ಕಬ್ಬು ದರ ಪ್ರತಿಭಟನೆ ಜೋರು
ಕಬ್ಬು ದರ ನಿಗದಿಗೆ ಆಗ್ರಹಿಸಿ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ,...
ಕನ್ನಡಪ್ರಭ ವಾರ್ತೆ, ಬೆಳಗಾವಿ, ನ.7-
ಕಬ್ಬು ದರ ನಿಗದಿಗೆ ಆಗ್ರಹಿಸಿ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ, ಹೆದ್ದಾರಿ ತಡೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟವನ್ನು ತೀವ್ರಗೊಳಿಸಿರುವ ರೈತರು ಗುರುವಾರ ಮುಧೋಳದಲ್ಲಿನ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದರು.
ಪಟ್ಟಣದಲ್ಲಿರುವ ಲೋಕೋಪಯೋಗಿ, ನೀರಾವರಿ, ಕಂದಾಯ, ಬಿಎಸ್‌ಎನ್‌ಎಲ್, ತಾಲೂಕು ಪಂಚಾಯ್ತಿ, ಪುರಸಭೆ, ಅಬಕಾರಿ, ಶಿಶು ಅಭಿವೃದ್ಧಿ, ಭೂಮಾಪನ, ಕೃಷಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಚೇರಿಗೆ ಬೀಗ ಹಾಕಲಾಗಿತ್ತು. ಬಳಿಕ ರೈತರು ಮತ್ತು ಕಬ್ಬು ಬೆಳೆಗಾರರು ಪಾದಯಾತ್ರೆ ನಡೆಸಿತು. ಇದೇ ರೀತಿ, ಮಹಾಲಿಂಗಪುರದಲ್ಲೂ ಕೆಪಿಟಿಸಿಎಲ್, ಜಿಎಲ್‌ಬಿಸಿ, ಪುರಸಭೆ, ಎಪಿಎಂಸಿ, ಬಿಎಸ್‌ಎನ್‌ಎಲ್, ಅಂಚೆ ಕಚೇರಿಗಳಿಗೆ ಬೀಗ ಜಡಿಯಲಾಗಿತ್ತು. ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲೇ ರೈತರು ಅಡುಗೆ ಮಾಡಿ ಬಿಸಿಲಲ್ಲೇ ಕುಳಿತು ಊಟ ಸೇವಿಸಿದರು. ಸರ್ಕಾರ ಕಬ್ಬಿಗೆ ಬೆಲೆ ಘೋಷಿಸಿದ ಬಳಿಕ ನೆರಳಲ್ಲಿ ಕುಳಿತು ಊಟ ಸೇವಿಸುವುದಾಗಿ ರೈತರು ತಿಳಿಸಿದರು.
ಇಲಕಲ್, ಜಮಖಂಡಿಯಲ್ಲಿ ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಯಿತು. ಬಿಜಾಪುರದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಮುಧೋಳದಲ್ಲಿ ಬಸ್‌ಗೆ ಕಲ್ಲು
ಗುರುವಾರ ಸಂಜೆ ಮುಧೋಳ ತಹಸೀಲ್ದಾರ್ ಕಚೇರಿ ಬಳಿ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗೆ ಕಲ್ಲು ತೂರಿದ್ದು ಕಿಟಕಿ ಗಾಜು ಪುಡಿಯಾಗಿದೆ. ಈ ಸಂದರ್ಭದಲ್ಲಿ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ರೈತರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಘಟಪ್ರಭಾ, ಕಾಗವಾಡ, ಹಿಡಕಲ್ ಡ್ಯಾಂ ಸೇರಿದಂತೆ ಹಲವೆಡೆ ರಸ್ತೆ ತಡೆ ನಡೆಯಿತು.
ಜನಪ್ರತಿನಿಧಿಗಳ ಮನೆ ಮುಂದೆ ಧರಣಿಗೆ ನಿರ್ಧಾರ
ಸರ್ಕಾರ ಕಬ್ಬಿಗೆ ಸೂಕ್ತ ಬೆಲೆ ಘೋಷಿಸದಿದ್ದಲ್ಲಿ ಶುಕ್ರವಾರ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರ ಮನೆ ಎದುರು ಧರಣಿ ನಡೆಸಲು ಬಾಗಲಕೋಟೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದು, ರೈತರು ಶುಕ್ರವಾರ ಮುಂಜಾನೆಯೇ ಬುತ್ತಿ ಕಟ್ಟಿಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ರೈತ ಮುಖಂಡ ಮುತ್ತಣ್ಣ ಕೋಮಾರ ತಿಳಿಸಿದ್ದಾರೆ.
ಇಂದು ಸಕ್ಕರೆ ಸಚಿವರ ಮನೆಗೆ ಮುತ್ತಿಗೆ
ಕಬ್ಬು ಬೆಳೆಗಾರರು ಹೋರಾಟ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದು, ಶನಿವಾರ ಬೆಳಗಾವಿಯ ಟಿಳಕವಾಡಿಯಲ್ಲಿರುವ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ. ಹಾಗೆಯೇ ಶುಕ್ರವಾರ ರಸ್ತೆ ತಡೆ ಮುಂದುವರಿಯಲಿದೆ.
ಕಬ್ಬಿಗೆ ಶೀಘ್ರ ಬೆಂಬೆಲೆ: ಸಿಎಂ
ಬೆಂಗಳೂರು: ಕಬ್ಬು ಬೆಳೆಗೆ ಶೀಘ್ರವೇ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಬೆಂಬಲ ಬೆಲೆ ನಿಗದಿ ಮಾಡಲು ಸಚಿವ ಸಂಪುಟ ಉಪ ಸಮಿತಿ ಸೇರಿದಂತೆ ಉನ್ನತ ಮಟ್ಟದ ಸಭೆ 2 ಬಾರಿ ನಡೆದಿದೆ. ಶೀಘ್ರವೇ ಅಂತಿಮ ಸಭೆ ನಡೆಸಿ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ಗುರುವಾರ ತಿಳಿಸಿದರು.
ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಸಭೆ ನಡೆಯಬೇಕಿದೆ. ಅಲ್ಲಿ ತೀರ್ಮಾನವಾಗುವವರೆಗೆ ರೈತರು ಶಾಂತ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.