ವಿಧೇಯಕ ಮೌಢ್ಯಕ್ಕೆ ಸೆಡ್ಡು
ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ಕರಡು ವಿಧೇಯಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.7-
ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ಕರಡು ವಿಧೇಯಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರತಿಪಕ್ಷಗಳೂ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿಧೇಯಕ ಮಂಡನೆಗೆ ಅವಕಾಶ ನೀಡದಿರಲು ಬಿಜೆಪಿ ನಿರ್ಧರಿಸಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ವಿಧೇಯಕದ ವಿರುದ್ಧ ಕಿಡಿ ಕಾರಿದ್ದಾರೆ. ವಿಧೇಯಕವನ್ನು ವಿರೋಧಿಸಿರುವ ರಾಜ್ಯದ ನಾಲ್ವರು ಮಾಜಿ ಮುಖ್ಯಮಂತ್ರಿಗಳು, ಬೀದಿಗೆ ಇಳಿದು ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸುತ್ತ ಸೇರಿಕೊಂಡಿರುವ ಕೆಲ ಸ್ವಘೋಷಿತ ವಿಚಾರವಾದಿಗಳು ಮೌಢ್ಯ ತಡೆ ಹೆಸರಿನಲ್ಲಿ ಜಾತಿ- ಜಾತಿಗಳ ನಡುವೆ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಮತ ರಾಜಕಾರಣಕ್ಕಾಗಿ ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿಕಟ್ಟುತ್ತಿದ್ದಾರೆ. ಇಂಥ ವಿಧೇಯಕ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷಗಳು ಗುಡುಗಿವೆ.
ಬಕೆಟ್ ಹಿಡಿವ ಬುದ್ಧಿಜೀವಿಗಳು
ಮೌಢ್ಯ ಪ್ರತಿಬಂಧಕ ವಿಧೇಯಕದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗಿದ್ದಾರೆ. ಬುದ್ಧಿಜೀವಿಗಳು ಅಥವಾ ವಿಚಾರವಾದಿಗಳನ್ನು ಕಟ್ಟಿಕೊಂಡು ಸರ್ಕಾರ ನಡೆಸುವುದಕ್ಕೆ ಸಾಧ್ಯವಿಲ್ಲ.
ಯಾರೋ ನಾಲ್ಕು ಬುದ್ಧಿಜೀವಿಗಳನ್ನು ಕಟ್ಟಿಕೊಂಡು ಸರ್ಕಾರ ಜನರ ನಂಬಿಕೆಗಳನ್ನು ಹಾಳು ಮಾಡಲು ಹೊರಟಿದೆ. ಈ ಬುದ್ಧಿಜೀವಿಗಳು ಎನಿಸಿಕೊಂಡವರ ಕತೆ ಏನೆಂದು ಎಲ್ಲರಿಗೂ ಗೊತ್ತಿದೆ. ಇವರೆಲ್ಲ ಯಾರ್ಯಾರ ಅಧಿಕಾರಾವಧಿಯಲ್ಲಿ ಯಾರ್ಯಾರಿಗೆ ಬಕೆಟ್ ಹಿಡಿದಿದ್ದಾರೆ, ಯಾರ್ಯಾರನ್ನು ಹೊಗಳುತ್ತಾರೆ ಎಂಬುದು ಗೊತ್ತು. ಇಂಥವರನ್ನು ಕಟ್ಟಿಕೊಂಡು ಜನರ ನಂಬಿಕೆ ಹಾಳು ಮಾಡುವ ಬದಲು ಬಡವರ ಕಲ್ಯಾಣ ಕಾರ್ಯಕ್ರಮಗಳ ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ನೀಡಲಿ.
-ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ
ಬುದ್ಧಿ ಇಲ್ಲದವರು...
