ಸ್ಪೀಡ್ ಪೋಸ್ಟಲ್ಲಿ ಬಂತು 12 ಜಿನ ವಿಗ್ರಹ
ಮಂಗಳೂರು: ಮೂಡುಬಿದರೆ ಜೈನಬಸದಿಯ ಕೋಟ್ಯಂತರ ಮೌಲ್ಯದ 12 ವಿಗ್ರಹಗಳು ಸ್ಪೀಡ್ ಪೋಸ್ಟ್ ಪಾರ್ಸೆಲ್ ಮೂಲಕ ಪೊಲೀಸ್ ಕಮಿಷನರ್ ಕಚೇರಿಗೆ ತಲುಪಿದೆ.
ಕೊಹಿನೂರು ವಜ್ರಕ್ಕಿಂತಲೂ ದೊಡ್ಡದಾದ ವಜ್ರದ ಚಂದ್ರಪ್ರಭಾ ಸ್ವಾಮಿ ವಿಗ್ರಹವೂ ಪಾರ್ಸೆಲ್ನಲ್ಲಿತ್ತು. ಛತ್ತೀಸ್ಗಡದಿಂದ ನ.2ರಂದು ಪೋಸ್ಟ್ ಮಾಡಲಾಗಿತ್ತು. ದೀಪಾವಳಿ, ಭಾನುವಾರ ಸಹಿತ ಸತತ ರಜೆಗಳ ಬಳಿಕವೂ 5ರಂದು ಸಂಜೆ 4 ಗಂಟೆಗೆ ಮಂಗಳೂರು ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಜೈನಬಸದಿ ಸಿದ್ಧಾಂತ ಮಂದಿರದ 20 ವಿಗ್ರಹಗಳನ್ನು ವಾಪಸ್ ಜೈನಮಠಕ್ಕೆ ನೀಡುವಲ್ಲಿ ಕೊನೆಗೂ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ವಜ್ರದ ಚಂದ್ರಪ್ರಭಾ ಸ್ವಾಮಿ, ಗಜಮುತ್ತು, ಸ್ಫಟಿಕದ ಸಿದ್ಧಪರಮೇಷ್ಠಿ, ಸ್ಫಟಿಕ ರತ್ನದ ಮುನಿಸುವೃತ ಸ್ವಾಮಿ, ಪಚ್ಚೆಕಲ್ಲಿನ ಅರಹಂತಪರಮೇಷ್ಠಿ, ನೀಲ ರತ್ನದ ಮುನಿಸುವೃತ ಸ್ವಾಮಿ, ನೀಲ ರತ್ನದ ಅರಹಂತ, ಸ್ಫಟಿಕ ರತ್ನದ ಅರನಾಥ ಪರಮೇಷ್ಠಿ, ಪಚ್ಚೆಕಲ್ಲು ಪಾರ್ಶ್ವನಾಥ, ನೀಲರತ್ನ ಮಲ್ಲಿನಾಥ, ಸ್ಫಟಿಕ ರತ್ನದ ಸಿದ್ದ ಪರಮೇಷ್ಠಿ ಕುಳಿತ ಭಂಗಿ, ಸ್ಫಟಿಕ ರತ್ನದ ಸಿದ್ಧ ಪರಮೇಷ್ಠಿ ಮೂರ್ತಿಗಳು ಪಾರ್ಸಲ್ ಮೂಲಕ ತಲುಪಿವೆ.
ಪರಿಶೀಲನೆ: 12 ವಿಗ್ರಹ ಮತ್ತು ಬೆಳ್ಳಿ ಪೀಠ, ಸ್ಫಟಿಕ ಮತ್ತು ನೀಲದ ಸಣ್ಣ ಚೂರುಗಳು ದೊರೆತಿವೆ. ಪಾರ್ಸೆಲ್ ಕಳುಹಿಸಿದವರು ಯಾರು ಎಂಬುದನ್ನು ತನಿಖೆ ಮಾಡಿ ಪರಿಶೀಲಿಸುತ್ತೇವೆ ಎಂದು ಕಮಿಷನರ್ ಮನೀಶ್ ಕರ್ಬಿಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಬಿಐ ತನಿಖೆ ಇಲ್ಲ
ಬಹುಕೋಟಿ ಮೌಲ್ಯದ ರತ್ನಖಚಿತ, ಚಿನ್ನ, ಬೆಳ್ಳಿ, ಪಂಚ ಲೋಹದ ವಿಗ್ರಹ ಕಳವು ಪ್ರಕರಣವನ್ನು ನಮ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿಯೇ ಪತ್ತೆ ಮಾಡಿದ್ದಾರೆ. ಉಳಿದ 12 ವಿಗ್ರಹ ಕಳ್ಳತನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಚಿಂತನೆ ನಡೆಸಿದ್ದೆವು. ಇದೀಗ ಉಳಿದ ವಿಗ್ರಹಗಳು ದೊರೆತಿದ್ದರಿಂದ ಸಿಬಿಐಗೆ ಪ್ರಕರಣ ಒಪ್ಪಿಸುವ ಅಗತ್ಯವೇ ಬೀಳುವುದಿಲ್ಲ.
- ಕೆ.ಜೆ.ಜಾರ್ಜ್, ಗೃಹ ಸಚಿವ