ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸರ್ವಮಂಗಳ

ಭಾರತದ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಕನಸಿನ ಯಾನ ಮಂಗಳವಾರ ಯಶಸ್ವಿಯಾಗಿ ಆರಂಭವಾಗಿದೆ. ಆಂಧ್ರದ ಶ್ರೀಹರಿಕೋಟಾದ...

Mainashree
Updated On : 6 Nov 2013, 1:23 am

ಚೀನಾ, ಜಪಾನ್‌ಗೆ ಮಾಡಲಾಗದ ಸಾಧನೆ ನಾವು ಮಾಡಿದ್ದೇವೆ!, ಚೀನಾದ ಪ್ರಯತ್ನಕ್ಕೆ ಆರಂಭದಲ್ಲೇ ಅಡ್ಡಿಯಾಗಿದ್ದರೆ, ಜಪಾನ್ ಯತ್ನ ಮಧ್ಯದಲ್ಲಿ ವಿಫಲವಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ, ಕಡಿಮೆ ವೆಚ್ಚದಲ್ಲಿ ಮಂಗಳನತ್ತ ನೌಕೆ ಕಳುಹಿಸಿರುವ ಭಾರತ ಯಶಸ್ವಿ ಮುನ್ನುಡಿ ಬರೆದಿದೆ. ಶ್ರೀಹರಿಕೋಟಾದಿಂದ ಮಂಗಳವಾರ ಮಧ್ಯಾಹ್ನ 2.38ಕ್ಕೆ ಹೊರಟಿರುವ ಮಾರ್ಸ್ ಆರ್ಬಿಟರ್, ಮುಂದಿನ ಸೆ.24ಕ್ಕೆ ಮಂಗಳನ ಕಕ್ಷೆ ಪ್ರವೇಶಿಸಲಿದೆ.

ಪಿಟಿಐ ಶ್ರೀಹರಿಕೋಟಾ(ಆಂಧ್ರ) ನ.5 :-
ಭಾರತದ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಕನಸಿನ ಯಾನ ಮಂಗಳವಾರ ಯಶಸ್ವಿಯಾಗಿ ಆರಂಭವಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಮಧ್ಯಾಹ್ನ 2.38ಕ್ಕೆ ಬೆಂಕಿಯುಗುಳುತ್ತ ನಭಕ್ಕೇರಿದ ಭಾರತದ ನಿರೀಕ್ಷೆಗಳ ರಾಕೆಟ್ ಯಶಸ್ವಿಯಾಗಿ ಮಂಗಳನತ್ತ ಪ್ರಯಾಣ ಆರಂಭಿಸಿದೆ. 1,350 ಕೆ.ಜಿ. ತೂಕದ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ25 ರಾಕೆಟ್ ನಿಗದಿಯಂತೆ 44 ನಿಮಿಷಗಳಲ್ಲಿ ಭೂಕಕ್ಷೆಗೆ ಸೇರಿಸಿದೆ. ಈ ಮೂಲಕ 10 ತಿಂಗಳ ಸುದೀರ್ಘ ಮಂಗಳಯಾನದ ಮೊದಲ ಹಂತದ ಪಯಣಕ್ಕೆ ಯಶಸ್ವಿ ಮುನ್ನುಡಿ ಬರೆದಿದೆ. ಉಪಗ್ರಹ ಯಶಸ್ವಿಯಾಗಿ ಭೂಕಕ್ಷೆ ಸೇರಿದ್ದನ್ನು ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ಹೊರಜಗತ್ತಿಗೆ ಘೋಷಿಸಿದರು. ಇಸ್ರೋದ ಪಾಲಿಗಿದು ಐತಿಹಾಸಿಕ ದಿನ ಎಂದು ಅಭಿಪ್ರಾಯಪಟ್ಟರು. ಈ ವೇಳೆ ನಿಯಂತ್ರಣ ಕೊಠಡಿಯಲ್ಲಿದ್ದ ಗಣ್ಯರು, ವಿಜ್ಞಾನಿಗಳು ಹಾಗೂ ತಂತ್ರಜ್ಞರು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು.

10 ನಿಮಿಷದ ಆತಂಕ
ರಾಕೆಟ್ ಯಶಸ್ವಿಯಾಗಿ ಪಯಣ ಆರಂಭಿಸಿದ 20 ನಿಮಿಷದ ಬಳಿಕ ಸುಮಾರು 10 ನಿಮಿಷಗಳ ಕಾಲ ಕಂಟ್ರೋಲ್ ರೂಂನಲ್ಲಿ ಗೊಂದಲ, ಆತಂಕ ಮೂಡಿಸಿತ್ತು. ಮೂರನೇ ಹಂತದಿಂದ ನಾಲ್ಕನೇ ಹಂತಕ್ಕೆ ತೆರೆದುಕೊಳ್ಳುವ ವೇಳೆ ಪಿಎಸ್‌ಎಲ್‌ವಿ- ಸಿ25 ನಿಯಂತ್ರಣ ಕೊಠಡಿಯಲ್ಲಿ ರಾಕೆಟ್‌ನ ಪಥವನ್ನು ಟ್ರ್ಯಾಕ್ ಮಾಡುತ್ತಿದ್ದ ಕಂಪ್ಯೂಟರ್‌ನಿಂದ ಸಂಪರ್ಕ ಕಳೆದುಕೊಂಡದ್ದೇ ಇದಕ್ಕೆ ಕಾರಣ.
ಆದರೆ, ಬಳಿಕ ಶಾಂತ ಸಾಗರದಲ್ಲಿ ಬೀಡುಬಿಟ್ಟಿರುವ ಹಡಗುಗಳಾದ ನಳಂದ ಮತ್ತು ಯಮುನಾದಿಂದ ಬಂದ ಸಂದೇಶ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸಿತು. ರಾಕೆಟ್ ಯಶಸ್ವಿಯಾಗಿ ಭೂಕಕ್ಷೆ ಸೇರಿತ್ತು. ನಳಂದ ಹಾಗೂ ಯಮುನಾ ಹಡಗುಗಳನ್ನು ಪಿಎಸ್‌ಎಲ್‌ವಿ- ಸಿ25ರ ಹಾದಿಯನ್ನು ಟ್ರ್ಯಾಕ್ ಮಾಡಲೆಂದೇ ಶಾಂತ ಸಾಗರಕ್ಕೆ ಕಳುಹಿಸಲಾಗಿದೆ.

ಸವಾಲು ಇನ್ನೂ ಇದೆ
ಉಪಗ್ರಹವನ್ನು ಯಶಸ್ವಿಯಾಗಿ ಭೂಕಕ್ಷೆಗೆ ಕೂರಿಸಿದ ಮಾತ್ರಕ್ಕೆ ಮಂಗಳಯಾನ ಯಶಸ್ಸು ಕಂಡಿತು ಎಂದು ಬೀಗುವಂತಿಲ್ಲ. ಯಾಕೆಂದರೆ ಇದು ಮೊದಲ ಹಂತದ ಯಶಸ್ಸು ಅಷ್ಟೆ. ನ.5ರಷ್ಟೆ ಡಿ.1 ಮತ್ತು ಮುಂದಿನ ವರ್ಷದ ಸೆ.24 ಕೂಡ ಇಸ್ರೋ ಪಾಲಿಗೆ ಮಹತ್ವದ ದಿನಗಳು. ಡಿ.1ರಂದು ರಾತ್ರಿ 12.42ಕ್ಕೆ ಭೂಮಿಯ ಪ್ರಭಾವಳಿಯಿಂದ ತಪ್ಪಿಸಿಕೊಂಡು ಉಪಗ್ರಹ ಕೆಂಪುಗ್ರಹದೆಡೆಗೆ 9 ತಿಂಗಳ ಸುದೀರ್ಘ ಪ್ರಯಾಣ ಆರಂಭಿಸಿದರೆ, ಸೆ.24ಕ್ಕೆ ಮಂಗಳನ ಕಕ್ಷೆ ಪ್ರವೇಶಿಸಲಿದೆ. ಇದಾದ ಬಳಿಕ ಅಷ್ಟು ದೂರದಿಂದ ಉಪಗ್ರಹವು ಮಂಗಳನ ಫೋಟೋ, ಮಾಹಿತಿಗಳನ್ನು ಯಶಸ್ವಿಯಾಗಿ ಭೂಮಿಗೆ ರವಾನಿಸಬೇಕಿದೆ. ಹಾಗಾಗಿ ಮಂಗಳಯಾನದ ಯಶಸ್ಸಿನ ಸಂಭ್ರಮ ಆಚರಿಸಿಕೊಳ್ಳಲು ಭಾರತೀಯರು ಇನ್ನೂ 10 ತಿಂಗಳು ಕಾಯುವುದು ಅನಿವಾರ್ಯ. ಈ ಯೋಜನೆಯ ಸಂಕೀರ್ಣತೆ ಮತ್ತು ಎದುರಾಗಲಿರುವ ಸವಾಲುಗಳನ್ನು ಗಮನಿಸಿದರೆ ಇಸ್ರೋದ ಪಾಲಿಗೆ ಪ್ರತಿದಿನವೂ ಮಹತ್ವದ ದಿನವೇ ಆಗಲಿದೆ. 200 ಮಿಲಿಯನ್ ಮೈಲಿಗಷ್ಟು ಸುದೀರ್ಘ ಪ್ರಯಾಣ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಸ್ವಯಂ ಚಾಲಿತ ರಿಪೇರಿ ವ್ಯವಸ್ಥೆಯನ್ನು ಇಸ್ರೋ ಉಪಗ್ರಹದಲ್ಲಿ ಅಳವಡಿಸಿದೆ.

