ಭದ್ರತಾ ವಾರ್
ಪಟನಾ ಸ್ಫೋಟದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ವಿಶೇಷ ಭದ್ರತಾ..
-ಈಗಾಗಲೇ ಮೋದಿಗೆ ಎನ್ಎಸ್ಜಿ ಭದ್ರತೆ ಇದೆ: ಕಾಂಗ್ರೆಸ್
ನವದೆಹಲಿ: ಪಟನಾ ಸ್ಫೋಟದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ವಿಶೇಷ ಭದ್ರತಾ ಪಡೆ(ಎಸ್ಪಿಜಿ)ಯಿಂದ ರಕ್ಷಣೆ ಒದಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಹಲವಾರು ಭಯೋತ್ಪಾದಕ ಗುಂಪುಗಳ ಹೆಚ್ಚಿನ ಟಾರ್ಗೆಟ್ ಮೋದಿಯವರೇ ಆಗಿದ್ದಾರೆ. ಇದು ಪಟನಾ ಸ್ಫೋಟದಲ್ಲಿ ಸಾಬೀತಾಗಿದೆ. ಹೀಗಾಗಿ ಪ್ರಧಾನಿಗೆ ನೀಡುವ ಭದ್ರತೆಯನ್ನು ನರೇಂದ್ರ ಮೋದಿ ಅವರಿಗೂ ನೀಡಬೇಕು ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದ್ದಾರೆ.
ಪಟನಾ ರ್ಯಾಲಿ ವೇಳೆ ಬಿಹಾರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಭದ್ರತೆ ವಿಚಾರದಲ್ಲಿ ಭಾರಿ ನಿರ್ಲಕ್ಷ್ಯ ತೋರಿದ್ದವು. ಹೀಗಾಗಿಯೇ ಅಲ್ಲಿ ಬಾಂಬ್ ಸ್ಫೋಟ ನಡೆದಿದೆ. ಅಲ್ಲದೆ ಮೋದಿ ಅವರ ಜೀವಕ್ಕೆ ಅಪಾಯವಿರುವುದರಿಂದ ಎಸ್ಪಿಜಿ ಭದ್ರತೆ ಒದಗಿಸಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಆದರೆ ಬಿಜೆಪಿಯ ಈ ಆಗ್ರಹವನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಈಗಾಗಲೇ ಮೋದಿಗೆ ಎನ್ಎಸ್ಜಿ ಭದ್ರತೆ ಒದಗಿಸುತ್ತಿದ್ದೇವೆ. ಇದಕ್ಕಿಂತ ಹೆಚ್ಚಿನ ಭದ್ರತೆ ಬೇಕಾಗಿಲ್ಲ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಆರ್.ಪಿ.ಎನ್. ಸಿಂಗ್ ಹೇಳಿದ್ದಾರೆ. ಈ ಸಂದರ್ಭದಲ್ಲೇ ಅವರು 1991ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಬೆಂಬಲಿತ ಸರ್ಕಾರ, ರಾಜೀವ್ ಗಾಂಧಿಗೆ ಎಸ್ಐ ಮಟ್ಟದ ಭದ್ರತೆಯನ್ನೂ ನೀಡಿರಲಿಲ್ಲ. ಈಗ ಮಾತ್ರ, ಮೋದಿಗೆ ಎಸ್ಪಿಜಿ ಭದ್ರತೆ ಬೇಕು ಎಂದು ಕೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮೋದಿಗೆ ಭದ್ರತೆ ನೀಡಬೇಕಾದರೆ ಕಾನೂನು ಬದಲಿಸಬೇಕು. ಇದು ಬಿಜೆಪಿ ಗೊತ್ತಿದೆ ಎಂದಿದೆ. ಇನ್ನು ಮುಂದೆ ಮೋದಿ ರ್ಯಾಲಿಗಾಗಿ ತೆರಳುವ ರಾಜ್ಯಗಳಲ್ಲಿ ವಿಶೇಷ ಭದ್ರತೆ ಒದಗಿಸುವಂತೆಯೂ ಸೂಚನೆ ನೀಡಲಾಗಿದೆ.
