ಕಾವೇರಿ; ತ.ನಾಡು ಮತ್ತೆ ಕ್ಯಾತೆ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಅಗತ್ಯಕ್ಕಿಂತಲೂ ಹೆಚ್ಚು ನೀರು ಪಡೆದುಕೊಂಡಿದ್ದರೂ ತಮಿಳುನಾಡು ಮಾತ್ರ ತನ್ನ ಕ್ಯಾತೆ ಪ್ರವೃತ್ತಿ ಬಿಟ್ಟಿಲ್ಲ.
ಶುಕ್ರವಾರ ಇಲ್ಲಿ ನಡೆದ ಕಾವೇರಿ ನಿಗಾ ಸಮಿತಿ ಸಭೆಯಲ್ಲಿ ಮತ್ತೆ ಕಾವೇರಿ ನಿಯಂತ್ರಣಾ ಮಂಡಳಿಯನ್ನು ಬೇಗ ರಚಿಸಬೇಕು ಎಂದು ಒತ್ತಾಯಿಸಿದೆ. ಜತೆಗೆ ಕಾವೇರಿ ಕಣಿವೆಯಲ್ಲಿ ಕರ್ನಾಟಕ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಆಗ್ರಹಿಸಿದೆ. ಆದರೆ, ಸುಪ್ರೀಂ ಕೋರ್ಟ್ ರಚಿಸಿರುವ ಕಾವೇರಿ ನಿಗಾ ಸಮಿತಿ ವ್ಯಾಪ್ತಿಗೆ ತಮಿಳುನಾಡು ಪ್ರಸ್ತಾಪಿಸಿದ ಯಾವ ಅಂಶಗಳೂ ಬಾರದಿರುವುದರಿಂದ ಈ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿಲ್ಲ.
ಸಭೆಯಲ್ಲಿ ತಮಿಳುನಾಡು ಮಾತ್ರ ಎಂದಿನಂತೆ ತನ್ನ ಹಳೆ ಬೇಡಿಕೆಗಳನ್ನು ಪುನರುಚ್ಚರಿಸಿತು. ಸಭೆಯಲ್ಲಿ ಮಾತನಾಡಿದ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು, 'ಪ್ರಸಕ್ತ ಜಲ ವರ್ಷದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 22 ಟಿಎಂಸಿ ಹೆಚ್ಚು ನೀರು ಹರಿದಿದೆ' ಎಂಬ ಮಾಹಿತಿ ನೀಡಿದರು.
ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಕರ್ನಾಟಕವು ತಮಿಳುನಾಡಿಗೆ 192 ಟಿಎಂಸಿ ನೀರು ಹರಿಸಬೇಕು. ಪ್ರಸಕ್ತ ಜಲ ವರ್ಷದಲ್ಲಿ ಈಗಾಗಲೇ 214 ಟಿಎಂಸಿ ನೀರು ಹರಿದಿದೆ ಎಂದು ತಿಳಿಸಿದರು. ಕಾವೇರಿ ನಿಯಂತ್ರಣ ಮಂಡಳಿ ರಚನೆ ಮತ್ತು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದೆಂಬ ತಮಿಳುನಾಡಿನ ಒತ್ತಾಯಗಳು ಪ್ರಸ್ತುತ ಕಾವೇರಿ ನಿಗಾ ಸಮಿತಿ ವ್ಯಾಪ್ತಿಗೆ ಬಾರದಿರುವುದರಿಂದ ಕರ್ನಾಟಕ ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡಲಿಲ್ಲ.
ಸುಪ್ರೀಂ ಕೋರ್ಟ್ ರಚಿಸಿರುವ ಕಾವೇರಿ ನಿಗಾ ಸಮಿತಿಯು ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿಯುವ ಪ್ರಮಾಣದ ಮೇಲೆ ನಿಗಾ ಇಡಲಿದೆ. ಮತ್ತು ಆಗಾಗ ಸುಪ್ರೀಂ ಕೋರ್ಟ್ ಮಾಹಿತಿ ನೀಡಲಿದೆ. ಪ್ರಸಕ್ತ ಜಲ ವರ್ಷದಲ್ಲಿ ಉತ್ತಮ ಮಳೆಯಾಗಿದ್ದು, ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು ಹರಿದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಮಿಳುನಾಡು ಕಾವೇರಿ ನೀರಿಗಾಗಿ ತೆಗೆಯುವ ಕ್ಯಾತೆಗಳೆನ್ನಿದ್ದರೂ ಸಾಂಕೇತಿಕ ಅಷ್ಟೆ. ಜಲಸಂಪನ್ಮೂಲ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ನಿಗಾ ಸಮಿತಿ ಸಭೆಯಲ್ಲಿ ಕರ್ನಾಟಕ ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ಮುಖ್ಯಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.