2 ಗಂಟೆ 10 ನಿಮಿಷದಲ್ಲಿ ಚಿತ್ರೀಕರಣ: ಗಿನ್ನೆಸ್ ದಾಖಲೆ
ಹೊಸಪೇಟೆ: ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ವಿಶ್ವವಿಖ್ಯಾತ ಹಂಪಿಯಲ್ಲಿ ಗುರುವಾರ ಕನ್ನಡ ಚಲನಚಿತ್ರ 'ನಮಸ್ತೆ ಇಂಡಿಯಾ' ಚಿತ್ರದ ಚಿತ್ರೀಕರಣ ಕೇವಲ 2 ಗಂಟೆ 10 ನಿಮಿಷದಲ್ಲಿ ಒಂದೇ ಟೇಕ್ ಆ್ಯಂಡ್ ಕಟ್‌ನೊಂದಿಗೆ ಸಂಪೂರ್ಣಗೊಳಿಸಲಾಯಿತು.
ವಿಜಯವಿಠಲ ದೇವಸ್ಥಾನ ಸೇರಿದಂತೆ ಹಂಪಿಯ ಸುತ್ತಮುತ್ತಲಿನ ಪರಿಸರದಲ್ಲಿ ನಮಸ್ತೆ ಇಂಡಿಯಾ ಚಿತ್ರ ತಂಡ ಒಂದೆ ಬಾರಿಗೆ ಚಿತ್ರೀಕರಣ ಮಾಡುವ ಮೂಲಕ ಕನ್ನಡ ಚಲನಚಿತ್ರವೊಂದು ಕಡಿಮೆ ಅವಧಿ (2 ತಾಸು, 10 ನಿಮಿಷ)ಯಲ್ಲಿ ಚಿತ್ರೀಕರಣಗೊಂಡು ಗಿನ್ನೆಸ್ ದಾಖಲೆ ಪುಟ ಸೇರುತ್ತಿದೆ. ನಾಯಕ ನಟನಾಗಿ ಸೈಕೋ ಚಿತ್ರ ಖ್ಯಾತಿಯ ಧನುಷ್ ನಟಿಸಿದ್ದು, ಕರಾಟೆ ಮಾಸ್ಟರ್ ಮತ್ತು ಪ್ರವಾಸಿಗರಿಗೆ ಗೈಡ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಟೋಪಿವಾಲಾ ಚಿತ್ರದ ನಾಯಕಿ ಮೈತ್ರಿಯಾ ಈ ಚಿತ್ರದಲ್ಲೂ ನಾಯಕಿ. ಇವರ ಜತೆಗೆ ಚಿತ್ರದಲ್ಲಿ ನೆ.ಲ. ನರೇಂದ್ರಬಾಬು ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಡಿಮೆ ಸಮಯದಲ್ಲಿ ಚಿತ್ರಕರಣ ಮಾಡಲು 50ಕ್ಕೂ ಹೆಚ್ಚು ಸಲ ಚಿತ್ರೀಕರಣದ ರಿಹರ್ಸಲ್ ನಡೆಸಿದ್ದ ಚಿತ್ರತಂಡ ಗುರುವಾರ 2 ಗಂಟೆ 10 ನಿಮಿಷದಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಸಿತು. ಗುಣವಂತ ಚಿತ್ರ ಖ್ಯಾತಿಯ ಮಂಜುನಾಥ್ ನಮಸ್ತೆ ಇಂಡಿಯಾ ಚಿತ್ರಕ್ಕೆ ಮೊದಲ ಭಾರಿಗೆ ನಿರ್ದೇಶಕರಾಗಿದ್ದಾರೆ. ಕನ್ನಡ ನಾಡಿನ ಮಹತ್ವ ಮತ್ತು ಕರಾಟೆ ಮೂಲಕ ಯುವ ಜನಾಂಗಕ್ಕೆ ನೈತಿಕ ಸ್ಥೈರ್ಯ ತುಂಬುವ ಕಥಾ ಸಾರಾಂಶವನ್ನು ಈ ಚಿತ್ರ ಹೊಂದಿದೆ.