ಮೋದಿಗೆ ಎಸ್ಪಿಜಿ ಭದ್ರತೆ ಒದಗಿಸಬೇಕು. ಅವರ ಜೀವಕ್ಕೆ ಎಷ್ಟು ಅಪಾಯ ಇದೆ ಎಂದು ಪಟನಾ ಘಟನೆಯಿಂದ ಗೊತ್ತಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಎಸ್ಪಿಜಿ ಕಾಯ್ದೆಗೆ ತಿದ್ದುಪಡಿ ತರಬೇಕು.
- ಕಿರಣ್ ಬೇಡಿನಿವೃತ್ತ ಐಪಿಎಸ್ ಅಧಿಕಾರಿ
ಕಾಲಿಗೆ ಚಪ್ಪಡಿ ಎಳೆದುಕೊಂಡ ಆರ್ಪಿಎನ್ ಸಿಂಗ್
ಮೋದಿಗೆ ಎಸ್ಪಿಜಿ ಭದ್ರತೆ ಬೇಕು ಎಂದು ಕೇಳಿದ್ದ ಬಿಜೆಪಿಗೆ ತಿರುಗೇಟು ನೀಡಲು ಹೋಗಿ ಗೃಹ ಇಲಾಖೆಯ ಸಹಾಯಕ ಸಚಿವ ಆರ್.ಪಿ.ಎನ್. ಸಿಂಗ್ ಪೇಚಿಗೆ ಸಿಲುಕಿದ್ದಾರೆ. ರಾಜೀವ್ ಗಾಂಧಿ ಹತ್ಯೆಯಾದಾಗ ಅವರಿಗೆ ಎಸ್ಐ ಮಟ್ಟದ ಭದ್ರತೆಯನ್ನೂ ಬಿಜೆಪಿ ಬೆಂಬಲಿಸಿದ್ದ ಸರ್ಕಾರ ನೀಡಿರಲಿಲ್ಲ. ಇದರಿಂದಾಗಿಯೇ ಅವರ ಹತ್ಯೆಯಾಗಿತ್ತು ಎಂದು ಹೇಳಿದ್ದರು. ಆದರೆ ಈ ಮಾಹಿತಿಯನ್ನು ತಪ್ಪಾಗಿ ನೀಡಿ, ಕಾಂಗ್ರೆಸ್ ಅನ್ನೂ ಪೇಚಿಗೆ ಸಿಲುಕಿಸಿದ್ದಾರೆ. 1991ರಲ್ಲಿ ಇದ್ದದ್ದು ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ್ ಅವರ ಸರ್ಕಾರ. ಚುನಾವಣೆ ಎದುರಾದಾಗ ಕಾಂಗ್ರೆಸ್, ಬೆಂಬಲ ವಾಪಸ್ ಪಡೆದಿತ್ತು. ಬಳಿಕ ಶ್ರೀಪೆರಂಬದೂರಿನಲ್ಲಿ ರ್ಯಾಲಿ ನಡೆಸುತ್ತಿದ್ದ ವೇಳೆ ಎಲ್ಟಿಟಿಇ ಬಾಂಬ್ ದಾಳಿಯಿಂದಾಗಿ ರಾಜೀವ್ಗಾಂಧಿ ಹತರಾಗಿದ್ದರು.
ಎಸ್ಪಿಜಿ ಭದ್ರತೆ ಯಾರಿಗೆ?
- ಡಾ.ಮನಮೋಹನ್ ಸಿಂಗ್
- ಸೋನಿಯಾ ಗಾಂಧಿ
- ರಾಹುಲ್ ಗಾಂಧಿ
- ಪ್ರಿಯಾಂಕಾ ವಾಧ್ರಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.