ಎಲೈಟ್ ಕ್ಲಬ್‌ಗೆ ಭಾರತ
ಮಂಗಳಯಾನ ಯಶಸ್ವಿಯಾದರೆ ಅಂತರ್‌ಗ್ರಹ ಯೋಜನೆ ಕೈಗೆತ್ತಿಕೊಂಡ ಬೆರಳೆಣಿಕೆಯ ದೇಶಗಳ ಸಾಲಿಗೆ ಭಾರತ ಕೂಡ ಸೇರಲಿದೆ. ಮಂಗಳ ಯೋಜನೆಯನ್ನು ಮೊದಲು ಕೈಗೆತ್ತಿಕೊಂಡದ್ದು ಸೋವಿಯತ್ ಒಕ್ಕೂಟ(ರಷ್ಯಾ). 1960ರಲ್ಲಿ ರಷ್ಯಾ ನೌಕೆಯೊಂದನ್ನು ಅಂಗಾರಕನತ್ತ ಕಳುಹಿಸಿಕೊಟ್ಟಿತ್ತು. ಆದರೆ, ಅದು ವಿಫಲವಾಗಿತ್ತು. ಇದಾದ ನಾಲ್ಕು ವರ್ಷದ ಬಳಿಕ ಇದೇ ರೀತಿಯ ಯೋಜನೆ ಕೈಗೆತ್ತಿಕೊಂಡ ಅಮೆರಿಕ ಅದರಲ್ಲಿ ಯಶಸ್ವಿಯೂ ಆಯಿತು. ಇದಾದ ಬಳಿಕ 2003ರಲ್ಲಿ ಯುರೋಪಿನ ಬಾಹ್ಯಾಕಾಶ ಸಂಸ್ಥೆ ಕೂಡ ಮಂಗಳದತ್ತ ಉಪಗ್ರಹ ಕಳುಹಿಸಿಕೊಡುವಲ್ಲಿ ಯಶಸ್ವಿಯಾಯಿತು. 1998ರಲ್ಲಿ ಜಪಾನ್ ಹಾಗೂ 2011ರಲ್ಲಿ ಚೀನಾ ಕೂಡ ಇದೇ ರೀತಿಯ ಪ್ರಯತ್ನ ನಡೆಸಿತ್ತಾದರೂ ಅವು ನಿರಾಸೆ ಕಂಡಿವೆ. ಇಸ್ರೋ ತನ್ನ ಮಂಗಳಯಾನದಲ್ಲಿ ಯಶಸ್ವಿಯಾದರೆ ಕೆಂಪುಗ್ರಹದತ್ತ ಉಪಗ್ರಹ ಕಳುಹಿಸಿದ ರಷ್ಯಾ, ಅಮೆರಿಕ, ಯುರೋಪಿಯನ್ ದೇಶಗಳ ಸಾಲಿಗೆ ಭಾರತವೂ ಸೇರಲಿದೆ.

20 ನಿಮಿಷದಷ್ಟು ವಿಳಂಬ ಸಂವಹನ

ಭೂಮಿ ಮತ್ತು ಮಂಗಳಗ್ರಹದ ನಡುವಿನ ದೂರ ಗಮನಿಸಿದಾಗ     ನಿಯಂತ್ರಣ ಕೊಠಡಿಯಿಂದ ರವಾನಿಸಿದ ಸಂದೇಶವನ್ನು ಉಪಗ್ರಹ ವಿಳಂಬವಾಗಿ ಸ್ವೀಕರಿಸುತ್ತದೆ ಎನ್ನುತ್ತಾರೆ ರಾಧಾಕೃಷ್ಣನ್. ಒಂದು ವೇಳೆ ಉಪಗ್ರಹದಿಂದ ಸಂದೇಶ ವಾಪಸ್ ಬರಬೇಕಾದರೆ 40 ನಿಮಿಷವ್ಯತ್ಯಾಸವಿದೆ.

ಮಂಗಳಯಾನ
ನ 5 ಮಧ್ಯಾಹ್ನ 2.38ಕ್ಕೆ ಶ್ರೀಹರಿಕೋಟದಿಂದ ನಭಕ್ಕೆ ಜಿಗಿದ ಪಿಎಸ್‌ಎಲ್‌ವಿ-ಸಿ25 ರಾಕೆಟ್
ನ 30 ರವರೆಗೆ ಭೂಮಿಗೆ ಅಂಡಾಕಾರದಲ್ಲಿ ಕನಿಷ್ಠ 250 ಕಿ.ಮೀ. ದೂರದಿಂದ ಸುತ್ತು ಆರಂಭಿಸಲಿರುವ ನೌಕೆ. ನ.30ರ ವರೆಗೆ 6 ಸುತ್ತು ಹೊಡೆಯಲಿದೆ ನೌಕೆ.
ನ 16 ಭೂಮಿಯ ಸುತ್ತ ತಿರುಗುತ್ತಿದ್ದ ನೌಕೆಯ ದೂರ 23,500 ಕಿ.ಮೀ.ನಿಂದ 1,92 ಸಾವಿರ ಕೋಟಿ ಕಿ.ಮೀ. ದೂರ(ಭೂಮಿಯಿಂದ ಗರಿಷ್ಠ ದೂರದ ಬಿಂದು) ಕ್ಕೆ ಏರಿಕೆ.
ಡಿ. 1 -    ನೈಜ ಮಂಗಳಯಾನ ಆರಂಭ. ಅಂಗಾರಕನತ್ತ ನೌಕೆಯ ಪಯಣ ಆರಂಭ. 9 ತಿಂಗಳ ಪ್ರಯಾಣದ ಬಳಿಕ ಸೆ.24ರಂದು ಮಂಗಳನ ಸನಿಹ ತಲುಪಲಿದೆ ನೌಕೆ.
-    ಮಂಗಳನ ಕಕ್ಷೆಯೊಳಗೆ ಉಪಗ್ರಹವನ್ನು ಕೂರಿಸುವ ನಿಟ್ಟಿನಲ್ಲಿ ತಗ್ಗಲಿದೆ ರಾಕೆಟ್‌ನ ವೇಗ.
-    ಒಮ್ಮೆ ಅಂಗಾರಕನ ಕಕ್ಷೆಯಲ್ಲಿ ಉಪಗ್ರಹ ಭದ್ರವಾದ ಬಳಿಕ ಕೆಂಪುಗ್ರಹದ ಪ್ರದಕ್ಷಿಣೆ ಆರಂಭ.
-    ಭೂಮಿಗೆ ಮಂಗಳನ ಫೋಟೋ ರವಾನೆ.

ಎಷ್ಟಿರತ್ತೆ ವೇಗ?
ಪಿಎಸ್‌ಎಲ್‌ವಿ ನಭಕ್ಕೆ ಜಿಗಿದ ಬಳಿಕ ಅದರ ವೇಗ ಸೆಕೆಂಡಿಗೆ 9.8 ಕಿ.ಮೀ. ಇರುತ್ತದೆ. ಭೂಮಿಗೆ ಸುತ್ತಿದ ಬಳಿಕ ಒಂಬತ್ತು ತಿಂಗಳ ಪ್ರಯಾಣಕ್ಕಾಗಿ ಅದರ ವೇಗವನ್ನು ಪ್ರತಿ ಸೆಕೆಂಡಿಗೆ 1.55 ಕಿ.ಮೀ.ಗೆ ಹೆಚ್ಚಿಸಲಾಗುತ್ತದೆ. ಉಪಗ್ರಹ ಸೆ.24ರಂದು ಮಂಗಳಗ್ರಹದ ಸಮೀಪ ತಲುಪಿದ ಬಳಿಕ ಅದರ ವೇಗವನ್ನು 1.11 ಕಿ.ಮೀ.ಗೆ ಇಳಿಸಲಾಗುತ್ತದೆ. ಈ ರೀತಿ ವೇಗ ತಗ್ಗಿಸುವ ಮುಖ್ಯ ಉದ್ದೇಶ ಮಂಗಳದ ಕಕ್ಷೆಯಲ್ಲಿ ಉಪಗ್ರಹ ಕೂರಲು ಅವಕಾಶ ಮಾಡಿಕೊಡುವುದು.

ಯಶಸ್ಸಿನ ಹಿಂದಿನ ಕನಸುಗಾರರು...

- ಕೆ. ರಾಧಾಕೃಷ್ಣನ್
ಇಸ್ರೋ ಅಧ್ಯಕ್ಷ: ಉಪಗ್ರಹ, ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುವುದರ ಮಧ್ಯೆ ಸ್ವಲ್ಪ ಸಮಯ ಸಿಕ್ಕರೆ ದೇಶದ ಪ್ರಮುಖ ದೇವಾಲಯಗಳಲ್ಲಿ ಭಕ್ತಿಗೀತೆ ಹಾಡುತ್ತಾ ಮೈಮರೆಯುವವರು ರಾಧಾಕೃಷ್ಣನ್. ಇವರೊಬ್ಬ ಕಥಕ್ಕಳಿ ನೃತ್ಯಪಟುವೂ ಹೌದು. 'ಇಸ್ರೋದ ಕೂಸು' ಮಂಗಳಯಾನವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುವಂತೆ ತಂಡವನ್ನು ಕಟ್ಟಿದವರು ರಾಧಾಕೃಷ್ಣನ್.

- ಸುಬ್ಬಯ್ಯ ಅರುಣನ್
ಮೆಕ್ಯಾನಿಕಲ್ ಎಂಜಿನಿಯರ್- ಕೇವಲ 'ಮಂಗಳ'ದ ಬಗ್ಗೆಯೇ ಕನಸು ಕಾಣುತ್ತಾ ಕಳೆದ 15 ತಿಂಗಳಿಂದ ಸ್ವಲ್ಪವೂ ವಿಶ್ರಾಂತಿ ಪಡೆಯದೇ ಕಾರ್ಯನಿರ್ವಹಿಸಿದವರು ಸುಬ್ಬಯ್ಯ ಅರುಣನ್. ಅವರು ಹೆಚ್ಚಿನ ರಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರದಲ್ಲೇ ಕಳೆದಿದ್ದರು. ಒಂದೆರಡು ಗಂಟೆ ವಿಶ್ರಾಂತಿ ದೊರೆತರೆ ಮನೆಗೆ ತೆರಳಿ ಪೂಜೆ ಮಾಡುತ್ತಾ, ತಮ್ಮ ನೆಚ್ಚಿನ ಜೇಮ್ಸ್ ಬಾಂಡ್ ಸಿನಿಮಾ ನೋಡುತ್ತಿದ್ದರು ಅಷ್ಟೆ.

