ಬೇಲೆಕೇರಿ: ಸಿಬಿಐನಿಂದ ಎಫ್‌ಐಆರ್
ಬೇಲೆಕೇರಿ ಬಂದರಿನಿಂದ ಅಕ್ರಮ ರಫ್ತು ಪ್ರಕರಣ ತನಿಖೆ ಚುರುಕುಗೊಳಿಸಿರುವ ಸಿಬಿಐ, 15 ಕಂಪನಿ, 5 ಪಾಲುದಾರಿಕೆ ಸಂಸ್ಥೆಗಳು...
ಕನ್ನಡಪ್ರಭ ವಾರ್ತೆ ಬಳ್ಳಾರಿ ನ.8
ಬೇಲೆಕೇರಿ ಬಂದರಿನಿಂದ ಅಕ್ರಮ ರಫ್ತು ಪ್ರಕರಣ ತನಿಖೆ ಚುರುಕುಗೊಳಿಸಿರುವ ಸಿಬಿಐ, 15 ಕಂಪನಿ, 5 ಪಾಲುದಾರಿಕೆ ಸಂಸ್ಥೆಗಳು, 2 ಸ್ವಯಂ ಮಾಲೀಕತ್ವ ಗಣಿ ಕಂಪನಿಗಳು ಹಾಗೂ ಸಂಬಂಧಿಸಿದ 50 ಜನರ ಮೇಲೆ ಎಫ್‌ಐಆರ್ ಸಲ್ಲಿಸಲಾಗಿದೆ.
ಬಹುಕೋಟಿ ಹಣವಾಗಿರುವ ಈಪ್ರಕರಣವನ್ನು ಸಿಬಿಐ ಆರ್ಥಿಕ ಅಪರಾಧ ದಳ ತನಿಖೆ ನಡೆಸುತ್ತಿದ್ದು, ಆರೋಪಿತ ಕಂಪನಿಗಳು ಒಟ್ಟು 21 ಲಕ್ಷ ಮೆಟ್ರಿಕ್ ಟನ್ ಅದರನ್ನು ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ರಫ್ತು ಮಾಡಲಾಗಿದೆ. ಇದಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಿಬಿಐನ ಆರ್ಥಿಕ ಅಪರಾಧ ದಳ ವಿಚಾರಣೆಗೆ ಒಳಪಡಿಸಲಿದೆ.
21 ಲಕ್ಷ ಮೆಟ್ರಿಕ್ ಟನ್ ಅಕ್ರಮ ರಫ್ತು: ಬಳ್ಳಾರಿ ಜಿಲ್ಲೆಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಅದಿರು ಸಾಗಿಸಿ, ರಫ್ತು ಮಾಡಿದ್ದು, ಸಿಇಸಿ ವರದಿ ಆಧಾರದ ಮೇಲೆ ಸಿಬಿಐ ವಿಚಾರಣೆ ಕೈಗೆತ್ತಿಕೊಂಡಿದೆ. ಜ.2009ರಿಂದ ಮಾರ್ಚ್ 2010ರವರೆಗೆ ಬೇಲೆಕೇರಿ ಬಂದರಿನಿಂದ ಪರವಾನಗಿ ಇಲ್ಲದೆ ಅಕ್ರಮವಾಗಿ 50.79 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸಾಗಿಸಲಾಗಿದೆ. ಅದರಲ್ಲಿ 22 ಕಂಪನಿಗಳು 50 ಸಾವಿರಕ್ಕಿಂತ ಹೆಚ್ಚು ಮೆಟ್ರಿಕ್ ಟನ್ ಅದಿರನ್ನು ಸಾಗಿಸಿವೆ. ಈ ಪೈಕಿ 21 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರೆ, ಇನ್ನು 39 ಕಂಪನಿಗಳು 50 ಸಾವಿರಕ್ಕಿಂತ ಕಡಿಮೆ ಅದಿರನ್ನು ಪರವಾನಗಿ ಇಲ್ಲದೆ ರಫ್ತುಮಾಡಿವೆ.
4 ಕಾಯ್ದೆಯಡಿ ಪ್ರಕರಣ: 22 ಕಂಪನಿಗಳು ಹಾಗೂ 50 ಜನರ ಮೇಲೆ ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988, ಮೈನ್ಸ್ ಆ್ಯಂಡ್ ಮಿನರಲ್ಸ್ ಡೆವಲಪ್‌ಮೆಂಟ್ ರೆಗ್ಯುಲೇಷನ್ ಆ್ಯಕ್ಟ್ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963ರಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್, ಕಂದಾಯ, ಸಾರಿಗೆ ಇಲಾಖೆ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗುತ್ತದೆ.
