ಪಾಕ್‌ನಿಂದ ಫೇಕ್ ನೋಟ್
ಬಾಂಬ್ ಭಯೋತ್ಪಾದನೆಯಾಯ್ತು, ಇದೀಗ ಪಾಕಿಸ್ತಾನ ಭಾರತದ ಮೇಲೆ ಆರ್ಥಿಕ ಭಯೋತ್ಪಾದನೆಗೆ ಮುಂದಾಗಿದೆ.
ಇಸ್ಲಾಮಾಬಾದ್: ಬಾಂಬ್ ಭಯೋತ್ಪಾದನೆಯಾಯ್ತು, ಇದೀಗ ಪಾಕಿಸ್ತಾನ ಭಾರತದ ಮೇಲೆ ಆರ್ಥಿಕ ಭಯೋತ್ಪಾದನೆಗೆ ಮುಂದಾಗಿದೆ.
ಅಂದರೆ ಇದುವರೆಗೆ ಪಾಕಿಸ್ತಾನದಿಂದ ಅಕ್ರಮ ಮಾರ್ಗದಲ್ಲಿ ಖೋಟಾನೋಟು ಸೃಷ್ಟಿಸಿ ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಪಾಕಿಸ್ತಾನ ಸರ್ಕಾರವೇ ಖೋಟಾನೋಟು ಮುದ್ರಣಕ್ಕೆ ಎಲ್ಲಾ ಸಹಾಯ ಮಾಡುವ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ. ಅಂದರೆ ಖೋಟಾನೋಟಿಗೆ ಬಳಕೆಯಾಗುವ ಕಾಗದವನ್ನು ಮತ್ತು ಮುದ್ರಿಸಲು ಬೇಕಾದ ಯಂತ್ರವನ್ನು ಪಾಕಿಸ್ತಾನವೇ ಸರಬರಾಜು ಮಾಡುತ್ತಿರುವ ಅಂಶವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಯಲು ಮಾಡಿದೆ. ಎನ್‌ಐಎ ವಶದಲ್ಲಿರುವ ಖೋಟಾನೋಟುಗಳನ್ನು ಫೊರೆನ್ಸಿಕ್ ಸಂಸ್ಥೆಗೆ ಪರೀಕ್ಷೆಗಾಗಿ ನೀಡಲಾಗಿತ್ತು. ಇದರ ವರದಿ ಪ್ರಕಾರ, ಈ ನೋಟಿಗೆ ಬಳಕೆಯಾಗಿರುವ ಕಾಗದ ಉತ್ಕೃಷ್ಟ ದರ್ಜೆಯದ್ದಾಗಿದೆ.
ಈ ಕಾಗದವನ್ನು ಪಾಕಿಸ್ತಾನದ ನೋಟುಗಳನ್ನು ತಯಾರು ಮಾಡಲು ಬಳಕೆ ಮಾಡಲಾಗುತ್ತಿದೆ ಎಂದು ಎನ್‌ಐಎ ಹೇಳಿದೆ. ಅಲ್ಲದೆ ಖೋಟಾ ನೋಟು ಮುದ್ರಣಕ್ಕೆ ಬಳಕೆ ಮಾಡಲಾಗಿರುವ ಯಂತ್ರ ಅತ್ಯಾಧುನಿಕವಾದದ್ದಾಗಿದೆ. ಇದನ್ನು ಪಾಕಿಸ್ತಾನ ಸರ್ಕಾರವೇ ಒದಗಿಸಿದೆ ಎಂದು ತಿಳಿಸಿದೆ. ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ರಾ, ಗುಪ್ತಚರ ವಿಭಾಗ ಮತ್ತು ಕಂದಾಯ ಗುಪ್ತಚರ ಸಂಸ್ಥೆಗಳು ಸಂಸತ್‌ನ ಹಣಕಾಸು ಮೇಲಿನ ಸ್ಥಾಯಿ ಸಮಿತಿಗೆ ಈ ಬಗ್ಗೆ ವರದಿ ನೀಡಿವೆ.
ಎನ್‌ಐಎ ಹೇಳಿದ್ದೇನು?: ಫಾರೆನ್ಸಿಕ್ ಸಂಸ್ಥೆಯ ಅಧ್ಯಯನದ ಪ್ರಕಾರ, ಖೋಟಾನೋಟುಗಳನ್ನು ಅತ್ಯಂತ ಅತ್ಯಾಧುನಿಕ ಯಂತ್ರವೊಂದರ ಮೂಲಕ ಮುದ್ರಿಸಲಾಗಿದೆ. ಕರೆನ್ಸಿ ಪೇಪರ್‌ಗಳ ದರ್ಜೆಗೆ ಬೇಕಾದ ರೀತಿಯಲ್ಲೇ ಕಾಗದವನ್ನೂ ತಯಾರಿಸಲಾಗಿದೆ. ನೋಟಿನ ಮೇಲಿನ ವಿಂಡೋ ಮತ್ತು ವಾಟರ್‌ಮಾರ್ಕ್ ನೋಡಿದಲ್ಲಿ ಇದಕ್ಕೆ ಬಳಕೆಯಾಗಿರುವುದು ಉತ್ಕೃಷ್ಟ ಕಾಗದವೇ ಎಂಬುದು ಗೊತ್ತಾಗುತ್ತದೆ. ಅಲ್ಲದೆ ಈ ಮುದ್ರಣಕ್ಕೆ ಬಳಕೆ ಮಾಡಿರುವ ಯಂತ್ರವನ್ನು ಸಾಮಾನ್ಯವಾಗಿ ದೇಶವೊಂದರ ಸರ್ಕಾರ ಮಾತ್ರ ಹೊಂದಿರುತ್ತದೆ.
ಮಾರ್ಗಗಳು
- ಪಾಕಿಸ್ತಾನ - ಹಾಂಗ್‌ಕಾಂಗ್ - ಭಾರತ
- ಪಾಕಿಸ್ತಾನ - ಶೇನ್‌ಜೆನ್ - ನೇಪಾಳ - ಭಾರತ
- ಪಾಕಿಸ್ತಾನ - ಹಾಂಗ್‌ಕಾಂಗ್ - ನೇಪಾಳ - ಭಾರತ
-ಪಾಕಿಸ್ತಾನ - ಥೈಲ್ಯಾಂಡ್ - ಭಾರತ
-ಪಾಕಿಸ್ತಾನ - ಮಲೇಷಿಯಾ - ಭಾರತ
-ಪಾಕಿಸ್ತಾನ - ಶ್ರೀಲಂಕಾ - ಭಾರತ