ಹಿಂದೂ ಧರ್ಮದಲ್ಲಿರುವ ಎಲ್ಲ ನಂಬಿಕೆಗಳನ್ನು ಮೂಢನಂಬಿಕೆ ಎಂದು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ವಿಚಾರವಾದಿಗಳಿಗೆ ಅಧಿಕಾರ ಕೊಟ್ಟವರು ಯಾರು? ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಬೆನ್ನಿಹಿನ್ ಕಾರ್ಯಕ್ರಮದಲ್ಲಿ ಕಾಲು ಇಲ್ಲದವರಿಗೆ ಕಾಲು, ಕೈ ಇಲ್ಲದವರಿಗೆ ಕೈ ನೀಡುವಂತೆ ಪ್ರಾರ್ಥಿಸಲಾಗಿತ್ತು. ಅದೇ ಮಾದರಿಯಲ್ಲಿ ನಾನು ಬುದ್ಧಿ ಇಲ್ಲದ ಬುದ್ಧಿ ಜೀವಿಗಳಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುದ್ಧಿ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
- ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ
ಸ್ವಘೋಷಿತ ಬುದ್ಧಿಜೀವಿಗಳ ಕೆಲಸ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ. ಹೀಗಾಗಿ ಅವರು ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುತ್ತಾ ಜನರ ಗಮನ ಬೇರೆ ಕಡೆ ತಿರುಗಿಸುವ ಕೆಲಸದಲ್ಲಿ ಮುಳುಗಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂಥ ವಿಧೇಯಕ ಜಾರಿಗೆ ನಾವು ಅವಕಾಶ ನೀಡುವುದಿಲ್ಲ. ಈ ಸರ್ಕಾರಕ್ಕೆ ಕಬ್ಬಿಗೆ ದರ ನಿಗದಿ ಮಾಡುವ ತಾಕತ್ತಿಲ್ಲ. ಕೆಲ ಸ್ವಘೋಷಿತ ಬುದ್ಧಿ ಜೀವಿಗಳು ಸಿದ್ದರಾಮಯ್ಯನವರ ತಲೆಗೆ ಸಲ್ಲದ ವಿಚಾರಗಳನ್ನು ತುಂಬುತ್ತಿದ್ದಾರೆ.
- ಜಗದೀಶ ಶೆಟ್ಟರ್
ಮಾಜಿ ಮುಖ್ಯಮಂತ್ರಿ
ಕರಾಳ ಶಾಸನಗಳಲ್ಲಿ ಒಂದು
ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಹೊರಟಿದ್ದಾರೆ. ಮೌಢ್ಯ ಪ್ರತಿಬಂಧಕ ಕಾನೂನು ಈ ದೇಶ ಕಂಡ ಅತ್ಯಂತ ಕರಾಳ ಶಾಸನಗಳಲ್ಲಿ ಒಂದು.
ಈಗ ಮೌಢ್ಯ ನಿಷೇಧ ಮಾಡುತ್ತೇನೆ ಎಂದು ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದೆ ಹೆಂಡತಿಗೆ ಕಟ್ಟಿದ ತಾಳಿಯನ್ನೂ ಕಿತ್ತು ಹಾಕುವಂತಹ ಕಾನೂನನ್ನು ಜಾರಿಗೆ ತರುತ್ತಾರೆಯೇ?
ಪಾದಪೂಜೆ ಬೇಡ ಎನ್ನುವವರು ಮನೆಯಲ್ಲಿ ಅವರ ಹೆಂಡತಿ- ಮಕ್ಕಳು ದೇವರ ಪೂಜೆ ಮಾಡುವುದನ್ನು ನಿಷೇಧಿಸುತ್ತಾರೆಯೇ? ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವ ಈ ಕರಾಳ ಶಾಸನವನ್ನು ನಾನು ವಿರೋಧಿಸುತ್ತೇನೆ.
ಈ ಕಾನೂನು ಜಾರಿಗೆ ತಂದರೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಕ್ರಾಂತಿಯಾಗುತ್ತದೆ.
- ಬಿ.ಎಸ್.ಯಡಿಯೂರಪ್ಪ, ಕೆಜೆಪಿ ರಾಜ್ಯಾಧ್ಯಕ್ಷ
ಸ್ವಾಸ್ಥ್ಯ ಕೆಡಿಸುವ ಪ್ರಯತ್ನ
ಮೌಢ್ಯ ಪ್ರತಿಬಂಧಕ ಕಾನೂನನ್ನು ಜಾರಿಗೆ ತರಲು ಬಿಡುವುದಿಲ್ಲ. ಇದು ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತದ್ದು. ವಿಧಾನಮಂಡಲ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಇದು ಸಮಾಜದಲ್ಲಿ ವಿಷಬೀಜ ಬಿತ್ತುವ ಮತ್ತು ಸ್ವಾಸ್ಥ್ಯ ಕೆಡಿಸುವ ಪ್ರಯತ್ನ.
- ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