ಯಾವ ಯಾವ ಕಂಪನಿಗಳು?: ಮಿನರಲ್ ಎಂಬಿಸಿ-ಐಎಲ್‌ಸಿ ಸೋಮಶೇಖರ್ ಅವರು ಸಹಾಯಕ ನಿರ್ದೇಶಕಿ ಪದ್ಮಾ, ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್- ಖಾರದಪುಡಿ ಮಹೇಶ್, ಎಂಎಸ್‌ಪಿಎಲ್-ರಾಹುಲ್ ಬಲ್ಡೋಟ, ಶ್ರೇಣಿಕ ಬಲ್ಡೋಟ, ಅದಾನಿ ಎಂಟರ್‌ಪ್ರೈಸಸ್-ಗೌತಮ್ ಅದಾನಿ, ಟ್ವಿಂಟಿ ಫಸ್ಟ್ ಸೆಂಚುರಿ ವೈರ್ ರೋಡ್ಸ್ ಲಿಮಿಟೆಡ್-ವಿನೋದ್ ಗೋಯೆಲ್, ಭಾರತ ಮೈನ್ಸ್ ಆ್ಯಂಡ್ ಮಿನರಲ್ಸ್-ದಿನೇಶ್ ಸಿಂಘ್ವಿ, ವಿಎಸ್‌ಎಲ್ ಮೈನಿಂಗ್ ಕಂಪನಿ-ಅನಿಲ್ ಲಾಡ್, ಆರತಿ ಲಾಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂಪನಿ-ಪ್ರಿಯದರ್ಶಿನಿ ಶೀನುಬಾಬು, ಗ್ರೀನ್ ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿ-ಅಜಯ್ ಕಾರಬಂದ, ಅಕ್ಷಿತ ಮಿನರಲ್ಸ್ ಪ್ರೈ.ಲಿ-ಸೂಗೂರು ಗುರುನಾಥ್, ಆನೆಗುಂದಿ ನಾರಾಯಣಸ್ವಾಮಿ ಶ್ರೀನಿವಾಸ, ಸ್ವಸ್ತಿಕ್ ಸ್ಟೀಲ್ಸ್ ಪ್ರೈ.ಲಿ-ಸ್ವಸ್ತಿಕ್ ನಾಗರಾಜ್. ಈಗಲ್ ಟ್ರೇಡರ್ಸ್ ಆ್ಯಂಡ್ ಲಾಜಿಸ್ಟಿಕ್-ಬಿ. ನಾಗೇಂದ್ರ, ಸ್ಟೀರ್ ಓವರ್‌ಸೀಸ್ ಪ್ರೈ.ಲಿ- ಜಗದೀಶ್ ಮಿಶ್ರಾ, ಸೌರವ್ ಮಿಶ್ರಾ, ಸೋಹನ್ ಮಿಶ್ರಾ, ಅಲ್‌ಪೈಲ್ ಇಂಟರ್‌ನ್ಯಾಷನಲ್-ಗಗನ್ ಶುಕ್ಲ, ನರ್ಸಸ್ ಕಾಫಿ ಕಂಪನಿ ಪ್ರೈ.ಲಿ-ಪಿ. ಶಿವನಾಥಂ, ರಾಜ್‌ಕಮಲ್ ಸಿಲ್ಕ್ಸ್, ಎಚ್‌ಎಲ್‌ಎಲ್ ಲೈಫ್ ಕೋರ್ ಲಿ, ಎಸ್ಮಾರಾಲ್ಡ್ ಇಂಟರ್‌ನ್ಯಾಷನಲ್, ಎಸ್‌ವಿಎಂ ನೆಟ್ ಪ್ರೊಜೆಕ್ಟ್, ದಕ್ಷ ಮಿನರಲ್ಸ್ ಆ್ಯಂಡ್ ಮರೈನ್ ಪ್ರೈ.ಲಿ, ಅರ್ಷದ್ ಎಕ್ಸ್‌ಪೋರ್ಟ್, ಪ್ರಿಟೆಂಕ್ಸ್ ಎಕ್ಸ್‌ಪೋರ್ಟ್ ಇಂಡಿಯಾ ಪ್ರೈ.ಲಿ. ಕೊಲ್ಕತ್ತಾ ಮತ್ತು ಪ್ರಿಂಟೆಕ್ಸ್ ಎಕ್ಸ್‌ಪೋರ್ಟ್ ಇಂಡಿಯಾ. ಇವುಗಳ ಹೊರತಾಗ್ಯೂ ಗೋವಾ, ಮುಂಬೈ, ಸೇಲಂ, ಹರ್ಯಾಣ ಪ್ರದೇಶದಲ್ಲಿ ಕೆಲವೊಂದು ಕಂಪನಿಗಳಿದ್ದು, ಇಲ್ಲಿಯೂ ಸಿಬಿಐ ತನಿಖೆ ನಡೆಸಲಿದೆ.
ದೇಶಾದ್ಯಂತ ತನಿಖೆ
ಈಗಾಗಲೇ ಆರ್ಥಿಕ ಅಪರಾಧ ದಳದ ಮುಂಬೈ, ಚೆನ್ನೆ ೈ ಹಾಗೂ ದೆಹಲಿ ಸಿಬಿಐ ಕಚೇರಿಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮುಂಬೈ ಇಒಡಬ್ಲ್ಯುನ ಡಿಐಜಿ ಮಹೇಂದ್ರ ಪ್ರಿಯದರ್ಶಿನಿ, ಮುಂಬೈನ ತೇನಿ ಮೋಳಿ ಹಾಗೂ ಬೆಂಗಳೂರಿನ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವ ಹಾಗೂ ಸಿಬಿಐ ಹೆಚ್ಚುವರಿ ನಿರ್ದೇಶಕ ರೂಪಕುಮಾರ್ ದತ್ತ ಅವರು ಮೇಲುಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಸಿಬಿಐ ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಉತ್ತರ ಭಾರತದ ಘಟಾನುಘಟಿಗಳೂ ಸೇರಿದ್ದಾರೆ.
ಶಶಿಧರ ಮೇಟಿ