- ಎಂ. ಅಣ್ಣಾದೊರೈ
ಪ್ರೋಗ್ರಾಂ ಮ್ಯಾನೇಜರ್: ಭಾರತದ 'ಮಿಷನ್ ಮೂನ್‌' ಹೀರೋ. ಚಂದ್ರಯಾನ-1ರ ಹಿಂದಿನ ವ್ಯಕ್ತಿ ಅಣ್ಣಾದೊರೈ ಅವರು ಮಂಗಳಯಾನ ಯೋಜನೆಯ ಪ್ರೋಗ್ರಾಂ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರೂ ರಾತ್ರಿ ಹಗಲೆನ್ನದೇ ದುಡಿದು ಮಂಗಳಯಾನ ಯಶಸ್ವಿಯಾಗಲು ಕಾರಣರಾಗಿದ್ದಾರೆ.

- ಸುಮಾ ಡಿ.ಆರ್.
ಸ್ಯಾಟಲೈಟ್ ಟೆಸ್ಟಿಂಗ್ ಫೆಸಿಲಿಟಿ ಮುಖ್ಯಸ್ಥೆ: ಮಂಗಳಯಾನದ ಕನಸನ್ನು ನನಸು ಮಾಡುವಲ್ಲಿ ಪುರುಷರಷ್ಟೇ ಪಾತ್ರ ಮಹಿಳೆಯರದ್ದೂ ಇದೆ. ಮಹಿಳೆಯರೂ ಬೆಸ್ಟ್ ಮ್ಯಾನೇಜರ್‌ಗಳಾಗುತ್ತಾರೆ ಎಂಬುದನ್ನು ಸುಮಾ ಅವರು ತೋರಿಸಿಕೊಟ್ಟಿದ್ದಾರೆ.

ಗಗನನೌಕೆಯು ಸುರಕ್ಷಿತವಾಗಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಇಸ್ರೋ ಪಾಲಿಗಿದು ಐತಿಹಾಸಿಕ ಮೈಲಿಗಲ್ಲು.
- ಕೆ. ರಾಧಾಕೃಷ್ಣನ್ ಇಸ್ರೋ ಅಧ್ಯಕ್ಷ

ಇಸ್ರೋವು ತನ್ನ ತಂತ್ರಜ್ಞಾನದ ಶಕ್ತಿಯಿಂದ ಮಂಗಳಯಾನದ ವೇಳೆ ಎದುರಾಗುವ ಇನ್ನಷ್ಟು ಸವಾಲುಗಳಲ್ಲೂ ಯಶಸ್ಸು ಕಾಣಲಿ.
- ಅಬ್ದುಲ್ ಕಲಾಂ ಮಾಜಿ ರಾಷ್ಟ್ರಪತಿ

ಉಡ್ಡಯನ ಭಾರತದ ಬಾಹ್ಯಾಕಾಶ ಯೋಜನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಮಹತ್ವದ ಮೈಲಿಗಲ್ಲಾಗಿದೆ.
- ಪ್ರಣಬ್ ಮುಖರ್ಜಿ ರಾಷ್ಟ್ರಪತಿ

ದೀಪಾವಳಿಯಂದು 5 ಸಾವಿರ ಕೋಟಿ ಮೌಲ್ಯದ ಪಟಾಕಿ ಹೊಡೆಯುತ್ತಾರೆ. ಇದಕ್ಕಾಗಿ ಇಷ್ಟು ಖರ್ಚು ಮಾಡುವುದಾದರೆ ಮಂಗಳಯಾನಕ್ಕೆ 450 ಕೋಟಿ ವೆಚ್ಚ ಮಾಡುವುದರಲ್ಲಿ ತಪ್ಪೇನು?
- ಯು.ಆರ್. ರಾವ್ ಇಸ್ರೋ ಮಾಜಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments