ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊನೆಗೂ ಹೊರಬಿತ್ತು ಪಿಡಿಒಗಳ ಆಯ್ಕೆ ಪಟ್ಟಿ

Mainashree
Updated On : 8 Nov 2013, 10:03 am

ಕ.ಪ್ರ.ವಾರ್ತೆ  ಮೈಸೂರು  ನ. 8
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಯ್ಕೆ ಮಾಡಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ಪಟ್ಟಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಪಂಚಾಯತ್‌ರಾಜ್ ನಿರ್ದೇಶಕರು ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಸೂಚಿಸಿದ್ದಾರೆ.
ಆದರೆ ಈ ನೇಮಕಾತಿ ರಾಜ್ಯ ಹೈಕೋರ್ಟ್ ಹಾಗೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ರಿಟ್ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತು ವಿಧಿಸಲಾಗಿದೆ. ಪಿಡಿಒ ಆಯ್ಕೆಯಲ್ಲಿ ಕೆಪಿಎಸ್‌ಸಿ ಅಕ್ರಮಗಳನ್ನು ನಡೆಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪಟ್ಟಿ ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೆಪಿಎಸ್‌ಸಿಯಿಂದ ಆಯ್ಕೆಯಾಗಿರುವ ಪಿಡಿಒಗಳ ಪಟ್ಟಿಯನ್ನು ಈಗಾಗಲೇ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೇ ಆಯಾ ಜಿಪಂ ವ್ಯಾಪ್ತಿಯ ಆಯ್ಕೆ ಪಟ್ಟಿಯನ್ನು ಸಿಇಒಗಳಿಗೆ ಕಳುಹಿಸಿದೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಳಿಸಬೇಕಾಗಿರುವುದರಿಂದ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ಪಂಚಾಯತ್‌ರಾಜ್ ನಿರ್ದೇಶಕ ಕೆ. ಯಾಲಕ್ಕಿಗೌಡ ಸೂಚಿಸಿದ್ದಾರೆ.
ಡಿ.20ರೊಳಗೆ ವರದಿ ಮಾಡಿಕೊಳ್ಳಲಿ: ನ.15ರೊಳಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪಡೆಯಲು ಕ್ರಮ ವಹಿಸಬೇಕು. ನ.15 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಸ್ಥಳದಲ್ಲಿಯೇ ಸಿಂಧುತ್ವ ಪ್ರಮಾಣಪತ್ರ ಕೊಡಿಸಬೇಕು. ಅಗತ್ಯವಿದ್ದಲ್ಲಿ ಅಂತಿಮ ದಿನಾಂಕವನ್ನು ನ.30ರವರೆಗೆ ವಿಸ್ತರಿಸಬಹುದು. ಡಿ.2-3 ರಂದು ಎಲ್ಲ ದಾಖಲಾತಿಗಳ ಅಂತಿಮ ಪರಿಶೀಲನೆ ನಡೆಸಿ, ಡಿ.4 ರಂದು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಕಳುಹಿಸಬೇಕು. ಡಿ.20 ರೊಳಗೆ ಜಿಪಂಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ತಿಳಿಸಬೇಕು. ಈಗಾಗಲೇ ಸರ್ಕಾರಿ ಸೇವೆಯಲ್ಲಿದ್ದು, ನೇಮಕಾತಿ ನಿಯಮಾನುಸಾರ ಅರ್ಜಿ ಸಲ್ಲಿಸಿ, ಆಯ್ಕೆಯಾಗಿರುವ ಅಭ್ಯರ್ಥಿಗಳು ಮಾತೃ ಇಲಾಖೆಯಿಂದ ಕರ್ತವ್ಯದಿಂದ ಮುಕ್ತಿಗೊಳ್ಳಲು ಕಾಲಾವಕಾಶ ಬೇಕಿರುವುದರಿಂದ ಅಂಥವರಿಗೆ ಮಾತ್ರ ರಿಯಾಯ್ತಿ ನೀಡಬಹುದು ಎಂದು ತಿಳಿಸಲಾಗಿದೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement