ಗಣೇಶಂಗೂ ಡಿಸಿ ಜಾಫರ್ ವಿಘ್ನ
ಫೇಸ್‌ಬುಕ್‌ನಲ್ಲಿ ರಾಮ, ಸೀತೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ ನಂತರ ಕ್ಷಮೆ ಕೋರಿರುವ ಬೀದರ್ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಮಂಡ್ಯ...
ಕನ್ನಡಪ್ರಭ ವಾರ್ತೆ, ಮಂಡ್ಯ, ನ.7-
ಫೇಸ್‌ಬುಕ್‌ನಲ್ಲಿ ರಾಮ, ಸೀತೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ ನಂತರ ಕ್ಷಮೆ ಕೋರಿರುವ ಬೀದರ್ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಮಂಡ್ಯ ಜಿಲ್ಲಾಧಿಕಾರಿಯಾಗಿದ್ದಾಗಲೂ ಡಿಸಿ ನಿವಾಸದ ಆವರಣದಲ್ಲಿದ್ದ ಗಣೇಶ ವಿಗ್ರಹ ಮುಚ್ಚಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು.
ಜಾಫರ್ ಅವರು ಮಂಡ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ತಕ್ಷಣವೇ ಮಾಡಿದ ಮೊದಲ ಕೆಲಸವೆಂದರೆ, ತಮ್ಮ ಧರ್ಮದಲ್ಲಿ ವಿಗ್ರಹ ಪೂಜೆಗೆ ಅವಕಾಶವೇ ಇಲ್ಲ ಎಂಬುದನ್ನು ತೋರಿಸಿಕೊಡಲು ಮುಂದಾದರು. ಆ ಹಿನ್ನೆಲೆಯಲ್ಲಿ ಡಿಸಿ ನಿವಾಸದ ಒಳ ಆವರಣದ ಅರಳಿ ಮರದ ಕೆಳಗೆ ಇದ್ದ ಗಣೇಶನ ವಿಗ್ರಹವನ್ನು ರಟ್ಟಿನಿಂದ ಮುಚ್ಚಿಸಿದ್ದರು. ಆದರೆ, ಗಣೇಶ ವಿಗ್ರಹವನ್ನು ಒಡೆದು ಹಾಕಿದ್ದಾರೆ ಎಂದು ಸುದ್ದಿಯಾಗಿತ್ತು.
ಈ ಸಂಗತಿ ಮಾಧ್ಯಮದವರಿಗೆ ತಿಳಿಯುತ್ತಿದ್ದಂತೆ ಸುದ್ದಿ ಮಾಡಲು ಹೋದ ವರದಿಗಾರರಿಗೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಬೆದರಿಕೆ ಹಾಕಿ ಕಳುಹಿಸಿದ್ದರು.
ಮುಜರಾಯಿ ಹೊಣೆ ಸಿಇಓ ಹೆಗಲಿಗೆ: ಜಾಫರ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಮುಜರಾಯಿ ಇಲಾಖೆಯ ಎಲ್ಲಾ ಜವಾಬ್ದಾರಿಗಳನ್ನು ಜಿಪಂ ಸಿಇಒ ಆಗಿದ್ದ ಜೆ. ಜಯರಾಂ ಅವರಿಗೆ ಸರ್ಕಾರವೇ ವಹಿಸಿತ್ತು. ಮುಸ್ಲಿಂ ಅಧಿಕಾರಿಗಳಿಗೆ ಹಿಂದೂ ದೇವಾಲಯಗಳ ನಿರ್ವಹಣೆ, ಆಡಳಿತ ಮಾಡಲು ಅವಕಾಶವಿಲ್ಲ ಎಂಬ ಕಾನೂನು ಮೊದಲಿನಿಂದಲೂ ಇದೆ. ಈ ಕಾರಣಕ್ಕಾಗಿ ಜಾಫರ್ ಮುಜರಾಯಿ ಇಲಾಖೆಯ ಜವಾಬ್ದಾರಿಯಿಂದಲೇ ದೂರ ಉಳಿದಿದ್ದರು. ಹೀಗಿದ್ದಾಗ್ಯೂ, ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವದಲ್ಲಿ ರತ್ನ ಖಚಿತ ವೈರಮುಡಿಯನ್ನು ಗಂಟು ಬಿಚ್ಚಿ ಜನರಿಗೆ, ಕ್ಯಾಮರಾಗಳಿಗೆ ಫೋಜು ನೀಡಿದ್ದರು. ಅವರ ಈ ನಡೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಜಾಫರ್ ಬಳಿಕ ಜಿಲ್ಲಾಧಿಕಾರಿಯಾಗಿ ಬಂದ ಕೃಷ್ಣಯ್ಯನವರು ಗಣೇಶ ವಿಗ್ರಹಕ್ಕೆ ರಟ್ಟಿನಿಂದ ಮುಕ್ತ ದೊರಕಿಸಿದ್ದಾರೆ. ನಿತ್ಯ ಪೂಜೆ ಕೂಡಾ ಮಾಡಲಾಗುತ್ತಿದೆ ಎಂದು ಡಿಸಿ ನಿವಾಸದ ಮೂಲಗಳು ತಿಳಿಸಿವೆ.
