಶಾಸ್ತ್ರ ಸೇರಿದಂತೆ ಮೂಢನಂಬಿಕೆ ಪಟ್ಟಿಯಲ್ಲಿರುವ ಯಾವುದೇ ಆಚರಣೆಗೆ ಮಾಧ್ಯಮಗಳು ಪ್ರಚಾರ ನೀಡುವಂತಿಲ್ಲ. ಇದು ಆಕಾಶವಾಣಿ, ಚಲನಚಿತ್ರ. ಪುಸ್ತಕ ಹಾಗೂ ಅಂತರ್ಜಾಲ ಮಾಧ್ಯಮಕ್ಕೂ ಅನ್ವಯವಾಗುತ್ತದೆ.
ನ್ಯಾಯನಿರ್ಣಯಕ್ಕೆ ಕೊಕ್ಕೆ!
ಅಗ್ನಿದಿವ್ಯದ ಮೂಲಕ ಪ್ರಮಾಣ ಮಾಡಿಸುವುದು, ಆರೋಪಿತ ವ್ಯಕ್ತಿಯನ್ನು ಅವೈಜ್ಞಾನಿಕ ಪರಿಕಲ್ಪನೆ ಮೂಲಕ ನ್ಯಾಯ ತೀರ್ಮಾನ ನೀಡುವುದನ್ನು ಈ ವಿಧೇಯಕದಲ್ಲಿ ವಿರೋಧಿಸಲಾಗಿದೆ.