ನನ್ನಿಷ್ಟದಂತೆ ಮಾಡಿದ್ದೇನೆ
ಡಿಸಿ ನಿವಾಸ ಸಂಪೂರ್ಣವಾಗಿ ನನ್ನ ಸುಪರ್ದಿಯಲ್ಲಿದೆ. ಇಲ್ಲಿ ಯಾರಿಗೂ ಪ್ರವೇಶವಿಲ್ಲ. ನಾನು ಯಾವ ಧರ್ಮದವನು ಮತ್ತು ಯಾವ ಧರ್ಮವನ್ನು ವಿರೋಧಿಸುತ್ತೇನೆ, ಪ್ರೀತಿಸುತ್ತೇನೆ ಎಂಬುದನ್ನು ತೋರಿಸುವುದು ಮುಖ್ಯವಲ್ಲ. ಮೂರ್ತಿ ಪೂಜೆ ಬೇಕು ಮತ್ತು ಬೇಡ ಎಂದು ನಿರ್ಧರಿಸುವ ವ್ಯಕ್ತಿ ಇಲ್ಲಿ ನಾನೇ. ಹೀಗಾಗಿ ನನ್ನಷ್ಟದಂತೆ ಮಾಡಿದ್ದೇನೆ. ಯಾವುದನ್ನೂ ತೋರಿಸಲು ಅವಕಾಶವೇ ಇಲ್ಲ ಎಂದು ಅಂದು ಜಾಫರ್ ಮಾಧ್ಯಮಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಈ ಹೇಳಿಕೆಗಳು ಪತ್ರಿಕೆ ಹಾಗೂ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕೂಡಲೇ ಸಾರ್ವಜನಿಕರು, ಹಿಂದೂ ಪರ ಸಂಘಟನೆಗಳು ಉಗ್ರವಾಗಿ ಪ್ರತಿಕ್ರಿಯೆ ನೀಡಿ, ಹೋರಾಟದ ಹಾದಿ ತುಳಿಯಲು ಮುಂದಾಗಿದ್ದರು. ಕೂಡಲೇ ಜಾಫರ್ ಅವರು, ಗಣೇಶನ ವಿಗ್ರಹವನ್ನು ಒಡೆಸಿ ಹಾಕಿಲ್ಲ. ಬದಲಿಗೆ ರಟ್ಟಿನಿಂದ ಮುಚ್ಚಿಸಿದ್ದೇನೆ ಎಂದು ಹೇಳಿದ್ದರು. ಇದಕ್ಕೂ ಸಾರ್ವಜನಿಕರ ವಿರೋಧವಿತ್ತು. ನಂತರ ಜಿಲ್ಲಾಧಿಕಾರಿಗಳ ಕಾಂಪೌಂಡ್ ಎತ್ತರವನ್ನೇ ಹೆಚ್ಚಿಸಿ ಒಳಗೆ ಏನಾಗುತ್ತದೆ ಎಂಬುದನ್ನು ಅರಿಯದಂತೆ ಮಾಡಿದರು.
- ಕೆ.ಎನ್.ರವಿ